ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸುಲ್ತಾನಪುರದ ಏಳು ವರ್ಷದ ಬಾಲಕನನ್ನು 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಮಗುವಿನ ಮಲತಂದೆ ಸುಲ್ತಾನಪುರದ ಸದಾಶಿವ ಶಿವಬಸಪ್ಪ ಮಗದುಮ್ಮ (32), ಪ್ರಸ್ತುತ ಸುಲ್ತಾನಪುರದಲ್ಲಿರುವ ಭಡ್ಗಾಂವ್ ಮೂಲದ ಲಕ್ಷ್ಮಿ ಬಾಬು ಗೋಲಬಾವಿ (38), ಅಂಬೇಡ್ಕರ್ ನಗರದಲ್ಲಿ ವಾಸವಿರುವ ಮಹಾರಾಷ್ಟ್ರದ ಕೊಲ್ಲಾಪುರದ ನಾಗಲಾ ಪಾರ್ಕ್‌ನ ಸಂಗೀತಾ ವಿಷ್ಣು ಸಾವಂತ್ (40) ಮತ್ತು ಕಾರವಾರದ ಹಳಿಯಾಳ ತಾಲೂಕಿನ ಕೆಸ್ರೋಲಿಯ ಅನಸೂಯಾ ಗಿರಿಮಲ್ಲಪ್ಪ ದೊಡ್ಮನಿ (50) ಎಂದು ಗುರುತಿಸಲಾಗಿದೆ.
ಪ್ರಕರಣದ ಕುರಿತು ಮಾತನಾಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ್, ಶಿವಬಸಪ್ಪ ಮಗದುಮ್ಮ ಮತ್ತು ಕೊಲ್ಲಾಪುರ ಹಾಗೂ ಕಾರವಾರದ ಕೆಲವು ಮಧ್ಯವರ್ತಿಗಳು ಬಾಲಕನನ್ನು ಬೆಳಗಾವಿ ನಗರದ ದಿಲ್ಶಾದ್ ಸಿಕಂದರ್ ತಹಶೀಲ್ದಾರ್ ಎಂಬ ಮಹಿಳೆಗೆ 4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿರುವ ದಿಲ್ಶಾದ್ ಅವರು ಗಂಡು ಮಗುವನ್ನು ಬಯಸಿದ್ದರು ಎಂದು ತಿಳಿಸಿದ್ದಾರೆ.
ಶಿವಬಸಪ್ಪ ಮಗದುಮ್ಮ ನಾಲ್ಕು ತಿಂಗಳ ಹಿಂದೆ ಬಾಲಕನ ತಾಯಿ ಹಾವೇರಿ ಜಿಲ್ಲೆಯ ಬ್ಯಾತನಾಳದ ಸಂಗೀತಾ ಗುಡಪ್ಪ ಕಮ್ಮಾರ (30) ಅವರನ್ನು ವಿವಾಹವಾಗಿದ್ದರು. ಮಗದುಮ್ಮಗೆ ಅವರ ಈ ಹಿಂದಿನ ಪತ್ನಿಯಿಂದ ಮಕ್ಕಳಿದ್ದರು. ಅವರು ಆಗಾಗ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಮಗದುಮ್ಮ ಬಾಲಕನನ್ನು ಮಾರಿದ್ದರು ಎಂದು ಮಾಹಿತಿ ನೀಡಿದ್ದಾರೆ.
ನಾಲ್ಕು ತಿಂಗಳ ಹಿಂದೆ ಶಿವಬಸಪ್ಪ ಮಗದುಮ್ಮ ಅವರು ಸಂಗೀತಾರನ್ನು ಮದುವೆಯಾಗಲು ಲಕ್ಷ್ಮಿ ಬಾಬು ಗೋಲಬಾವಿ ಸಹಾಯ ಮಾಡಿದ್ದರು. ಇದೇ ಲಕ್ಷ್ಮಿ ಬಾಬು ಸಂಗೀತಾ ಅವರ ಮನವೊಲಿಸಿ ಮಗುವನ್ನು ಕಾರವಾರದ ಕೆಸ್ರೋಲಿಯಲ್ಲಿರುವ ಅನಸೂಯಾ ದೊಡ್ಮನಿ ಅವರಿಗೆ ಹಸ್ತಾಂತರಿಸುವಂತೆ ಮಾಡಿದ್ದರು. ನಂತರ ಅನಸೂಯಾ ಆ ಮಗುವನ್ನು ದಿಲ್ಶಾದ್ ಅವರಿಗೆ ಮಾರಿದ್ದರು. ಬಾಲಕ ಅನಾಥನೆಂದು ದಿಲ್ಶಾದ್ ಅವರಿಗೆ ಸುಳ್ಳು ಹೇಳಿದ್ದರು.
ಈ ನಡುವೆ ಮಗುವಿನ ತಾಯಿ ಸಂಗೀತಾ ಕಮ್ಮಾರ್ ತನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಪೊಲೀಸ್ ತಂಡವು ಬೈಲಹೊಂಗಲ ಬಳಿಯ ಹಳ್ಳಿಯೊಂದರಲ್ಲಿ ಮಗುವನ್ನು ಪತ್ತೆ ಮಾಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಪ್ರಕರಣದ ಇತರ ಆರೋಪಿಗಳಾದ ಖಾನಾಪುರ ತಾಲೂಕಿನ ಲೊಂಡಾದ ಭರತ ಪೂಜಾರಿ, ಹಣ ಕೊಟ್ಟು ಮಗುವನ್ನು ಪಡೆದಿದ್ದ ಬೆಳಗಾವಿಯ ದಿಲ್ಶಾದ್ ತಹಶೀಲ್ದಾರ್ ಅವರ ಪತ್ತೆಗೆ ಜಾಲ ಬೀಸಲಾಗಿದೆ. ರಕ್ಷಣೆ ಮಾಡಲಾದ ಮಗುವನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಲಾಗಿದೆ. ಹುಕ್ಕೇರಿ ಠಾಣೆ ಇನ್‌ಸ್ಪೆಕ್ಟರ್ ಎಂ.ಕೆ.ಬಸಾಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭೀಮಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಡೆದ ಮಗು ಮಾರಾಟದ ಮೂರನೇ ಪ್ರಕರಣ ಇದಾಗಿದೆ ಎಂದು ವರದಿಗಳು ಹೇಳಿವೆ.
ಬೆಂಗಳೂರು | ಕೆ.ಆರ್ ಮಾರುಕಟ್ಟೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಇಬ್ಬರ ಬಂಧನ


