ದಕ್ಷಿಣ ಕನ್ನಡ ಜಿಲ್ಲೆ ಉಳ್ಳಾಲ ತಾಲೂಕಿನ ಕೆ.ಸಿ ರೋಡ್‌ನಲ್ಲಿರುವ ಕೋಟೆಕಾರು ಸೇವಾ ಸಹಕಾರಿ ಸಂಘದ ಶಾಖೆಯಲ್ಲಿ ನಡೆದಿದ್ದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಅಮ್ಮನಕೋವಿಲ್‌ನ ಮುರುಗಂಡಿ ತೇವರ್ (36), ಮುಂಬೈನ ಗೋಪಿನಾಥ್ ಚೌಕ ನಿವಾಸಿ ಯೋಸುವಾ ರಾಜೇಂದ್ರನ್ (35), ಮುಂಬೈ ಚೆಂಬೂರ್‌ನ ತಿಲಕ್‌ನಗರದ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜನವರಿ 17ರಂದು ಮಧ್ಯಾಹ್ನ ಸಹಕಾರಿ ಸಂಘದ ಶಾಖೆಗೆ ನುಗ್ಗಿದ್ದ ಆರೋಪಿಗಳು ಸುಮಾರು 14 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದರು. ಆ ಬಳಿಕ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು.
ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು, ದರೋಡೆಗೆ ಬಳಸಿದ್ದ ಕಾರು, ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯಿದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ತನಿಖೆ ಮುಂದುವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಮುಡಾ ಕುರಿತ ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ : ಸಿಎಂ ಸಿದ್ದರಾಮಯ್ಯ


