ಯುವಕನೋರ್ವ ಹೆತ್ತ ತಾಯಿಯನ್ನು ಹತ್ಯೆಗೈದ ಘಟನೆ ಕೇರಳದ ಕೋಝಿಕ್ಕೋಡ್ ಜಿಲ್ಲೆಯ ತಾಮರಶ್ಶೇರಿಯಲ್ಲಿ ಜನವರಿ 18ರಂದು ನಡೆದಿದೆ. “ತನಗೆ ಜನ್ಮ ನೀಡಿದ್ದಕ್ಕೆ ಹತ್ಯೆ ಮಾಡಿದೆ” ಎಂದು ಯುವಕ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಝುಬೈದಾ ಕಾಯಿಕ್ಕಲ್ ಮೃತ ಮಹಿಳೆ. ಜನವರಿ 19 ಭಾನುವಾರ ಅದಿವಾರಂ ಟೌನ್ ಜುಮಾ ಮಸ್ಜಿದ್‌ನಲ್ಲಿ ಝುಬೈದಾ ಅವರ ಅಂತ್ಯ ಸಂಸ್ಕಾರ ನೆರವೇರಿದೆ.
ಕಳೆದ 23 ವರ್ಷಗಳ ಹಿಂದೆಯೇ ಪತಿಯಿಂದ ವಿಚ್ಛೇದನ ಪಡೆದಿದ್ದ ಝುಬೈದಾ ಅವರು, ಬ್ರೈನ್ ಟ್ಯೂಮರ್ (ಮೆದುಳಿನ ಗೆಡ್ಡೆ) ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದರು. ಈ ನಡುವೆ ಹೆತ್ತ ಮಗನಿಂದ ಹತ್ಯೆಯಾಗಿದ್ದಾರೆ.
ಜನವರಿ 18ರಂದು ಮಧ್ಯಾಹ್ನ ಝುಬೈದಾ ಅವರು ಪುತ್ತುಪ್ಪಾಡಿಯ ತನ್ನ ಸಹೋದರಿಯ ಮನೆಯಲ್ಲಿ ಒಂಟಿಯಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಮಗ ಆಶಿಕ್ ತೆಂಗಿನ ಕಾಯಿ ಸುಲಿಯಲೆಂದು ಪಕ್ಕದ ಮನೆಯಿಂದ ಹರಿತವಾದ ಕತ್ತಿ ತಂದು ತಾಯಿ ಮೇಲೆ ದಾಳಿ ಮಾಡಿದ್ದಾನೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜೀವನ್ಮರಣ ಹೋರಾಟದಲ್ಲಿದ್ದ ಝುಬೈದಾ ಅವರನ್ನು ಸ್ಥಳೀಯರು ಮತ್ತು ಧಾವಿಸಿ ಬಂದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ಮರಣ ಹೊಂದಿದ್ದಾರೆ. ನಂತರ ಮೃತದೇಹವನ್ನು ಕೋಝಿಕ್ಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದು ವಿಧಿವಿಧಾನಗಳನ್ನು ಪೂರೈಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಅಶಿಕ್ ಹಣ ಮತ್ತು ಆಸ್ತಿಗಾಗಿ ತಾಯಿಯನ್ನು ಪೀಡಿಸುತ್ತಿದ್ದ. ತನ್ನ ತಾಯಿಯನ್ನು ಕೊಲ್ಲುವುದಾಗಿ ಊರಿಡೀ ಹೇಳಿಕೊಂಡು ತಿರುಗಾಡುತ್ತಿದ್ದ. ಆತ ಈ ಹಿಂದೆಯೂ ಎರಡ್ಮೂರು ಬಾರಿ ತಾಯಿಯ ಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದ ದಿನವೇ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಆಶಿಕ್ ಮಾದಕ ವ್ಯಸನಿಯಾಗಿದ್ದು, ವಿವಿಧ ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದಿದ್ದ. ಆದರೆ, ಆತ ಮಾದಕ ವಸ್ತುಗಳ ಪ್ರಭಾವದಲ್ಲಿ ಕೊಲೆ ಮಾಡಿದ್ದಾನೆಯೇ ಎಂಬುದನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ.
ಕೇರಳ | ಶರೋನ್ ರಾಜ್ ಕೊಲೆ ಪ್ರಕರಣ : ಗೆಳತಿ ಗ್ರೀಷ್ಮಾಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ


