ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ (ಜ.21) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿರುವ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಲ್ಲಿ ‘ಜನ್ಮಸಿದ್ಧ ಪೌರತ್ವ’ ಹಕ್ಕು ಕೊನೆಗೊಳಿಸುವ ಆದೇಶವೂ ಒಂದು.
ಟ್ರಂಪ್ ಈ ಆದೇಶಕ್ಕೆ ಸಹಿ ಹಾಕುತ್ತಿದ್ದಂತೆ ಅಮೆರಿಕದಲ್ಲಿ ಹೆಚ್ 1ಬಿ ವೀಸಾದಡಿ ಉದ್ಯೋಗ ಮಾಡುತ್ತಿರುವ ಭಾರತೀಯರು ಸೇರಿದಂತೆ ಲಕ್ಷಾಂತರ ವಿದೇಶಿಗರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಹಿಂದೆ ಹೆಚ್ 1ಬಿ ಉದ್ಯೋಗ ವೀಸಾದಲ್ಲಿ ಅಮೆರಿಕಕ್ಕೆ ತೆರಳಿದ ವಿದೇಶಿಗರಿಗೆ ಅಲ್ಲಿಯೇ ಮಗು ಜನಿಸಿದರೆ, ಆ ಮಗು ‘ಜನ್ಮಸಿದ್ಧ ಪೌರತ್ವ’ ಪಡೆಯುತ್ತಿತ್ತು. ಆದರೆ, ಟ್ರಂಪ್ ಆದೇಶದಿಂದ ಮಗು ಪೌರತ್ವ ಪಡೆಯಬೇಕಾದರೆ ತಂದೆ ಅಥವಾ ತಾಯಿಯಲ್ಲಿ ಒಬ್ಬರಾದರೂ ಅಮೆರಿಕದ ಪ್ರಜೆಯಾಗಿರುವುದು ಅಥವಾ ಗ್ರೀನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಇನ್ನುಮುಂದೆ ಅಮೆರಿಕದಲ್ಲಿ ಹುಟ್ಟಿದ ಕಾರಣಕ್ಕೆ ವಿದೇಶಿಗರ ಮಕ್ಕಳಿಗೆ ಪೌರತ್ವ ಸಿಗುವುದಿಲ್ಲ.
ಟ್ರಂಪ್ ಆದೇಶದಿಂದ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ತಮ್ಮ ಕುಟುಂಬವನ್ನು ಅಲ್ಲಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದವರಿಗೆ ಮತ್ತು ಮಕ್ಕಳು ಅಮೆರಿಕದಲ್ಲಿ ಹುಟ್ಟಿದ ಕಾರಣಕ್ಕೆ ಪೌರತ್ವ ಪಡೆಯುತ್ತಿದ್ದವರಿಗೆ ಹಿನ್ನಡೆಯಾಗಿದೆ.
ಏನಿದು ಯುಎಸ್ ‘ಜನ್ಮಸಿದ್ದ ಪೌರತ್ವ’
ಪ್ರಸ್ತುತ ಕಾನೂನಿನ ಪ್ರಕಾರ, 1868ರಲ್ಲಿ ಅಂತರ್ಯುದ್ಧದ ನಂತರ ಹಿಂದೆ ಗುಲಾಮರಾಗಿದ್ದ ಜನರ ಸ್ಥಿತಿಯನ್ನು ಸ್ಪಷ್ಟಪಡಿಸಲು ಅಂಗೀಕರಿಸಲಾದ ಯುಎಸ್ ಸಂವಿಧಾನದ 14ನೇ ತಿದ್ದುಪಡಿಯು ಯುಎಸ್ ನೆಲದಲ್ಲಿ ಜನಿಸಿದ ಬಹುತೇಕ ಎಲ್ಲಾ ಶಿಶುಗಳಿಗೆ ಪೌರತ್ವವನ್ನು ನೀಡುತ್ತದೆ. ಜನ್ಮಸಿದ್ಧ ಪೌರತ್ವ ಅಥವಾ ‘ಮಣ್ಣಿನ ಹಕ್ಕು’ ತತ್ವ ಅಳವಡಿಸಿಕೊಂಡಿರುವ ಜಗತ್ತಿನ ಸುಮಾರು 30 ದೇಶಗಳಲ್ಲಿ ಯುಎಸ್ ಕೂಡ ಒಂದು.
ಟ್ರಂಪ್ ಹೊಸ ಆದೇಶದಿಂದ ಏನಾಗಲಿದೆ?
