ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಳಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಕ್ರಮ ಕೈಗೊಂಡ ಬಗ್ಗೆ ವರದಿ ನೀಡುವಂತೆ ಸೂಚಿಸಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್‌ಸಿಎಸ್‌ಸಿ) ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ, ಐಐಟಿ-ದೆಹಲಿ ಮತ್ತು ಐಐಟಿ-ಬಾಂಬೆ ನಿರ್ದೇಶಕರಿಗೆ ನೋಟಿಸ್ ನೀಡಿದೆ.
ಶಿಕ್ಷಣ ಹೋರಾಟಗಾರ ಮತ್ತು ಐಐಟಿ ಬಾಂಬೆಯ ಹಳೆ ವಿದ್ಯಾರ್ಥಿ ಧೀರಜ್ ಸಿಂಗ್ ಅವರು ನವೆಂಬರ್ 2023ರಲ್ಲಿ ನೀಡಿದ್ದ ದೂರಿನಲ್ಲಿ, ಕ್ಯಾಂಪಸ್ ನೇಮಕಾತಿ ವೇಳೆ ಪರಿಶಿಷ್ಟ ಜಾತಿ (ಎಸ್‌ಸಿ) ವಿದ್ಯಾರ್ಥಿಗಳ ವಿರುದ್ಧ ವ್ಯವಸ್ಥಿತ ಪಕ್ಷಪಾತ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರದಿಯಾಗುತ್ತಿರುವ ಜಾತಿ ತಾರತಮ್ಯವನ್ನು ಪರಿಹರಿಸಲು ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಧ್ಯಪ್ರವೇಶಿಸಿದ ನಂತರ ಜನವರಿ 15 ರಂದು ಎನ್‌ಸಿಎಸ್‌ಸಿ ನೋಟಿಸ್ ನೀಡಿದೆ. ದೇಶದಾದ್ಯಂತದ ಉನ್ನತ ಶಿಕ್ಷಣ ಸಂಸ್ಥಗಳಲ್ಲಿ ಕೇಳಿ ಬರುತ್ತಿರುವ ಜಾತಿ ತಾರತಮ್ಯದ ದೂರುಗಳ ಕುರಿತು ಸುಪ್ರೀಂ ಕೋರ್ಟ್ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ವಿವರವಾದ ವರದಿಯನ್ನು ಕೋರಿದೆ.
ವರದಿಗಳ ಪ್ರಕಾರ, 2023-24ರ ಉದ್ಯೋಗ ನೇಮಕಾತಿ ವೇಳೆ 300ಕ್ಕೂ ಹೆಚ್ಚು ಎಸ್‌ಸಿ ವಿದ್ಯಾರ್ಥಿಗಳು ತಾರತಮ್ಯಕ್ಕೆ ಒಳಗಾಗಿರುವುದನ್ನು ಧೀರಜ್ ಸಿಂಗ್ ಅವರ ದೂರಿನಲ್ಲಿ ವಿವರಿಸಿದ್ದಾರೆ. ಎರಡೂ ಐಐಟಿಗಳಲ್ಲಿನ ಉದ್ಯೋಗ ಅರ್ಜಿಗಳು ವಿದ್ಯಾರ್ಥಿಗಳು ತಮ್ಮ ಜಾತಿ ವರ್ಗ ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ರ್ಯಾಂಕ್ ತಿಳಿಸುವಂತೆ ಸೂಚಿಸಿತ್ತು. ಇದು ವಿದ್ಯಾರ್ಥಿಗಳ ಸಾಮಾಜಿಕ ಆರ್ಥಿಕ ಹಿನ್ನೆಲೆ ಬಹಿರಂಗಪಡಿಸುವ ವಿವರಗಳಾಗಿವೆ ಎಂದು ಧೀರಜ್ ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ.
ಅರ್ಜಿ ನಮೂನೆಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷಿಯಾಗಿ ಧೀರಜ್ ಸಿಂಗ್ ತನ್ನ ದೂರಿನಲ್ಲಿ ಸಲ್ಲಿಸಿದ್ದಾರೆ. ಐಐಟಿ-ಬಾಂಬೆ ಮತ್ತು ಐಐಟಿ-ದೆಹಲಿಯಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಘಟನೆಗಳ ಬೆನ್ನಲ್ಲೇ ಧೀರಜ್ ಸಿಂಗ್ ಈ ಆರೋಪಗಳನ್ನು ಮಾಡಿದ್ದಾರೆ.
ಹಲವಾರು ಪ್ರಕರಣಗಳನ್ನು ಹಸ್ತಚಾಲಿತವಾಗಿ ನಿರ್ವಹಿಸುವ ತಾಂತ್ರಿಕ ದೋಷಗಳನ್ನು ಉಲ್ಲೇಖಿಸಿ, ದೂರನ್ನು ಪ್ರಕ್ರಿಯೆಗೊಳಿಸುವಲ್ಲಿ ವಿಳಂಬವಾಗಿದೆ ಎಂದು ಎನ್‌ಸಿಎಸ್‌ಸಿ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆಯೋಗದ ಸೂಚನೆಗೆ ಪ್ರತಿಕ್ರಿಯಿಸಲು ಐಐಟಿಗಳು ಮತ್ತು ಶಿಕ್ಷಣ ಸಚಿವಾಲಯಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕೊನೆಗೂ ‘ಪಾಶ್ ಸಮಿತಿ’ ರಚಿಸಿದ ಕರ್ನಾಟಕ ಫಿಲಂ ಚೇಂಬರ್ : ಆದರೆ ಬಹುಪಾಲು ಸದಸ್ಯರು ಪುರುಷರು!


