ಯುವತಿಯೊಬ್ಬರ ಮೃತದೇಹವೊಂದರ ಚಿತ್ರದೊಂದಿಗೆ, ಮುಸ್ಲಿಂ ಪ್ರೇಮಿ ಈ ಯುವತಿಯನ್ನು ಕೊಂದಿದ್ದಾರೆ ಎಂದು ಪ್ರತಿಪಾದಿಸಿ ಬಿಜೆಪಿ ಬೆಂಬಲಿಗರು ವಾಟ್ಸಪ್, ಫೇಸ್‌ಬುಕ್, ಟ್ವಿಟರ್, ಇನ್ಸ್‌ಟಾಗ್ರಾಮ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಯುವತಿಯ ಮೃತದೇಹದ ಚಿತ್ರದೊಂದಿಗೆ, [ ನೀಲಂ,,, ಅಪ್ಪ ಅಮ್ಮನ ಮಾತು ಕೇಳದೆ, ಅವರ ಮಾತುಗಳನ್ನು ವಿರೋಧಿಸಿ “ಮಹಮ್ಮದ್ ಹಮೀದ್” ನನ್ನು ಮದುವೆಯಾಗಿ ಹೋದ 6 ತಿಂಗಳಲ್ಲಿ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ,,,] ಎಂಬ ಹೇಳಿಕೆಯನ್ನು ವೈರಲ್ ಮಾಡುತ್ತಿದ್ದಾರೆ. Fact Check | The girl was killed by her boyfriend Yuvraj Singh, not Mohammad Hameed
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಈ ಹೇಳಿಕೆಯನ್ನು ಬಿಜೆಪಿ ಐಟಿ ಸೆಲ್‌ನ ವಾಟ್ಸಪ್ ಗ್ರೂಪ್‌ಗಳು ಹಂಚಿಕೊಳ್ಳುತ್ತಿರುವುದು ನಾನುಗೌರಿ.ಕಾಂ ಗಮನಿಸಿದ್ದು, ಅದನ್ನೆ ಫೇಸ್‌ಬುಕ್, ಟ್ವಿಟರ್ ಮತ್ತು ಇನ್ಸ್‌ಟಾಗ್ರಾಮ್‌ನಲ್ಲಿ ಕೂಡಾ ವೈರಲ್ ಮಾಡಲಾಗುತ್ತಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದಾಗಿದೆ.

ವೈರಲ್ ಚಿತ್ರವನ್ನು ಪ್ರಗತಿ ಮೀಡಿಯಾ ಹಿಮಾಚಲ್ ಎಂಬ ಫೇಸ್‌ಬುಕ್ ಪೇಜ್ ಪೋಸ್ಟ್ ಮಾಡಿತ್ತು ಮತ್ತು ಯುವತಿಯ ಗುರುತು ಪತ್ತೆಗಾಗಿ ಕೋರಿತ್ತು. “ಪಸಿಯಾನ ಬಳಿಯ ಧಮೋ ಮಜ್ರಾ ಗ್ರಾಮದ ಭಾಕ್ರಾ ಕಾಲುವೆಯಲ್ಲಿ ಯುವತಿಯ ಶವ ಪತ್ತೆಯಾಗಿದೆ… ವಯಸ್ಸು ಸುಮಾರು ಇಪ್ಪತ್ತೆರಡು ವರ್ಷಗಳು…ಮೃತದೇಹವನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಇರಿಸಲಾಗಿದೆ.” ಎಂದು ಅದರ ಪೋಸ್ಟ್ ಹೇಳಿತ್ತು.
ಫ್ಯಾಕ್ಟ್‌ಚೆಕ್ | Fact Check
ವೈರಲ್ ಚಿತ್ರವನ್ನು ನಾನುಗೌರಿ.ಕಾಂ ರಿವರ್ಸ್ ಸರ್ಚ್ ಮೂಲಕ ಹುಡುಕಾಡಿದಾಗ crazynewsindia.com ಎಂಬ ಸುದ್ದಿ ವೆಬ್‌ಸೈಟ್‌ನಲ್ಲಿ ಈ ಚಿತ್ರ ನಮಗೆ ಕಂಡುಬಂದಿದೆ. ಜನವರಿ 23ರಂದು ಮಾಡಿದ ವರದಿಯಲ್ಲಿ, ಯುವತಿಯನ್ನು ಹಿಮಾಚಲ ಪ್ರದೇಶದ ಜೋಗಿಂದರ್‌ನಗರದ ನಿವಾಸಿ ಯುವತಿಯ ನಿಶಾ ಸೋನಿ ಎಂದು ಗುರುತಿಸಲಾಗಿದೆ.
ಈ ಸುಳಿವನ್ನು ಹಿಡಿದು ನಾವು ಹುಡುಕಾಡಿದಾಗ ಟ್ರಿಬ್ಯೂನ್ ಪತ್ರಿಕೆ ಈ ಬಗ್ಗೆ ವರದಿ ಮಾಡಿದ್ದು, ಯುವತಿಯ ಶವವನ್ನು ಬುಧವಾರ ಪಂಜಾಬ್‌ನ ರೋಪರ್ ಬಳಿಯ ಪಟಿಯಾಲ ಕಾಲುವೆಯಲ್ಲಿ ಪತ್ತೆ ಮಾಡಲಾಗಿತ್ತು ಎಂದು ಪತ್ರಿಕೆ ವರದಿ ಮಾಡಿದೆ.
ಅಲ್ಲದೆ, ಇಂಡಿಯನ್ ಎಕ್ಸ್‌ಪ್ರೆಸ್ ಕೂಡಾ ಈ ಘಟನೆಯನ್ನು ವರದಿ ಮಾಡಿದೆ. ವರದಿಯ ಪ್ರಕಾರ, “ಯುವತಿಯನ್ನು ಕಾಲುವೆಗೆ ತಳ್ಳಿ ಕೊಂದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯು ಪೊಲೀಸ್ ಸಿಬ್ಬಂದಿಯಾಗಿದ್ದ, ಯುವರಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿ ವಿವಾಹಿತನಾಗಿದ್ದು, ಯುವತಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಆರೋಪಿಯು ತನ್ನ ಪತ್ನಿ ವಿದೇಶದಿಂದ ಭಾರತಕ್ಕೆ ಮರಳುತ್ತಿದ್ದರಿಂದ ಬಲಿಪಶುವನ್ನು ತೊಡೆದುಹಾಕಲು ಬಯಸಿದ್ದ. ಹಾಗಾಗಿ, ಜನವರಿ 20 ರ ರಾತ್ರಿ ಯುವತಿಯನ್ನು ಭೇಟಿಯಾಗಿ ಪತ್ರೇರಿ ಜಟ್ಟನ್ ಗ್ರಾಮದ ಭಖ್ರಾ ಕಾಲುವೆಯ ಸೇತುವೆಯ ಬಳಿಗೆ ಕರೆದೊಯ್ದು ಅಲ್ಲಿ ಆಕೆಯನ್ನು ಕಾಲುವೆಗೆ ತಳ್ಳಿದ್ದನು. ಜನವರಿ 22 ರಂದು, ಪಟಿಯಾಲ ಜಿಲ್ಲೆಯ ಪಾಸಿಯಾನ ಸೇತುವೆಯ ಬಳಿ ಯುವತಿಯ ಶವವನ್ನು ಹೊರತೆಗೆದರು ಮತ್ತು ಕುಟುಂಬವು ಆಕೆಯನ್ನು ಗುರುತಿಸಿತು.
ಮೃತ ಯುವತಿ ಚಂಡೀಗಢದಲ್ಲಿ ಬಿಎಸ್ಸಿ (ವೈದ್ಯಕೀಯ) ಪದವಿ ಪಡೆದಿದ್ದು, ಪ್ರಸ್ತುತ ಚಂಡೀಗಢದ ಸಂಸ್ಥೆಯಿಂದ ಗಗನಸಖಿಯಾಗಲು ತರಬೇತಿ ಪಡೆಯುತ್ತಿದ್ದರು. ಅವರು ಮೊಹಾಲಿಯ ಸೆಕ್ಟರ್ 123 ರಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಅಲ್ಲದೆ, ಈ ಘಟನೆಯನ್ನು ನ್ಯೂಸ್18 ಪಂಜಾಬ್ ಕೂಡಾ ವರದಿ ಮಾಡಿದ್ದು, ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಘಟನೆಯ ಎಫ್‌ಐಆರ್ ಅನ್ನು ಪಡೆದುಕೊಂಡಿದ್ದು, ಅದರಲ್ಲಿ ಆರೋಪಿ ಹೆಸರು ಕರ್ನೈಲ್ ಸಿಂಗ್ ಅವರ ಮಗ ಯುವರಾಜ್ ಸಿಂಗ್ ಎಂದು ಹೆಸರಿಸಿರುವುದು ಕಾಣಬಹುದಾಗಿದೆ.
ಒಟ್ಟಿನಲ್ಲಿ ಹೇಳಬಹುದಾಗದರೆ, [ ನೀಲಂ,,, ಅಪ್ಪ ಅಮ್ಮನ ಮಾತು ಕೇಳದೆ, ಅವರ ಮಾತುಗಳನ್ನು ವಿರೋಧಿಸಿ “ಮಹಮ್ಮದ್ ಹಮೀದ್” ನನ್ನು ಮದುವೆಯಾಗಿ ಹೋದ 6 ತಿಂಗಳಲ್ಲಿ ಕಾಲುವೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ,,,] ಎಂಬ ಬರಹದೊಂದಿಗೆ ಪ್ರತಿಪಾದಿಸಿ ವೈರಲ್ ಆಗಿರುವ ಚಿತ್ರವೂ ನಿಶಾ ಸೋನಿ ಎಂಬ ಹಿಮಾಚಲ ಪ್ರದೇಶದ ಯುವತಿಯೊಬ್ಬರ ಚಿತ್ರವಾಗಿದೆ. ಈ ಯುವತಿಯನ್ನು ಕೊಂದಿದ್ದು ಅವರ ಪ್ರೇಮಿ ಯುವರಾಜ್ ಸಿಂಗ್ ಎಂಬ ಆರೋಪಿಯಾಗಿದ್ದಾರೆ. ಈ ಘಟನೆಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ, ಯುವತಿಯ ಪ್ರೇಮಿಯ ಹೆಸರು ಮಹಮ್ಮದ್ ಹಮೀದ್ ಅಲ್ಲ.


