‘ಜನ್ಮದತ್ತ ಪೌರತ್ವ ಹಕ್ಕು’ ರದ್ದುಗೊಳಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿರುವುದು ಭಾರತೀಯರು ಸೇರಿದಂತೆ ಲಕ್ಷಾಂತರ ವಲಸಿಗರ ಆತಂಕಕ್ಕೆ ಕಾರಣವಾಗಿದೆ.
ವಿಶೇಷವಾಗಿ ಹೆಚ್-1ಬಿ ಅಧಿಕೃತ ವಲಸಿಗರ ವೀಸಾ ಹೊಂದಿರುವ ಭಾರತದ ಲಕ್ಷಾಂತರ ದಂಪತಿಗಳು ಚಿಂತೆಗೆ ಈಡಾಗಿದ್ದಾರೆ. ವಲಸಿಗ ಗರ್ಭಿಣಿಯರು ತಮಗೆ ಹುಟ್ಟುವ ಮಕ್ಕಳಿಗೆ ಜನ್ಮದತ್ತ ಅಮೆರಿಕದ ಪೌರತ್ವ ಸಿಗುವ ನಿರೀಕ್ಷೆಯಲ್ಲಿದ್ದರು. ಟ್ರಂಪ್ ಆದೇಶ ಅವರ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದೆ.
ವರದಿಗಳ ಪ್ರಕಾರ, ಟ್ರಂಪ್ ಆದೇಶಕ್ಕೆ ಅಮೆರಿಕದ ಫೆಡರಲ್ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಅದು ಒಂದು ವೇಳೆ ತೆರವಾದರೆ, ಫೆಬ್ರವರಿ 20 ರಿಂದ ಟ್ರಂಪ್ ಕಾರ್ಯಕಾರಿ ಆದೇಶಗಳು ಜಾರಿಗೆ ಬರಲಿವೆ. ಅದಕ್ಕೂ ಮುನ್ನ ಸಿಸೇರಿಯನ್ (ಸಿ-ಸೆಕ್ಷನ್ಸ್) ಮೂಲಕ ಹೆರಿಗೆ ಮಾಡಿಸಿಕೊಂಡು ಮಕ್ಕಳಿಗೆ ಪೌರತ್ವ ಪಡೆಯಲು ಮಹಿಳೆಯರು ಮುಂದಾಗಿದ್ದಾರೆ.
ವಿಶೇಷವಾಗಿ ಭಾರತೀಯ ವಲಸಿಗ ಗರ್ಭಿಣಿಯರು ಸಿಸೇರಿಯನ್ ಹೆರಿಗೆ ಸಂಬಂಧ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಕ್ಲೀನಿಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಒಬ್ಬರು ಭಾರತೀಯ ಮೂಲದ ಸ್ತ್ರೀರೋಗತಜ್ಞ ಸಿಸೇರಿಯನ್ ಹೆರಿಗೆ ಸಂಬಂಧ 20 ಕರೆಗಳನ್ನು ಸ್ವೀಕರಿಸಿರುವುದಾಗಿ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಮೆರಿಕದ 47ನೇ ಅಧ್ಯಕ್ಷರಾಗಿ ಸೋಮವಾರ (ಜ.21) ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿರುವ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಲ್ಲಿ ‘ಜನ್ಮದತ್ತ ಪೌರತ್ವ’ ಹಕ್ಕು ಕೊನೆಗೊಳಿಸುವ ಆದೇಶವೂ ಒಂದು.
