ಅಹಿಂಸೆ ತತ್ವವನ್ನು ಕಾಪಾಡಬೇಕಾದರೆ ಕೆಲವೊಮ್ಮೆ ಹಿಂಸೆ ಅನಿವಾರ್ಯವಾಗುತ್ತದೆ ಎಂದು ಹೇಳಿರುವ ಆರೆಸ್ಸೆಸ್ ಹಿರಿಯ ನಾಯಕ ಭಯ್ಯಾಜಿ ಜೋಶಿ, ಅದಾಗ್ಯೂ, ಭಾರತವೂ ಎಲ್ಲರನ್ನು ಶಾಂತಿಯ ಪಥದಲ್ಲಿ ಕೊಂಡೊಯ್ಯಬೇಕೆಂದು ಎಂದು ಹೇಳಿದ್ದಾರೆ. ಈ ಹಿಂದೆಯೂ ಅವರು ಹಲವು ಬಾರಿ ವಿವಾದಾದತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಅಹಿಂಸೆಗಾಗಿ ಹಿಂಸೆ ಅನಿವಾರ್ಯ
ಗುಜರಾತ್ ವಿಶ್ವವಿದ್ಯಾನಿಲಯದ ಆವರಣದ ಮೈದಾನದಲ್ಲಿ ನಡೆದ ಹಿಂದೂ ಸ್ಪಿರಿಚ್ಯುವಲ್ & ಸರ್ವಿಸ್ ಫೇರ್ ಅಥವಾ ಹಿಂದೂ ಆಧ್ಯಾತ್ಮಿಕ ಸೇವಾ ಮೇಳವನ್ನು ಉದ್ದೇಶಿಸಿ ಮಾತನಾಡುತ್ತಾ ಭಯ್ಯಾಜಿ ಜೋಶಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಹಿಂಸೆಗಾಗಿ ಹಿಂಸೆ ಅನಿವಾರ್ಯ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಹಿಂದೂಗಳು ಎಂದಿಗೂ ತಮ್ಮ ಧರ್ಮವನ್ನು ರಕ್ಷಿಸಲು ಬದ್ಧರಾಗಿರಬೇಕು. ನಾವು ನಮ್ಮ ಧರ್ಮವನ್ನು ಕಾಪಾಡಬೇಕಾದರೆ ಕೆಲವೊಮ್ಮೆ ಇತರರು ಯಾವುದನ್ನು ‘ಅಧರ್ಮ’ ಎಂದು ಕರೆಯುತ್ತಾರೋ ಅದನ್ನೇ ಮಾಡಬೇಕಾಗುತ್ತದೆ. ನಮ್ಮ ಪೂರ್ವಜರು ಕೂಡಾ ಹಾಗೆಯೇ ಮಾಡಿರುವುದು” ಎಂದು ಅವರು ಹೇಳಿದ್ದಾರೆ.
ಮಹಾಭಾರತವನ್ನು ಉಲ್ಲೇಖಿಸಿದ ಅವರು, “ಪಾಂಡವರು ಅಧರ್ಮವನ್ನು ನಾಶ ಮಾಡಲು ಯುದ್ಧದ ನೀತಿಯನ್ನು ಕೈಗೊಂಡರು. ಹಿಂದೂ ಧರ್ಮ ಅಹಿಂಸೆ ಸಾರುತ್ತದೆ ಎಂಬುದನ್ನು ನಾವು ಅಲ್ಲಗಳೆಯಲಾಗದು. ಆದರೆ ಕೆಲವೊಮ್ಮೆ ಅಹಿಂಸೆಯ ರಕ್ಷಣೆಗಾಗಿ ಹಿಂಸೆಯ ಹಾದಿ ತುಳಿಯಬೇಕಾಗುತ್ತದೆ. ಇಲ್ಲವಾದರೆ ಅಹಿಂಸೆ ತತ್ವವು ಸುರಕ್ಷಿತವಾಗಿರದು. ನಮ್ಮ ಪೂರ್ವಜರು ಈ ಸಂದೇಶವನ್ನು ನಮಗೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
“ಭಾರತವನ್ನು ಹೊರತುಪಡಿಸಿ ಇತರೆ ದೇಶಗಳ ಜೊತೆಯಲ್ಲೇ ಸಾಗುವಂತಹ ಯಾವುದೇ ದೇಶವಿಲ್ಲ. ವಸುದೈವ ಕುಟುಂಬಂ ಎಂಬುದು ನಮ್ಮ ಆಧ್ಯಾತ್ಮದ ತತ್ವವಾಗಿದೆ. ನಾವು ಇಡೀ ವಿಶ್ವವನ್ನೇ ಒಂದು ಕುಟುಂಬವಾಗಿ ಪರಿಗಣಿಸಿದರೆ ಯಾವುದೇ ಸಂಘರ್ಷ ಇರುವುದಿಲ್ಲ” ಎಂದು ಭಯ್ಯಾಜಿ ಜೋಶಿ ಹೇಳಿದ್ದಾರೆ.
“ನಾವು ಭಾರತ ಬಲಿಷ್ಠವಾಗಬೇಕು ಎನ್ನುತ್ತೇವೆ. ಅಂದರೆ ಬಲಿಷ್ಠ ಭಾರತ ಮತ್ತು ಬಲಿಷ್ಠ ಹಿಂದೂ ಸಮುದಾಯ ಮಾತ್ರ ಎಲ್ಲರಿಗೂ ಉಪಯೋಗಕರ ಎಂಬ ಭರವಸೆಯನ್ನು ಜಗತ್ತಿಗೆ ನೀಡುವುದಾಗಿದೆ. ನಾವು ಬಲಿಷ್ಠರಾದರೆ ದುರ್ಬಲರು ಮತ್ತು ಧಮನಿತರನ್ನು ರಕ್ಷಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ. ಭಯ್ಯಾಜಿ ಜೋಶಿ ಈ ಹಿಂದೆ ಕೂಡಾ ಹಲವು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿಂದೆ, ಹಿಂದೂ ಮತ್ತು ಹಿಂದುತ್ವ ಎರಡೂ ಕೂಡಾ ಒಂದೇ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಇದನ್ನೂಓದಿ: ಉತ್ತರ ಪ್ರದೇಶ – ಗಂಟಲು ಸೀಳಿ, ಜನನಾಂಗ ವಿರೂಪಗೊಳಿಸಿ ಯುವಕನ ಕೊಲೆ


