ತಮ್ಮ ಪಕ್ಷದೊಂದಿಗೆ ನ್ಯಾಯಯುತ ಒಪ್ಪಂದ ನಡೆಯದ ಕಾರಣ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ತಮ್ಮ ಸಚಿವ ಸ್ಥಾನ ಬಿಟ್ಟುಕೊಡುವುದಾಗಿ ಕೇಂದ್ರ ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಸಂಸ್ಥಾಪಕ ಜಿತನ್ ರಾಮ್ ಮಾಂಝಿ ಬೆದರಿಕೆ ಹಾಕಿದ್ದು, ಬಿಹಾರದಲ್ಲಿ ರಾಜಕೀಯ ವಲಯದಲ್ಲಿ ಚರ್ಚೆ ಹೆಚ್ಚಾಗಿದೆ. ಬಿಹಾರ ಚುನಾವಣೆ ಹಿನ್ನಲೆ
ಮಂಗಳವಾರ ಮುಂಗೇರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾಂಝಿ ಈ ಹೇಳಿಕೆ ನೀಡಿದ್ದಾರೆ. ಎನ್‌ಡಿಎಯಿಂದ ಎಚ್‌ಎಎಂ ನಿರ್ಲಕ್ಷ್ಯಕ್ಕೊಳಗಾಗಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿ ಮತ್ತು ಜಾರ್ಖಂಡ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ ಒಂದೇ ಒಂದು ಸ್ಥಾನ ನೀಡದ ಎನ್‌ಡಿಎ ಮೈತ್ರಿಯ ನಡೆಯನ್ನು ಅವರು ಉಲ್ಲೇಖಿಸಿದ್ದಾರೆ. ಬಿಹಾರ ಚುನಾವಣೆ ಹಿನ್ನಲೆ
‘ಭಯ ಗೌರವವನ್ನು ಹುಟ್ಟುಹಾಕುತ್ತದೆ’ ಎಂಬ ರಾಮಚರಿತಮಾನಸ ಪದ್ಯವನ್ನು ಉಲ್ಲೇಖಿಸಿದ ಅವರು, ಬಿಹಾರದಲ್ಲಿ ತಮ್ಮ ಮೌಲ್ಯವನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ಹೇಳಿದ್ದು. “ನಾನು ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದು ತೋರುತ್ತದೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅದಾಗ್ಯೂ, ಜಿತನ್ ರಾಮ್ ಮಾಂಝಿ ಅವರನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಉಲ್ಲೇಖಿಸಿವೆ ಎಂದು ಎಚ್‌ಎಎಂ ವಕ್ತಾರ ಡ್ಯಾನಿಶ್ ರಿಜ್ವಾನ್ ಸ್ಪಷ್ಟಪಡಿಸಿದ್ದಾರೆ. “ಅವರು ಹಾಗೆ ಹೇಳಲು ಉದ್ದೇಶಿಸಿರಲಿಲ್ಲ. ನಿಗದಿತ ಕೇಂದ್ರ ಸಚಿವ ಸಂಪುಟ ಸಭೆಯಿಂದಾಗಿ ತಾನು ತಡವಾಗುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ” ಎಂದು ರಿಜ್ವಾನ್ ವಿವರಿಸಿದ್ದಾರೆ.
ಇದಕ್ಕೂ ಮೊದಲು, ಮಾಂಝಿ ಅವರು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 20 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. “ನಮ್ಮ ಕಾರ್ಯಕರ್ತರು ವಿಧಾನಸಭಾ ಚುನಾವಣೆಯಲ್ಲಿ 40 ಸ್ಥಾನಗಳಿಗೆ ಸ್ಪರ್ಧಿಸಲು ಕೇಳುತ್ತಿದ್ದಾರೆ ಆದರೆ ನಾವು ಕನಿಷ್ಠ 20 ಸ್ಥಾನಗಳಿಗೆ ಸ್ಪರ್ಧಿಸಬೇಕೆಂದು ನಾವು ಭಾವಿಸುತ್ತೇವೆ” ಎಂದು ಮಾಂಝಿ ಹೇಳಿದ್ದರು.
ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಮಾಂಝಿ ಅವರ ಹೇಳಿಕೆಯಿಂದ ಗರಿಷ್ಠ ರಾಜಕೀಯ ಲಾಭ ಪಡೆಯಲು ವಿಪಕ್ಷಗಳ ಮಹಾಮೈತ್ರಿಕೂಟವು ಎಲ್ಲಾ ರೀತಿಯಲ್ಲೂ ಆಡಳಿತರೂಢ ಮೈತ್ರಿಯ ವಿರುದ್ಧ ವಾಗ್ದಾಳಿ ನಡೆಸಲು ಪ್ರಾರಂಭಿಸಿತು.