ಅಮೆರಿಕದಲ್ಲಿ ತಾತ್ಕಾಲಿಕ ಹೆಚ್-1ಬಿ ಮತ್ತು ಎಲ್1 ವೀಸಾಗಳ ಮೇಲೆ ಕೆಲಸ ಮಾಡುತ್ತಿರುವ ಲಕ್ಷಾಂತರ ಭಾರತೀಯರಿದ್ದಾರೆ. ಈ ಪೈಕಿ ಹೆಚ್ಚಿನವರು ಅಮೆರಿಕದಲ್ಲಿ ಶಾಶ್ವತ ವಾಸಕ್ಕೆ ಅವಕಾಶ ಕಲ್ಪಿಸುವ ಗ್ರೀನ್ ಕಾರ್ಡ್ ಪಡೆಯಲು ಕ್ಯೂನಲ್ಲಿದ್ದಾರೆ. ಟ್ರಂಪ್ ಆದೇಶದಿಂದ ಇನ್ನು ಮುಂದೆ ಪೋಷಕರಲ್ಲಿ ಯಾರದರು ಒಬ್ಬರು ಅಮೆರಿಕದ ನಾಗರಿಕ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಅಲ್ಲದೇ ಇದ್ದರೆ, ಅಂತಹ ಮಕ್ಕಳಿಗೆ ಜನ್ಮದತ್ತ ಪೌರತ್ವ ಸಿಗುವುದಿಲ್ಲ.
ನ್ಯೂಜೆರ್ಸಿಯಲ್ಲಿ ಹೆರಿಗೆ ಆಸ್ಪತ್ರೆ ಹೊಂದಿರುವ ಭಾರತದ ವೈದ್ಯ ಡಾ. ಎಸ್. ಡಿ. ರಾಮಾ ಅವರಿಗೆ ಎಂಟು ಮತ್ತು ಒಂಭತ್ತು ತಿಂಗಳು ತುಂಬಿರುವ ಹಲವು ಗರ್ಭಿಣಿಯರಿಂದ ಸಿಸೇರಿಯನ್ ಹೆರಿಗೆ ಮಾಡಿಸಲು ಕೋರಿಕೆ ಬಂದಿದೆ. ಕೆಲ ಗರ್ಭಿಣಿಯರು ತಿಂಗಳು ಭರ್ತಿಯಾಗದಿದ್ದರೂ ಹೆರಿಗೆ ಮಾಡಿಸಲು ಕೋರುತ್ತಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಏಳು ತಿಂಗಳ ಗರ್ಭಿಣಿಯೊಬ್ಬರು ತನ್ನ ಪತಿಯೊಂದಿಗೆ ಅವಧಿಪೂರ್ವ ಹೆರಿಗೆಗೆ ನೋಂದಣಿ ಮಾಡಿಕೊಳ್ಳಲು ಬಂದಿದ್ದರು. ಮಾರ್ಚ್‌ವರೆಗೆ ಅವಳಿಗೆ ಹೆರಿಗೆ ಆಗುವುದಿಲ್ಲ” ಎಂದು ಡಾ. ರಮಾ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.
ಟೆಕ್ಸಾಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎಸ್.ಜಿ ಮುಕ್ಕಳ ಅವರು ಅವಧಿಪೂರ್ವ ಹೆರಿಗೆಯ ಅಪಾಯಗಳ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಸುಮಾರು 20 ಜೋಡಿಗಳೊಂದಿಗೆ ಮಾತನಾಡಿದ್ದೇನೆ ಎಂದು ಅವರು ಟೈಮ್ಸ್ ಆಫ್ ಇಂಡಿಯಾಗೆ ಹೇಳಿದ್ದಾರೆ.
ಸಿಸೇರಿಯನ್ ಹೆರಿಗೆ ಸಾಧ್ಯವಾದರೂ, ಅವಧಿಪೂರ್ಣ ಅದನ್ನು ಮಾಡಿಸದಂತೆ ನಾನು ದಂಪತಿಗಳಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಪೌರತ್ವ ಕಳೆದುಕೊಳ್ಳುವ ದಾವಂತದಲ್ಲಿ ಅವಧಿಪೂರ್ಣ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಿದೆ. ಒಂದು ಮಗುವನ್ನು ಹೊರ ತೆಗೆದರೂ, ಅದು ಶ್ವಾಸಕೋಶ, ಕಡಿಮೆ ತೂಕ, ನರದ ಸಮಸ್ಯೆಗಳನ್ನು ಎದುರಿಸಬಹುದು ಎಂದು ಡಾ. ಮುಕ್ಕಳ ಆತಂಕ ವ್ಯಕ್ತಪಡಿಸಿದ್ದಾರೆ.
ಜನ್ಮದತ್ತ ಪೌರತ್ವ ಹಕ್ಕು ರದ್ದು | ಟ್ರಂಪ್ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ


