ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವಿವೇಕ್ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್. ವಿವೇಕಾನಂದ ಅಲಿಯಾಸ್ ಕಿಂಗ್ಸ್ ಕೋರ್ಟ್ ವಿವೇಕ್ ಅವರನ್ನು ಕೋಟ್ಯಾಂತರ ರೂಪಾಯಿ ಲಂಚ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್‌ನ (ಬಿಟಿಸಿಎಲ್) ಸ್ಟ್ಯುವರ್ಡ್ ಆಗಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಲೋಕಾಯುಕ್ತ ಪೊಲೀಸರ ಅಂತಿಮ ವರದಿಗೆ ಆಕ್ಷೇಪಿಸಿ, ದೂರುದಾರ ಬೆಂಗಳೂರಿನ ಬಿಜೆಪಿ ಮುಖಂಡ ಎನ್. ಆರ್ ರಮೇಶ್ ಅವರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಆದೇಶ ಪ್ರಕಟಿಸಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
“ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ 2024ರ ಸೆಪ್ಟೆಂಬರ್ 12 ಸಲ್ಲಿಸಿರುವ ಅಂತಿಮ ವರದಿಯನ್ನು ಒಪ್ಪಿಕೊಳ್ಳಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದಾಗಿ ವರದಿ ತಿಳಿಸಿದೆ.
ಸಿದ್ದರಾಮಯ್ಯ ಅವರು ಲಂಚ ಪಡೆದು ವಿವೇಕಾನಂದ ಅವರನ್ನು ಬಿಟಿಸಿಎಲ್‌ಗೆ ಸ್ಟ್ಯುವರ್ಡ್ ಆಗಿ ನೇಮಕ ಮಾಡಿದ್ದಾರೆ ಎಂಬುವುದಕ್ಕೆ ಯಾವುದೇ ದಾಖಲೆಗಳು ಇಲ್ಲ ಎಂದು ಲೋಕಾಯುಕ್ತದ ಪ್ರಾಥಮಿಕ ತನಿಖಾ ವರದಿಯಲ್ಲಿ ಹೇಳಲಾಗಿದೆ. ದೂರುದಾರರು ತನಿಖೆಗೆ ಹಾಜರಾಗದ ಕಾರಣ, ಆರೋಪಿಗಳ ವಿರುದ್ಧ ಮುಂದುವರಿಯಲು ಸೂಕ್ತ ದಾಖಲೆಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣ ಮುಕ್ತಾಯ ವರದಿಯನ್ನು ಸಲ್ಲಿಸಲಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ವಿವರಿಸಲಾಗಿದೆ.
“ಲೋಕಾಯುಕ್ತ ಸಲ್ಲಿಸಿರುವ ಮುಕ್ತಾಯ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, 1998-99ರಲ್ಲಿ ವಿವೇಕಾನಂದ ಅವರು ಮೈಸೂರು ಟರ್ಫ್ ಕ್ಲಬ್‌ನ ಸ್ಟ್ಯುವರ್ಡ್ ಆಗಿದ್ದರು. 2003-04ರಲ್ಲಿ ಬೆಂಗಳೂರು ಟರ್ಫ್ ಕ್ಲಬ್‌ಗೆ (ಬಿಟಿಸಿ) ಸ್ಟ್ಯುವರ್ಡ್ ಆಗಿ ನಾಮನಿರ್ದೇಶನ ಮಾಡಲಾಗಿತ್ತು. ಆನಂತರ ಮತ್ತೆ ಬಿಟಿಸಿ ಸ್ಟ್ಯುವರ್ಡ್ ಆಗಿ ನಾಮನಿರ್ದೇಶನ ಮಾಡಲಾಗಿತ್ತು. ಈ ಎಲ್ಲಾ ವಿಚಾರಗಳು ಗಮನಿಸಿದರೆ ಸರ್ಕಾರವು ತನಗೆ ದೊರೆತಿರುವ ವಿಶೇಷ ಅಧಿಕಾರವನ್ನು ಸ್ವೇಚ್ಛೆಯಿಂದ ಬಳಸಿ ನೇಮಕ ಮಾಡಬೇಕಾದ ಹೊಸಬರು ವಿವೇಕಾನಂದ ಅವರಲ್ಲ. ಈ ನೆಲೆಯಲ್ಲಿ ಸ್ಟ್ಯುವರ್ಡ್ ಆಗಿ ನೇಮಕವಾಗಲು ವಿವೇಕಾನಂದ ಅವರು ಅರ್ಹರಾಗಿದ್ದು, ಸ್ವೇಚ್ಛೆಯ ನಡೆ ಅನುಸರಿಸಬೇಕಿಲ್ಲ. ಇದರಿಂದ ವಿವೇಕಾನಂದ ಅವರ ನೇಮಕಾತಿ ಸಮರ್ಥನೀಯವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಸಿದ್ದರಾಮಯ್ಯ ಅವರು ಸಲ್ಲಿಸಿರುವ ಆದಾಯ ತೆರಿಗೆ ವರದಿ, ಅಫಿಡವಿಟ್, ಅವರ ಬ್ಯಾಂಕ್ ಖಾತೆ ಹಾಗೂ ವಿವೇಕಾನಂದ ಅವರ ಘೋಷಣಾ ಪತ್ರವನ್ನು ಲೋಕಾಯುಕ್ತ ಸಂಗ್ರಹಿಸಿದೆ. ವಿವೇಕಾನಂದ ಅವರ ಹೇಳಿಕೆಯನ್ನು ಪರಿಶೀಲಿಸಲಾಗಿದ್ದು, ಬಡ್ಡಿರಹಿತ ಸಾಲವನ್ನು ಸಿದ್ಧರಾಮಯ್ಯ ಅವರಿಗೆ ನೀಡಲಾಗಿದೆ ಎಂದು ವಿವೇಕಾನಂದ ಹೇಳಿದ್ದು, ಅವರ ಐಟಿ ದಾಖಲೆಯಲ್ಲಿ ಉಲ್ಲೇಖಿತವಾಗಿದೆ. ಗೌರವಾನ್ವಿತ ಹುದ್ದೆಯ ಸ್ಟ್ಯುವರ್ಡ್‌ಶಿಪ್‌ಗೆ ನೇಮಕವಾಗುವ ಎಲ್ಲಾ ಅರ್ಹತೆಯನ್ನು ವಿವೇಕಾನಂದ ಹೊಂದಿದ್ದು, ಇದರಿಂದ ಅಕ್ರಮವಾಗಿ ಸಂಪಾದಿಸುವುದು ಏನೂ ಇಲ್ಲ. ಹೀಗಾಗಿ, ಹಾಲಿ ಪ್ರಕರಣಕ್ಕೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್ 7,8 ಅಥವಾ 13 ಅನ್ವಯಿಸುವುದಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.
“ದೂರುದಾರರ ಪರ ವಕೀಲರು ತನಿಖಾ ಸಂಸ್ಥೆಗೆ ಅಗತ್ಯವಾದ ಸಮಯ ನೀಡಿಲ್ಲ ಎಂದಿದ್ದಾರೆ. ಇದನ್ನು ಒಪ್ಪಿಕೊಳ್ಳುವುದಾದರೆ ದೂರುದಾರರು ಪ್ರತಿಭಟನಾ ಅರ್ಜಿ ಸಲ್ಲಿಕೆಯ ವಾದದ ಸಂದರ್ಭದಲ್ಲಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಯಾರೂ ಅವರನ್ನು ನಿರ್ಬಂಧಿಸಿರಲಿಲ್ಲ. ಹಾಲಿ ಪ್ರಕರಣದಲ್ಲಿ ಆರೋಪ ಮಾಡಿರುವುದನ್ನು ಹೊರತುಪಡಿಸಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.
“2014ರಲ್ಲಿ ಕೃತ್ಯ ನಡೆದಿದ್ದು, 2022ರಲ್ಲಿ ಮೊದಲ ಬಾರಿಗೆ ಎಂಟು ವರ್ಷಗಳ ಬಳಿಕ ದೂರು ದಾಖಲಿಸಲಾಗಿದೆ. ತಡವಾಗಿ ದೂರು ದಾಖಲಿಸಿರುವುದಕ್ಕೆ ನ್ಯಾಯಾಲಯವು ಯಾವುದೇ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಆದರೆ, ತಡವಾಗಿ ದೂರು ದಾಖಲಿಸಲು ಕಾರಣವೇನು ಎಂದ ಹೇಳಿಲ್ಲ” ಎಂದು ನ್ಯಾಯಾಲಯ ತಿಳಿಸಿದೆ.
“ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ಸ್ವೀಕರಿಸಿರುವ 1.30 ಕೋಟಿ ರೂಪಾಯಿಯನ್ನು ಅವರಿಗೆ ಸ್ಟ್ಯುವರ್ಡ್ ಆಗಿ ನಾಮನಿರ್ದೇಶನ ಮಾಡಿರುವುದಕ್ಕೆ ಪಡೆದಿರುವ ಹಣ ಎನ್ನಲಾಗದು. ಈ ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ವಿವೇಕಾನಂದ ಅವರ ವಿರುದ್ಧ ಪ್ರಕ್ರಿಯೆ ಮುಂದುವರಿಸಲು ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ತನಿಖಾ ಸಂಸ್ಥೆಯು ಸಲ್ಲಿಸಿರುವ ಮುಕ್ತಾಯ ವರದಿಯನ್ನು ಒಪ್ಪಿಕೊಳ್ಳಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
ಕೃಪೆ : ಬಾರ್ & ಬೆಂಚ್
ಸಾಲ ಪಡೆದವರ ರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಶೀಘ್ರದಲ್ಲಿ ಹೊಸ ಕಾನೂನು ಜಾರಿ : ಸಿಎಂ ಸಿದ್ದರಾಮಯ್ಯ


