ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿಗಳಾದ ಸಂಶೋಧಕ ರೋನಾ ವಿಲ್ಸನ್ ಮತ್ತು ಹೋರಾಟಗಾರ ಸುಧೀರ್ ಧಾವಳೆ ಅವರು ಬಂಧನಕ್ಕೊಳಗಾದ ಆರು ವರ್ಷಗಳ ನಂತರ ಶುಕ್ರವಾರ (ಜನವರಿ 24, 2025) ನವಿ ಮುಂಬೈ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಹದಿನೈದು ದಿನಗಳ ನಂತರ, ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಎನ್‌ಐ ನ್ಯಾಯಾಲಯದ ಮುಂದೆ ವಕೀಲರು ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ, ನವಿ ಮುಂಬೈನ ತಲೋಜಾ ಜೈಲಿನಿಂದ ಇಬ್ಬರು ಶುಕ್ರವಾರ ಮಧ್ಯಾಹ್ನ 1:30 ರ ಸುಮಾರಿಗೆ ಹೊರಬಂದಿದ್ದಾರೆ.
ಜನವರಿ 8ರಂದು ವಿಲ್ಸನ್ ಮತ್ತು ಧಾವಳೆ ಅವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಈ ಇಬ್ಬರು 2018 ರಿಂದ ಜೈಲಿನಲ್ಲಿದ್ದರು. ಇವರ ವಿರುದ್ದ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿ ದಾಖಲಾದ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ.
“ಅವರು 2018ರಿಂದ ಜೈಲಿನಲ್ಲಿದ್ದಾರೆ. ಅವರ ವಿರುದ್ದ ಇನ್ನೂ ಆರೋಪಗಳನ್ನು ರೂಪಿಸಲಾಗಿಲ್ಲ. ಪ್ರಾಸಿಕ್ಯೂಷನ್ 300ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಉಲ್ಲೇಖಿಸಿದೆ. ಆದ್ದರಿಂದ ಶೀಘ್ರದಲ್ಲಿ ವಿಚಾರಣೆ ಮುಗಿಯುವ ಸಾಧ್ಯತೆಯಿಲ್ಲ” ಎಂದು ಜಾಮೀನು ನೀಡುವಾಗ ಹೈಕೋರ್ಟ್ ಹೇಳಿತ್ತು.
ಈ ಪ್ರಕರಣದಲ್ಲಿ ಧಾವಳೆ ಮತ್ತು ವಿಲ್ಸನ್ ಜೊತೆಗೆ ಇತರ 14 ಹೋರಾಟಗಾರರು, ಶಿಕ್ಷಣ ತಜ್ಞರನ್ನು ಬಂಧಿಸಲಾಗಿತ್ತು. ಈ ಪೈಕಿ ವರವರ ರಾವ್, ಸುಧಾ ಭಾರದ್ವಾಜ್, ಆನಂದ್ ತೇಲ್ತುಂಬ್ಡೆ, ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೇರಾ, ಶೋಮಾ ಸೇನ್, ಗೌತಮ್ ನವಲಖಾ ಮತ್ತು ಮಹೇಶ್ ರಾವತ್ ಸೇರಿ ಇಲ್ಲಿಯವರೆಗೆ ಎಂಟು ಮಂದಿ ಜಾಮೀನು ಪಡೆದಿದ್ದಾರೆ.
ಇವರಲ್ಲಿ, ಮಹೇಶ್ ರಾವತ್ ಅವರ ಜಾಮೀನಿನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವುದರಿಂದ ಅವರು ಇನ್ನೂ ಜೈಲಿನಲ್ಲಿದ್ದಾರೆ.
ಆರೋಪಿಗಳಲ್ಲಿ ಒಬ್ಬರಾದ ಜೆಸ್ಯೂಟ್ ಪಾದ್ರಿ ಮತ್ತು ಹೋರಾಟಗಾರ ಸ್ಟಾನ್ ಸ್ವಾಮಿ 2021 ರಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಗ ನಿಧನರಾದರು.
ಡಿಸೆಂಬರ್ 31, 2017ರಂದು ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಆರೋಪಿಗಳು ಪ್ರಚೋದನಕಾರಿ ಭಾಷಣಗಳನ್ನು ಮಾಡಿ, ಮರುದಿನ ಜಿಲ್ಲೆಯ ಕೋರೆಗಾಂವ್-ಭೀಮಾದಲ್ಲಿ ಹಿಂಸಾಚಾರಕ್ಕೆ ಕಾರಣರಾದರು ಎಂದು ಆರೋಪಿಸಿ ಪುಣೆ ಪೊಲೀಸರು 2018ರಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರ ಪ್ರಕಾರ, ಎಲ್ಗರ್ ಪರಿಷತ್ ಸಮಾವೇಶಕ್ಕೆ ಮಾವೋವಾದಿಗಳು ಬೆಂಬಲ ನೀಡಿದ್ದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ವಹಿಸಿಕೊಂಡು ಆರೋಪಪಟ್ಟಿ ಸಲ್ಲಿಸಿತ್ತು. ಆದರೆ, ವಿಶೇಷ ನ್ಯಾಯಾಲಯವು ಇನ್ನೂ ಆರೋಪಗಳನ್ನು ರೂಪಿಸಿಲ್ಲ.
ಸಂಭಾಲ್ | ಆಸ್ತಿ ಧ್ವಂಸ ಮಾಡಿದ ಅಧಿಕಾರಿಗಳ ವಿರುದ್ಧ ವಿಚಾರಣೆ ಆರಂಭಿಸಲಿರುವ ಸುಪ್ರೀಂಕೋರ್ಟ್


