ಕೋಲ್ಕತ್ತಾದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ಕೇಂದ್ರ ತನಿಖಾ ದಳ(ಸಿಬಿಐ)ವು ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಗುರುವಾರ ವರದಿ ಮಾಡಿದೆ. ಕೋಲ್ಕತ್ತಾ ಅತ್ಯಾಚಾರ ಪ್ರಕರಣ
ಸಿಪಿಐ ಇದನ್ನು “ಅಪರೂಪದಲ್ಲಿ ಅಪರೂಪದ” ಪ್ರಕರಣ ಎಂದು ಬಣ್ಣಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ನಗರದ ಸೀಲ್ಡಾ ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಾಲಯವು ಶನಿವಾರ ಸಂಜಯ್ ರಾಯ್ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಸೋಮವಾರ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಕೇಂದ್ರ ತನಿಖಾ ದಳವು ಆರೋಪಿ ಸಂಜಯ್ ರಾಜ್‌ಗೆ ಮರಣದಂಡನೆ ವಿಧಿಸಲು ಕೋರಿತ್ತು, ಆದರೆ ನ್ಯಾಯಾಧೀಶ ಅನಿರ್ಬನ್ ದಾಸ್ ಅದಕ್ಕೆ ನಿರಾಕರಿಸಿದ್ದು, ಮರಣದಂಡನೆಗೆ ವಿಧಿಸಬೇಕಾದರೆ “ಅಪರೂಪದಲ್ಲಿ ಅಪರೂಪದ” ಪ್ರಕರಣ ನಡೆಯಬೇಕು, ಅಂತಹ ಮಾನದಂಡಗಳನ್ನು ಈ ಅಪರಾಧವು ಪೂರೈಸಲಿಲ್ಲ ಎಂದು ಹೇಳಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಶೇಷವಾಗಿ ಕ್ರೂರ, ಘೋರ ದುಷ್ಕೃತ್ಯದ ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸಬೇಕೆಂದು ನಿರ್ಧರಿಸಲು “ಅಪರೂಪದಲ್ಲಿ ಅಪರೂಪದ” ಸಿದ್ಧಾಂತವನ್ನು ಭಾರತದಲ್ಲಿ ಬಳಸಲಾಗುತ್ತದೆ. ಕೊಲೆ, ಅತ್ಯಾಚಾರ ಮತ್ತು ಇತರ ಗಂಭೀರ ಅಪರಾಧಗಳ ಪ್ರಕರಣಗಳಲ್ಲಿ ಈ ಸಿದ್ಧಾಂತವನ್ನು ಹೆಚ್ಚಾಗಿ ಅನ್ವಯಿಸಲಾಗುತ್ತದೆ. ಕೋಲ್ಕತ್ತಾ ಅತ್ಯಾಚಾರ ಪ್ರಕರಣ
ಅಪರಾಧಿ ರಾಯ್‌ಗೆ ಮರಣದಂಡನೆ ವಿಧಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಮಂಗಳವಾರ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದ ಕೆಲವೇ ಗಂಟೆಗಳ ನಂತರ ವಿಚಾರಣಾ ನ್ಯಾಯಾಲಯದ ಶಿಕ್ಷೆಯನ್ನು ಪ್ರಶ್ನಿಸುವ ನಿರ್ಧಾರವನ್ನು ಸಿಬಿಐ ತೆಗೆದುಕೊಂಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಂತ್ರಸ್ತರ ಕುಟುಂಬ, ತನಿಖಾ ಪ್ರಾಧಿಕಾರ ಅಥವಾ ಅಪರಾಧಿ ಮಾತ್ರ ಮೇಲ್ಮನವಿ ಸಲ್ಲಿಸಬಹುದು ಎಂದು ಸಿಬಿಐ ವಾದಿಸಿತ್ತು. ಘಟನೆ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ನಡೆದಿರುವುದರಿಂದ ಮತ್ತು ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವಿಷಯವಾಗಿರುವುದರಿಂದ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ವಾದಿಸಿತು.
ನ್ಯಾಯಮೂರ್ತಿ ದೇಬಾಂಗ್ಶು ಬಸಕ್ ಮತ್ತು ನ್ಯಾಯಮೂರ್ತಿ ಎಂಡಿ ಶಬ್ಬರ್ ರಶೀದಿ ಅವರ ಪೀಠವು, ರಾಜ್ಯ ಸರ್ಕಾರಕ್ಕೆ ಮರಣದಂಡನೆ ವಿಧಿಸಲು ಅವಕಾಶ ನೀಡಬೇಕೆ ಎಂದು ನಿರ್ಧರಿಸುವ ಮೊದಲು ನ್ಯಾಯಾಲಯವು ಬಲಿಪಶುವಿನ ಕುಟುಂಬ ಮತ್ತು ಅಪರಾಧಿಯ ವಾದಗಳನ್ನು ಆಲಿಸುತ್ತದೆ ಎಂದು ಹೇಳಿದೆ.
ಆಗಸ್ಟ್ 9 ರಂದು ಆಸ್ಪತ್ರೆಯ ಆವರಣದಲ್ಲಿ 31 ವರ್ಷದ ತರಬೇತಿ ವೈದ್ಯೆ ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ದೇಶಾದ್ಯಂತ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು.
ಸೋಮವಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಪರಾಧಿ ರಾಯ್‌ಗೆ ನೀಡಲಾದ ಶಿಕ್ಷೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. “ಕೋಲ್ಕತ್ತಾ ಪೊಲೀಸರಿಂದ ಪ್ರಕರಣವನ್ನು ಬಲವಂತವಾಗಿ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಪ್ರಕರಣ ಅವರ ಬಳಿ ಇದ್ದಿದ್ದರೆ, ಅದು ಮರಣದಂಡನೆಯನ್ನು ಖಚಿತಪಡಿಸುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಈ ಪ್ರಕರಣವನ್ನು ಆರಂಭದಲ್ಲಿ ಪಶ್ಚಿಮ ಬಂಗಾಳ ಪೊಲೀಸರು ತನಿಖೆ ನಡೆಸಿದ್ದರು. ನಂತರ ಹೈಕೋರ್ಟ್ ಕೇಂದ್ರ ತನಿಖಾ ದಳಕ್ಕೆ ಅದನ್ನು ಹಸ್ತಾಂತರಿಸಿತ್ತು. ವಿಚಾರಣಾ ನ್ಯಾಯಾಲಯವು ಈ ಪ್ರಕರಣವು ಅಪರೂಪದಲ್ಲಿ ಅಪರೂಪದ ಸಿದ್ಧಾಂತವನ್ನು ಪೂರೈಸುವುದಿಲ್ಲ ಎಂದು ಕಂಡುಕೊಂಡಾಗ ತಾನು ಆಘಾತಕ್ಕೊಳಗಾಗಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂಓದಿ: ಬಂಧನ ಕೇಂದ್ರದಿಂದ ವಿದೇಶಿಯರ ಗಡೀಪಾರು ಮಾಡುವಲ್ಲಿ ಅಸ್ಸಾಂ ಸರ್ಕಾರ ವಿಫಲ – ಸುಪ್ರೀಂಕೋರ್ಟ್ ಟೀಕೆ
ಬಂಧನ ಕೇಂದ್ರದಿಂದ ವಿದೇಶಿಯರ ಗಡೀಪಾರು ಮಾಡುವಲ್ಲಿ ಅಸ್ಸಾಂ ಸರ್ಕಾರ ವಿಫಲ – ಸುಪ್ರೀಂಕೋರ್ಟ್ ಟೀಕೆ