ಸೋಮವಾರ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ಆದೇಶದಿಂದ, ಯುಎಸ್ ನಾಗರಿಕ ಅಥವಾ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿರುವ ಕನಿಷ್ಠ ಒಬ್ಬ ಪೋಷಕರಿಲ್ಲದೆ ಅಮೆರಿಕದಲ್ಲಿ ಜನಿಸಿದ ಮಕ್ಕಳು ಇನ್ನು ಮುಂದೆ ಸ್ವಯಂಚಾಲಿತ ಅಮೆರಿಕ ಪೌರತ್ವವನ್ನು ಪಡೆಯಲು ಸಾಧ್ಯವಿಲ್ಲ. ಫೆಡರಲ್ ಏಜೆನ್ಸಿಗಳು ಅಂತಹ ಮಕ್ಕಳಿಗೆ ಅಮೆರಿಕದ ಪೌರತ್ವವನ್ನು ಸಾಬೀತುಪಡಿಸುವ ಸಂಬಂಧಿತ ದಾಖಲೆಗಳನ್ನು ನೀಡುವುದನ್ನು ಅಥವಾ ಗುರುತಿಸುವುದನ್ನು ತಡೆಯುತ್ತದೆ. ಈ ಆದೇಶವು ಅನಧಿಕೃತ ವಲಸಿಗರಿಗೆ ಮತ್ತು ತಾತ್ಕಾಲಿಕ ವೀಸಾಗಳಲ್ಲಿ ಅಮೆರಿಕದಲ್ಲಿ ಕಾನೂನುಬದ್ಧವಾಗಿ ಇರುವ ಜನರಿಗೆ ಜನಿಸಿದ ಮಕ್ಕಳನ್ನು ಗುರಿಯಾಗಿರಿಸಿಕೊಂಡಿದೆ.
ಟ್ರಂಪ್ ಆದೇಶ ಯಾರ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೆಚ್1-ಬಿ ವೀಸಾ ಹೊಂದಿರುವವರ ಮಕ್ಕಳ ಪರಿಸ್ಥಿತಿಯೇನು?
ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ತಾತ್ಕಾಲಿಕ ಕೆಲಸದ ವೀಸಾಗಳಲ್ಲಿ (ಹೆಚ್-1ಬಿ) ದೇಶದಲ್ಲಿ ಕಾನೂನುಬದ್ಧವಾಗಿ ವಾಸಿಸುವ ಜನರ ಮೇಲೆ ಟ್ರಂಪ್ ಆದೇಶ ಪರಿಣಾಮ ಬೀರಲಿದೆ. ಗ್ರೀನ್ ಕಾರ್ಡ್‌ಗಳಿಗಾಗಿ ಪ್ರಸ್ತುತ ಕಾಯುತ್ತಿರುವ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರ ಮೇಲೂ ಈ ಕಾನೂನು ಪರಿಣಾಮ ಬೀರುವ ಸಾಧ್ಯತೆಯಿದೆ.
ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳನ್ನು ಉಲ್ಲೇಖಿಸಿದ 2024ರ ವರದಿಗಳ ಪ್ರಕಾರ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯರು ಗ್ರೀನ್ ಕಾರ್ಡ್‌ಗಳಿಗಾಗಿ ಕಾಯುತ್ತಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ‘ಜನ್ಮಸಿದ್ಧ ಪೌರತ್ವ’ವನ್ನು ಕೊನೆಗೊಳಿಸುವ ಟ್ರಂಪ್ ಅವರ ಕಾರ್ಯಕಾರಿ ಆದೇಶವು ಹೆಚ್ 1ಬಿ ವೀಸಾ ಹೊಂದಿರುವವರ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನ್ಮಸಿದ್ದ ಪೌರತ್ವವಿಲ್ಲದೆ, ಈ ಮಕ್ಕಳು ದೇಶದಲ್ಲಿ ಶಿಕ್ಷಣ, ವಿದ್ಯಾರ್ಥಿ ವೇತನಗಳು ಮತ್ತು ಫೆಡರಲ್ ನೆರವಿನ ಅವಕಾಶಗಳನ್ನು ಕಳೆದುಕೊಳ್ಳಬಹುದು. ಅಲ್ಲದೆ, ಇದು ಭಾರತೀಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೂ ಅಡ್ಡಿಯಾಗಬಹುದು.
ಜನ್ಮಸಿದ್ದ ಪೌರತ್ವ ಹಕ್ಕು ಕೊನೆಗೊಳಿಸುವ ಟ್ರಂಪ್ ಆದೇಶವನ್ನು ಸುಲಭವಾಗಿ ವಿವರಿಸುವುದಾದರೆ, ವಲಸಿಗರ ಮಕ್ಕಳು ತಾವು ಯುಎಸ್‌ನಲ್ಲಿ ಜನಿಸಿದ್ದೇವೆ ಎಂಬ ಪ್ರಮಾಣ ಪತ್ರವನ್ನು ಈ ಮೊದಲು ತೋರಿಸಬೇಕಿತ್ತು. ಆದರೆ, ಇನ್ನುಮುಂದೆ ತಮ್ಮ ಪೂರ್ವಜರು ಮತ್ತು ಪೋಷಕರ ಪೌರತ್ವದ ದಾಖಲೆಗಳನ್ನು ತೋರಿಸಬೇಕಾಗಿದೆ.