ಮಾಂಝಿ ಅವರ ಎಚ್‌ಎಎಂ ಕಠಿಣ ಚೌಕಾಸಿ ನಡೆಸುವವರು ಎಂದೆ ಬಣ್ಣಿಸಲಾಗುತ್ತದೆ. ಬಿಹಾರದಲ್ಲಿ ತಮ್ಮ ಪಕ್ಷದ ಬಲವನ್ನು ಪ್ರದರ್ಶಿಸುವ ಯೋಜನೆಯನ್ನು ಮಾಂಝಿ ಘೋಷಿಸಿದ್ದು, ಫೆಬ್ರವರಿ 28 ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ನಿಗದಿಪಡಿಸಲಾಗಿದೆ. “ನಮ್ಮನ್ನು ಕಡಿಮೆ ಅಂದಾಜು ಮಾಡಬೇಡಿ, ನಾವು ನಮ್ಮ ಬಲವನ್ನು ತೋರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಮಾಂಝಿ ಅವರ ಪಾತ್ರವನ್ನು ಉಲ್ಲೇಖಿಸಿ, ಎನ್‌ಡಿಎ ಮೈತ್ರಿಯ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದಾರೆ ಎಂದು ಜೆಡಿ (ಯು) ಎಂಎಲ್‌ಸಿ ನೀರಜ್ ಕುಮಾರ್ ಹೇಳಿದ್ದಾರೆ. ಬಿಹಾರದಲ್ಲಿ ಎನ್‌ಡಿಎ ನಾಯಕರು ಜಂಟಿ ಸಮ್ಮೇಳನಗಳನ್ನು ನಡೆಸುತ್ತಿದ್ದಾರೆ, ಎನ್‌ಡಿಎ ಎಲ್ಲಾ ವಿಷಯಗಳ ಬಗ್ಗೆ ಪ್ರಬಲವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಆದರೆ ವಿಪಕ್ಷಗಳ ಮಹಾಮೈತ್ರಿಕೂಟದ ನಾಯಕರು ಎನ್‌ಡಿಎ ಮೈತ್ರಿಯೊಳಗಿನ ಸಮಸ್ಯೆಗಳ ಬಗ್ಗೆ “ಹಗಲುಗನಸು” ಕಾಣುತ್ತಲೆ ಇರಲಿ ಎಂದು ಅವರು ಹೇಳಿದ್ದಾರೆ
ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಬಿಹಾರದಲ್ಲಿ ಎನ್‌ಡಿಎ ಒಗ್ಗಟ್ಟಾಗಿದ್ದು, ಎಲ್ಲಾ ಪಕ್ಷಗಳನ್ನು ಗೌರವಿಸಲಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. “NDA ನಾಯಕರು ಒಟ್ಟಿಗೆ ಕುಳಿತು ಒಮ್ಮತದ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ” ಎಂದು ಅವರು ಹೇಳಿದ್ದಾರೆ.
ಮಹಾಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಸುಗಮವಾಗಿ ನಡೆಯುವುದಿಲ್ಲ ಎಂದು ಗ್ರಹಿಸಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ವಿರೋಧ ಪಕ್ಷದ ಇಂಡಿಯಾ ಮೈತ್ರಿ ಲೋಕಸಭಾ ಚುನಾವಣೆಗೆ ಮಾತ್ರ ಉದ್ದೇಶಿಸಲಾಗಿದೆ ಎಂದು ಹೇಳುವ ಹಂತಕ್ಕೂ ಹೋಗಿದ್ದರು. ಅದಕ್ಕೂ ಮೊದಲು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಕೂಡ ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಇಂಡಿಯಾ ಮೈತ್ರಿಯನ್ನು ಮುನ್ನಡೆಸಲು ಅವಕಾಶ ನೀಡಬೇಕು ಎಂದು ಹೇಳಿದ್ದರು.
ಅವರ ಹೇಳಿಕೆಯನ್ನು ಕಾಂಗ್ರೆಸ್‌ಗೆ ಬಲವಾದ ಸಂದೇಶ ನೀಡುವ ಪ್ರಯತ್ನ ಎಂದು ಬಣ್ಣಿಸಲಾಯಿತು ಎಂದು ಹೇಳಲಾಗಿದೆ. ಅದಾಗ್ಯೂ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆರ್‌ಜೆಡಿ ನಾಯಕರಾದ ಲಾಲು-ತೇಜಸ್ವಿ ನಡುವೆ ರಾಜ್ಯ ರಾಜಧಾನಿಯಲ್ಲಿ ನಡೆದ ಈ ಹಿಂದಿನ ಭೇಟಿಯ ಸಮಯದಲ್ಲಿ ಒಳ್ಳೆಯ ಬಾಂಧವ್ಯ ಕಂಡುಬಂದರೂ, ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಯ ಕುರಿತು ಚರ್ಚಿಸಲು ಅವರ ಮೈತ್ರಿ ಇರಲಿದೆಯೆ ಎಂಬುದು ಸಂದೇಹ ಏರ್ಪಟ್ಟಿದೆ.
2020 ರ ಚುನಾವಣೆಯಲ್ಲಿ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿತು ಆದರೆ ಕೇವಲ 19 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು. ಮತ್ತೊಂದೆಡೆ, ಸಿಪಿಐ (ಎಂಎಲ್) ಸ್ಪರ್ಧಿಸಿದ 19 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿತ್ತು.
ಇದನ್ನೂಓದಿ: ಜಮ್ಮು ಕಾಶ್ಮೀರ | ನಿಗೂಢ ಕಾಯಿಲೆಗೆ 17 ಜನರು ಬಲಿ; ಕಂಟೈನ್ಮೆಂಟ್ ವಲಯ ರಚನೆ
ಜಮ್ಮು ಕಾಶ್ಮೀರ | ನಿಗೂಢ ಕಾಯಿಲೆಗೆ 17 ಜನರು ಬಲಿ; ಕಂಟೈನ್ಮೆಂಟ್ ವಲಯ ರಚನೆ


