ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಸೋಮವಾರ (ಜ.20) ಅಧಿಕಾರ ಸ್ವೀಕರಿಸಿದರು. ಆರ್ಥಿಕ ಮತ್ತು ಮಿಲಿಟರಿ ಶಕ್ತಿಯಲ್ಲಿ ಬಲಾಡ್ಯ ಎನಿಸಿಕೊಂಡಿರುವ ರಾಷ್ಟ್ರದ ಚುಕ್ಕಾಣಿಯನ್ನು ಎರಡನೇ ಬಾರಿಗೆ ಹಿಡಿಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.
ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹಿಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಟ್ರಂಪ್‌ಗೆ ಪ್ರಮಾಣ ವಚನ ಬೋಧಿಸಿದರು.
ಟ್ರಂಪ್ ಅವರಿಗೂ ಮುನ್ನ ಅಮೆರಿಕದ 50ನೇ ಉಪಾಧ್ಯಕ್ಷರಾಗಿ ಜೆಡಿ ವೇನ್ಸ್ ಅಧಿಕಾರ ವಹಿಸಿಕೊಂಡರು. ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬ್ರೆಟ್ ಕವನಾಗ್ ಅವರು ಜೆಡಿ ವೇನ್ಸ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಅಮೆರಿಕದ ಕಾಲಮಾನ ಸೋಮವಾರ ಮಧ್ಯಾಹ್ನ 12.30ಕ್ಕೆ ಮತ್ತು ಭಾರತೀಯ ಕಾಲಮಾನ ರಾತ್ರಿ 10.30ರ ವೇಳೆಗೆ ಪ್ರಮಾಣ ವಚನ ಸಮಾರಂಭ ನಡೆಯಿತು.
ನಿರ್ಗಮಿತ ಅಧ್ಯಕ್ಷ ಜೋ ಬೈಡೆನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಭಾರತದ ಉದ್ಯಮಿ ಮುಕೇಶ್ ಅಂಬಾನಿ, ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್, ಅಮೆರಿಕದ ಉದ್ಯಮಿಗಳು ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಂಪ್ರದಾಯದ ಪ್ರಕಾರ ಅಮೆರಿಕದ ಅಧ್ಯಕ್ಷರ ಪ್ರಮಾಣವಚನ ಸಮಾರಂಭವು ‘ಕ್ಯಾಪಿಟಲ್’ನ ಮುಂಭಾಗದಲ್ಲಿ ನಡೆಯುತ್ತದೆ. ಆದರೆ, ತೀವ್ರ ಚಳಿಯ ಕಾರಣ ಒಳಾಂಗಣದಲ್ಲಿ ನೆರವೇರಿತು.
ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, “ಇಂದಿನಿಂದ ನಮ್ಮ ದೇಶವು ಬಲಿಷ್ಠವಾಗಲಿದೆ. ವಿಶ್ವದಾದ್ಯಂತ ತನ್ನ ಗೌರವವನ್ನು ಮರಳಿ ಪಡೆಯಲಿದೆ. ಪ್ರತಿ ರಾಷ್ಟ್ರವೂ ಅಸೂಯೆಪಡುವ ರೀತಿಯಲ್ಲಿ ನಾವು ಬೆಳವಣಿಗೆ ಸಾಧಿಸಲಿದ್ದೇವೆ” ಎಂದು ಹೇಳಿದರು.
“ಅಮೆರಿಕವು ಯಾರಿಗೂ ಮಣಿಯದು ಅಥವಾ ಹೆದರದು. ನಾವು ಎಂದಿಗೂ ವಿಫಲರಾಗುವುದಿಲ್ಲ. ಅಮೆರಿಕವು ಇಂದಿನಿಂದ ಸಾರ್ವಭೌಮ ಮತ್ತು ಸ್ವತಂತ್ರ ರಾಷ್ಟ್ರವಾಗಲಿದೆ. ಭವಿಷ್ಯವು ನಮ್ಮದಾಗಲಿದೆ” ಎಂದರು.
ಮಾನನಷ್ಟ ಮೊಕದ್ದಮೆ | ರಾಹುಲ್ ಗಾಂಧಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ


