ಪ್ರಧಾನಿ ಮೋದಿ ಅವರ ಆಪ್ತ ಉದ್ಯಮಿ ಗೌತಮ್ ಅದಾನಿ ವಿರುದ್ಧ ಲಂಚ ಮತ್ತು ವಂಚನೆ ಆರೋಪಗಳ ಮೇಲೆ ಅಮೆರಿಕ ನಡೆಸಿದ ತನಿಖೆಯ ಹಿನ್ನಲೆ, ಶ್ರೀಲಂಕಾ ಸರ್ಕಾರ ಅದಾನಿ ಗ್ರೂಪ್ ಜೊತೆಗಿನ ವಿದ್ಯುತ್ ಖರೀದಿ ಒಪ್ಪಂದವನ್ನು ರದ್ದುಗೊಳಿಸಿದೆ ಎಂದು AFP ಶುಕ್ರವಾರ ವರದಿ ಮಾಡಿದೆ.
ಭಾರತದಲ್ಲಿ ಸೌರ ಯೋಜನೆಗಳಿಗೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದ ಮೇಲೆ ಗೌತಮ್ ಅದಾನಿ ವಿರುದ್ಧ ನವೆಂಬರ್‌ನಲ್ಲಿ ಅಮೆರಿಕದ ನ್ಯಾಯಾಲಯವೊಂದು ದೋಷಾರೋಪಣೆ ಮಾಡಿತ್ತು. ಇದತ ನಂತರ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರ ಆಡಳಿತವು ಶ್ರೀಲಂಕಾದಲ್ಲಿ ಅದಾನಿ ಗ್ರೂಪ್ ಯೋಜನೆಗಳ ಬಗ್ಗೆ ವಿಚಾರಣೆಯನ್ನು ಪ್ರಾರಂಭಿಸಿತ್ತು.
ಮೇ 2024 ರಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದ ರನಿಲ್ ವಿಕ್ರಮಸಿಂಘೆ ಅವರು ದೇಶದ ವಾಯುವ್ಯದಲ್ಲಿ ಯೋಜಿಸಲಾದ ಅದಾನಿ ಪವನ ವಿದ್ಯುತ್ ಸೌಲಭ್ಯದಿಂದ ಪ್ರತಿ ಕಿಲೋವ್ಯಾಟ್-ಗಂಟೆಗೆ $0.0826 ಕ್ಕೆ ವಿದ್ಯುತ್ ಖರೀದಿಸುವ ಒಪ್ಪಂದವನ್ನು ಅನುಮೋದಿಸಿದ್ದರು. ಆದಾಗ್ಯೂ, ಈ ತಿಂಗಳ ಆರಂಭದಲ್ಲಿ ಹಾಲಿ ಅಧ್ಯಕ್ಷ ದಿಸಾನಾಯಕೆ ಅವರ ಸಂಪುಟ ಒಪ್ಪಂದವನ್ನು ರದ್ದುಗೊಳಿಸಿದೆ ಎಂದು ಇಂಧನ ಸಚಿವಾಲಯದ ಅಧಿಕಾರಿಯೊಬ್ಬರು AFP ಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸರ್ಕಾರ ವಿದ್ಯುತ್ ಖರೀದಿ ಒಪ್ಪಂದವನ್ನು ರದ್ದುಗೊಳಿಸಿದೆ, ಆದರೆ ಯೋಜನೆಯನ್ನು ರದ್ದುಗೊಳಿಸಲಾಗಿಲ್ಲ. ಸಂಪೂರ್ಣ ಯೋಜನೆಯನ್ನು ಪರಿಶೀಲಿಸಲು ಸಮಿತಿಯನ್ನು ನೇಮಿಸಲಾಗಿದೆ.” ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ AFP ವರದಿ ಮಾಡಿದೆ.
ಮನ್ನಾರ್ ಮತ್ತು ಪೂನೆರಿನ್ ಪ್ರದೇಶಗಳಿಗೆ ಯೋಜಿಸಲಾಗಿರುವ 484 ಮೆಗಾವ್ಯಾಟ್ ಪವನ ವಿದ್ಯುತ್ ಸ್ಥಾವರದ ನಿರ್ಮಾಣವನ್ನು ಮರುಮೌಲ್ಯಮಾಪನ ಮಾಡಲು ಶ್ರೀಲಂಕಾದ ಸಚಿವ ಸಂಪುಟ ನಿರ್ಧರಿಸಿದೆ ಎಂದು ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿದೆ ಎಎಫ್‌ಪಿ ವರದಿ ಮಾಡಿದೆ. ಪರಿಸರ ಕಾಳಜಿಯ ಮೇರೆಗೆ ಈ ಯೋಜನೆಯನ್ನು ದೇಶದ ಸುಪ್ರೀಂ ಕೋರ್ಟ್‌ನಲ್ಲಿಯೂ ಪ್ರಶ್ನಿಸಲಾಗುತ್ತಿದೆ.
ಅದಾಗ್ಯೂ, ಶ್ರೀಲಂಕಾ ಸರ್ಕಾರವು ಯೋಜನೆ ರದ್ಧು ಮಾಡಿದೆ ಎಂಬ ವರದಿಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್, “ಮನ್ನಾರ್ ಮತ್ತು ಪೂನೆರಿನ್‌ನಲ್ಲಿನ ಪವನ ವಿದ್ಯುತ್ ಯೋಜನೆಗಳನ್ನು ರದ್ದುಗೊಳಿಸಲಾಗಿದೆ ಎಂಬ ವರದಿಗಳು ಸುಳ್ಳು ಮತ್ತು ದಾರಿತಪ್ಪಿಸುವವು” ಎಂದು ಹೇಳಿದೆ.
“ಯೋಜನೆಯನ್ನು ರದ್ದುಗೊಳಿಸಲಾಗಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳುತ್ತೇವೆ. ವಿಶೇಷವಾಗಿ ಹೊಸ ಸರ್ಕಾರದೊಂದಿಗೆ, ನಿಯಮಗಳು ಅವರ ಪ್ರಸ್ತುತ ಆದ್ಯತೆಗಳು ಮತ್ತು ಇಂಧನ ನೀತಿಗಳೊಂದಿಗೆ ಹೊಂದಿಕೆಯಾಗುತ್ತವೆ ಎಂದು ಖಚಿತಪಡಿಸಿಕೊಳ್ಳಲು [ಜನವರಿ 2, 2025] ರಂದು ಶ್ರೀಲಂಕಾದ ಸಚಿವ ಸಂಪುಟವು ಮೇ 2024 ರಲ್ಲಿ ಅನುಮೋದಿಸಲಾದ ಸುಂಕವನ್ನು ಮರುಮೌಲ್ಯಮಾಪನ ಮಾಡುವ ನಿರ್ಧಾರವು ಪ್ರಮಾಣಿತ ಪರಿಶೀಲನಾ ಪ್ರಕ್ರಿಯೆಯ ಭಾಗವಾಗಿ ಇದನ್ನು ನಡೆಸಲಾಗುತ್ತಿದೆ.” ಎಂದು ಅದಾನಿ ಗ್ರೂಪ್ ವಕ್ತಾರರು ಹೇಳಿದ್ದಾರೆ.
ಸಣ್ಣ ನವೀಕರಿಸಬಹುದಾದ ಇಂಧನ ಪೂರೈಕೆದಾರರು ಅದಾನಿ ಗ್ರೂಪ್ ಪ್ರಸ್ತಾಪಿಸಿದ ಬೆಲೆಯ ಸುಮಾರು ಮೂರನೇ ಎರಡರಷ್ಟು ಬೆಲೆಗೆ ವಿದ್ಯುತ್ ನೀಡುತ್ತಾರೆ ಎಂದು ಹೋರಾಟಗಾರರು ವಾದಿಸಿದ್ದಾರೆ.
ಶ್ರೀಲಂಕಾದ ಕೊಲಂಬೊ ಬಂದರಿನಲ್ಲಿ ಕೊಲಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್ ಎಂಬ $700 ಮಿಲಿಯನ್ ಮೌಲ್ಯದ ಆಳ-ನೀರಿನ ಕಂಟೇನರ್ ಟರ್ಮಿನಲ್ ಅನ್ನು ನಿರ್ಮಿಸುವಲ್ಲಿಯೂ ಅದಾನಿ ಗ್ರೂಪ್ ಸಮೂಹವು ಭಾಗಿಯಾಗಿದೆ.
2020 ಮತ್ತು 2024 ರ ನಡುವೆ ಅದಾನಿ ಗ್ರೀನ್ ಎನರ್ಜಿಗಾಗಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಅಥವಾ ಸುಮಾರು 2,236 ಕೋಟಿ ರೂ.ಗಳನ್ನು ಲಂಚವಾಗಿ ನೀಡಲು ಒಪ್ಪಿಕೊಂಡಿದ್ದಕ್ಕಾಗಿ ಗೌತಮ್ ಅದಾನಿ, ಅವರ ಸೋದರಳಿಯ ಸಾಗರ್ ಅದಾನಿ ಮತ್ತು ಇತರ ಆರು ಜನರ ವಿರುದ್ಧ ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಕಚೇರಿ ಕಳೆದ ತಿಂಗಳು ದೋಷಾರೋಪಣೆ ಮಾಡಿತ್ತು.
ಈ ಒಪ್ಪಂದಗಳ ಕಾರಣಕ್ಕೆ 20 ವರ್ಷಗಳಲ್ಲಿ $2 ಬಿಲಿಯನ್ ಅಥವಾ ಸುಮಾರು 16,880 ಕೋಟಿ ರೂ.ಗಳಷ್ಟು ಲಾಭವನ್ನು ಗಳಿಸುವ ನಿರೀಕ್ಷೆಯಿತ್ತು. ಈ ಆರೋಪಗಳಿಗೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಸಮನ್ಸ್ ಜಾರಿ ಮಾಡಿದೆ. ಅದಾಗ್ಯೂ, ಅದಾನಿ ಗ್ರೂಪ್ ಆರೋಪಗಳನ್ನು ನಿರಾಕರಿಸಿದ್ದು, ಅವುಗಳನ್ನು “ಆಧಾರರಹಿತ” ಎಂದು ಕರೆದಿದೆ.
ಈ ಆರೋಪಗಳು ಬೆಳಕಿಗೆ ಬಂದ ನಂತರ, ಕೀನ್ಯಾ ಕೂಡ ದೇಶದ ಪ್ರಾಥಮಿಕ ವಿಮಾನ ನಿಲ್ದಾಣದ ನಿಯಂತ್ರಣವನ್ನು ಅದಾನಿ ಗ್ರೂಪ್‌ಗೆ ನೀಡಬಹುದಾಗಿದ್ದ ಖರೀದಿ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆದೇಶಿಸಿದೆ.
ಇದನ್ನೂಓದಿ: ಗುಜರಾತ್| ಮದುವೆ ಮೆರವಣಿಗೆಗೆ ಮುನ್ನ ಪೊಲೀಸ್ ರಕ್ಷಣೆ ಕೋರಿದ ದಲಿತ ವಕೀಲ
ಗುಜರಾತ್| ಮದುವೆ ಮೆರವಣಿಗೆಗೆ ಮುನ್ನ ಪೊಲೀಸ್ ರಕ್ಷಣೆ ಕೋರಿದ ದಲಿತ ವಕೀಲ


