ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸೇರುವಂತೆ ಸರ್ಕಾರಿ ಕಾಲೇಜಿನ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಮಧ್ಯ ಪ್ರದೇಶದ ಉಪನ್ಯಾಸಕರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿದ ಹಿನ್ನೆಲೆ, ಮಧ್ಯ ಪ್ರದೇಶ ಹೈಕೋರ್ಟ್ ಉಪನ್ಯಾಸಕನ ಅರ್ಜಿಯನ್ನು ವಿಲೇವಾರಿ ಮಾಡಿದೆ.
ಅಧಿಕಾರಿಗಳು ಆರ್‌ಎಸ್‌ಎಸ್ ಸೇರುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಸಿಧಿ ಜಿಲ್ಲೆಯ ಮಜೌಲಿಯಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ಅವರಿದ್ದ ಏಕ ಸದಸ್ಯ ಪೀಠ ಬುಧವಾರ (ಜನವರಿ 22, 2025) ಉಪನ್ಯಾಸಕನ ಅರ್ಜಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ವಿಲೇವಾರಿ ಮಾಡಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಆರ್‌ಎಸ್‌ಎಸ್ ಸೇರದ್ದಕ್ಕೆ ಕಿರುಕುಳ : ಆರೋಪ
ಉಪನ್ಯಾಸಕನ ಆರೋಪದ ಕುರಿತು ಪರಿಶೀಲಿಸಲು ಸಿಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಸರ್ಕಾರ ಆದೇಶಿಸಲಿದೆ. ಆರೋಪ ನಿಜವಾಗಿದ್ದರೆ, ಸರ್ಕಾರದ ಆದೇಶದ ಪ್ರತಿ ತಲುಪಿದ 7 ದಿನಗಳ ಒಳಗೆ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ರಾಜ್ಯ ಸರ್ಕಾರದ ಪರ ವಕೀಲ ವಿ.ಎಸ್. ಚೌಧರಿ ಹೇಳಿದ್ದಾರೆ.
ಆರ್‌ಎಸ್‌ಎಸ್ ಸಿದ್ದಾಂತ ತನ್ನ ಕಕ್ಷಿದಾರನ ಸಿದ್ದಾಂತಕ್ಕೆ ಹೊಂದಾಣಿಕೆಯಾಗುವುದಿಲ್ಲ. ಆದ್ದರಿಂದ ಅವರು ಆ ಸಂಘಟನೆ ಸೇರಲು ಸಾಧ್ಯವಿಲ್ಲ. ಆರ್‌ಎಸ್‌ಎಸ್ ಸೇರಲು ನಿರಾಕರಿಸಿದ್ದಕ್ಕೆ ಕಾಲೇಜು ಅಧಿಕಾರಿಗಳು ತನ್ನ ಕಕ್ಷಿದಾರನಿಗೆ ಥಳಿಸಿ, ಬೆದರಿಕೆ ಹಾಕಿದ್ದಾರೆ ಎಂದು ಉಪನ್ಯಾಸಕನ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತನ್ನ ಕಕ್ಷಿದಾರ (ಉಪನ್ಯಾಸಕ) ಈಗಾಗಲೇ ಎಸ್ಪಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದಾರೆ. ಆದರೆ ಅವರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ವಕೀಲರು ಹೇಳಿದ್ದಾರೆ.
ಉತ್ತರ ಪ್ರದೇಶ | ಬಲವಂತದ ಮತಾಂತರ ಆರೋಪ; ಕ್ರಿಶ್ಚಿಯನ್ ದಂಪತಿಗೆ 5 ವರ್ಷ ಜೈಲು ಶಿಕ್ಷೆ


