ಗ್ರಾಮಸ್ಥರ ತೀವ್ರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ ತಮಿಳುನಾಡಿನ ನಾಯಕರಪಟ್ಟಿಯ ಟಂಗ್‌ಸ್ಟನ್ ಖನಿಜ ಗಣಿ ಹರಾಜು ರದ್ದುಗೊಳಿಸಲು ನಿರ್ಧರಿಸಿದೆ.
ಮಧುರೈ ಬಳಿಯ ನಾಯಕರಪಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ಟಂಗ್‌ಸ್ಟನ್ ಖನಿಜ ಗಣಿಗಾರಿಕೆ ನಡೆಸುವ ಹಕ್ಕನ್ನು ಕೇಂದ್ರ ಸರ್ಕಾರವು ನವೆಂಬರ್ 2024 ರಲ್ಲಿ ಹಿಂದೂಸ್ತಾನ್ ಝಿಂಕ್ ಲಿಮಿಟೆಡ್‌ಗೆ ನೀಡಿತ್ತು.
ಆದರೆ, ಗಣಿಗಾರಿಕೆಗೆ ಗುರುತಿಸಿದ್ದ ಪ್ರದೇಶವನ್ನು 2022ರಲ್ಲಿ ಜೀವವೈವಿಧ್ಯ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಅಲ್ಲದೆ, ಈ ಪ್ರದೇಶ ಹಲವಾರು ಅಪರೂಪದ ಸಸ್ಯ ಮತ್ತು ಪ್ರಾಣಿಗಳು, ಗುಹಾ ದೇವಾಲಯಗಳು, ಜೈನ ದೇವಾಲಯಗಳು, ತಮಿಳು-ಬ್ರಾಹ್ಮಿ ಶಾಸನಗಳು ಮತ್ತು ಪಂಚಪಾಂಡವರ ಕಲ್ಲಿನ ಹಾಸಿಗೆಗಳನ್ನು ಒಳಗೊಂಡಿದೆ.
ಜನವರಿ 23, 2025ರಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಸರ್ಕಾರ, “ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ ಕಿಶನ್ ರೆಡ್ಡಿ ಅವರು ಜನವರಿ 22ರಂದು ಬುಧವಾರ ನವದೆಹಲಿಯಲ್ಲಿ ಮಧುರೈನ ಅಂಬಲಕರರನ್ನು (ಸಾಂಪ್ರದಾಯಿಕ ಸಮುದಾಯದ ಮುಖಂಡರು) ಭೇಟಿಯಾಗಿದ್ದಾರೆ. ಈ ವೇಳೆ, ಖನಿಜ ಗಣಿಗಾರಿಕೆಗಾಗಿ ಗುರುತಿಸಲಾದ ಪ್ರದೇಶದಲ್ಲಿ ಅರಿಟ್ಟಪಟ್ಟಿ ಜೀವವೈವಿಧ್ಯ ಪರಂಪರೆಯ ತಾಣ ಮತ್ತು ಹಲವಾರು ಸಾಂಸ್ಕೃತಿಕ ಪರಂಪರೆಯ ತಾಣಗಳು ಸೇರಿರುವುದರಿಂದ ಹರಾಜನ್ನು ರದ್ದುಗೊಳಿಸಬೇಕೆಂದು ಸಮುದಾಯದ ಸದಸ್ಯರು ಒತ್ತಾಯಿಸಿದ್ದಾರೆ ಎಂದು ಹೇಳಿದೆ.
ಮುಂದುವರಿದು, “ವಿವರವಾದ ಚರ್ಚೆಗಳ ನಂತರ, ಈ ಪ್ರದೇಶದ ಜೀವವೈವಿಧ್ಯ ಪರಂಪರೆಯ ತಾಣದ ಪ್ರಾಮುಖ್ಯತೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರದ ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಪರಿಗಣಿಸಿ, ನಾಯಕರಪಟ್ಟಿ ಟಂಗ್‌ಸ್ಟನ್ ಖನಿಜ ಗಣಿ ಹರಾಜನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಕೂಡ, ಜನವರಿ 7ರಂದು ಚೆನ್ನೈ ಮತ್ತು ಮಧುರೈ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲೂರಿನಿಂದ ತಲ್ಲಕುಳಂವರೆಗೆ ಸಾವಿರಾರು ಗ್ರಾಮಸ್ಥರು ಮತ್ತು ರೈತರು ರ್‍ಯಾಲಿ ನಡೆಸಿ ಗಣಿಗಾರಿಕೆಯನ್ನು ವಿರೋಧಿಸಿದ್ದರು.
ಕೇಂದ್ರ ಸರ್ಕಾರ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ 2024ರ ಡಿಸೆಂಬರ್ 9ರಂದು ತಮಿಳುನಾಡು ವಿಧಾನಸಭೆಯು ನಿರ್ಣಯ ಅಂಗೀಕರಿಸಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗ್ರಾಮಸ್ಥರ ಕಳವಳವನ್ನು ವಿವರಿಸಿದ್ದರು.
ಜನ್ಮದತ್ತ ಪೌರತ್ವ ಹಕ್ಕು ರದ್ದು | ಟ್ರಂಪ್ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ


