ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಜಯಪುರ ನಗರದ ಹೊರವಲಯ ಗಾಂಧಿನಗರದ ಸ್ಟಾರ್ ಚೌಕ್ ಬಳಿಯ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ.
ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ್ ಎಂಬವರು ಕಾರ್ಮಿಕರಾದ ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಮುಂಗಡ ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಪೈಪ್‌ಗಳಿಂದ ಹಲ್ಲೆ ಮಾಡಲಾಗಿದೆ ಎಂದು ಈದಿನ.ಕಾಂ ವರದಿ ಮಾಡಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರಲ್ಲಿ ಇಬ್ಬರು ಕಾರ್ಮಿಕರನ್ನು ನೆಲ ಮೇಲೆ ಕೂರಿಸಿರುವುದು. ಓರ್ವ ವ್ಯಕ್ತಿ ಒಬ್ಬ ಕಾರ್ಮಿಕನ ಕಾಲನ್ನು ತುಳಿದು ಹಿಡಿದಿರುವುದು ಮತ್ತು ಇನ್ನೋರ್ವ ಕಾರ್ಮಿಕನ ಕಾಲಿಗೆ ಇಬ್ಬರು ವ್ಯಕ್ತಿಗಳು ಭೀಕರವಾಗಿ ಹೊಡೆಯುತ್ತಿರುವ ದೃಶ್ಯವಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದವರಾದ ಮೂವರು ಕಾರ್ಮಿಕರು ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ವಾಪಸ್ ಬರಲು ವಿಳಂಬ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಕಾರ್ಮಿಕರು ಎಷ್ಟೇ ಬೇಡಿಕೊಂಡರೂ ಬಿಡದೆ ಹಲ್ಲೆ ಮಾಡಲಾಗಿದೆ ಎಂದು ಈದಿನ.ಕಾಂ ವರದಿ ವಿವರಿಸಿದೆ.
ಘಟನೆ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯನ್ನು ನಾವು ಸಂಪರ್ಕಿಸಿದ್ದೇವೆ. “ಮೂವರು ಕಾರ್ಮಿಕರು ಮುಂಗಡವಾಗಿ ಹಣ ಪಡೆದು ಕೆಲಸಕ್ಕೆ ಬರಲು ತಡ ಮಾಡಿದ್ದಾರೆಂದು ಮಾಲೀಕ ಥಳಿಸಿರುವುದಾಗಿ ಮಾಹಿತಿ ಬಂದಿತ್ತು. ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿಂದ ನಮಗೆ ಎಂಎಲ್‌ಸಿ (ಮೆಡಿಕೋ-ಲೀಗಲ್ ಕೇಸ್ ) ಬಂದಿದೆ. ಹಾಗಾಗಿ, ನಮ್ಮ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ” ಎಂಬುವುದಾಗಿ ಈದಿನ.ಕಾಂ ತಿಳಿಸಿದೆ.
ಇಬ್ಬರು ಆರೋಪಿಗಳ ಬಂಧನ
ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ಪರಾರಿಯಾಗಿದ್ದಾರೆ ಎಂದು ವಿಜಯಪುರ ನಗರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾಗಿ ವಾರ್ತಾ ಭಾರತಿ ವರದಿ ಮಾಡಿದೆ.
ಕಠಿಣ ಕ್ರಮ : ಸಚಿವ ಸಂತೋಷ್ ಲಾಡ್
ಕಾರ್ಮಿಕರ ಮೇಲಿನ ಹಲ್ಲೆ ಅಮಾನವೀಯ. ಮನುಷ್ಯತ್ವ ಇದ್ದವರು ಯಾರೂ ಈ ರೀತಿ ಮಾಡಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಸಂತೊಷ್ ಲಾಡ್ ಹೇಳಿದ್ದಾರೆ.
ರಾಯಚೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅವರು, ಕಾರ್ಮಿಕರ ಮೇಲಿನ ಹಲ್ಲೆ ಖಂಡನೀಯ. ಅದು ನಾಗರಿಕ ಸಮಾಜ ಬೆಚ್ಚಿ ಬೀಳುವಂತಹ ಕೃತ್ಯವಾಗಿದೆ. ಮಾಲಕರಿಗೆ ಕಾರ್ಮಿಕರ ಬಗ್ಗೆ ಕಾಳಜಿ ಇರಬೇಕು. ಮನುಷ್ಯತ್ವ ಇಲ್ಲದವರೇ ಇಂತಹ ಕೃತ್ಯ ಎಸಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


