ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಹಿಂದೆಯಿದ್ದ ಪ್ರಮುಖ ವ್ಯಕ್ತಿ ಸಾಧ್ವಿ ರಿತಂಭರ, ಮಂದಿರದ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ಮತ್ತು ಮಂದಿರ ಪವಿತ್ರೀಕರಣದ ಮಹೂರ್ತ ನಿರ್ಧರಿಸುವ ಜವಾಬ್ದಾರಿ ವಹಿಸಿಕೊಂಡಿದ್ದ ವೇದ ವಿದ್ವಾಂಸ ಗಣೇಶ್ವರ್ ಶಾಸ್ತ್ರಿ ದ್ರಾವಿಡ್ ಈ ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತ ಪಟ್ಟಿಯಲ್ಲಿದ್ದಾರೆ. ಇವರನ್ನು ಕ್ರಮವಾಗಿ ಸಾಮಾಜಿಕ ಕಾರ್ಯ, ವಾಸ್ತುಶಿಲ್ಪ ಮತ್ತು ಸಾಹಿತ್ಯ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವಿಶ್ವ ಹಿಂದೂ ಪರಿಷತ್‌ನ (ವಿಹೆಚ್‌ಪಿ) ಮಹಿಳಾ ವಿಭಾಗ ‘ದುರ್ಗಾ ವಾಹಿನಿಯ’ ಸಂಸ್ಥಾಪಕಿ ಸಾಧ್ವಿ ರಿತಂಭರ 1989-90ರ ಅವಧಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಅಭಿಯಾನದ ಭಾಗವಾಗಿ ದೇಶದಾದ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಚಂದ್ರಕಾಂತ್ ಸೋಂಪುರ ಗುಜರಾತ್‌ನ ದೇವಾಲಯ ನಿರ್ಮಾಣಕಾರರ ಕುಟುಂಬದಿಂದ ಬಂದವರು. ದೇಶದಾದ್ಯಂತ 200ಕ್ಕೂ ಹೆಚ್ಚು ದೇವಾಲಯಗಳ ನಿರ್ಮಾಣದಲ್ಲಿ ಸೋಂಪುರ ಕುಟುಂಬವು ಪ್ರಮುಖ ಪಾತ್ರ ವಹಿಸಿದೆ. ಗುಜರಾತ್‌ನ ಸೋಮನಾಥ ದೇವಾಲಯದ ಪುನರ್ನಿರ್ಮಾಣದಲ್ಲೂ ಈ ಕುಟುಂಬ ಭಾಗಿಯಾಗಿದೆ.
ವೇದ ವಿದ್ವಾಂಸ ಎನ್ನಲಾದ ಗಣೇಶ್ವರ್ ಶಾಸ್ತ್ರಿ ದ್ರಾವಿಡ್, ರಾಮ ಮಂದಿರದ ಭೂಮಿ ಪೂಜೆಯ ಮಹೂರ್ತ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆಯಲ್ಲಿಯೂ ಭಾಗಿಯಾಗಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದಾಗ ಅವರ ಪಕ್ಕದಲ್ಲಿದ್ದ ಏಕೈಕ ವ್ಯಕ್ತಿ ಇವರಾಗಿದ್ದಾರೆ.
ಸಾಧ್ವಿ ರಿತಂಭರ ಅವರಿಗೆ ಪದ್ಮಭೂಷಣ, ಚಂದ್ರಕಾಂತ್ ಸೋಂಪುರ ಮತ್ತು ಗಣೇಶ್ವರ್ ಶಾಸ್ತ್ರಿ ದ್ರಾವಿಡ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಈ ಬಾರಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದ ವಿವಿಧ ಕ್ಷೇತ್ರಗಳ 139 ಸಾಧಕರಿ ಪದ್ಮ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಈ ಪೈಕಿ 7 ಮಂದಿಯನ್ನು ಪದ್ಮ ವಿಭೂಷಣ, 19 ಜನರನ್ನು ಪದ್ಮ ಭೂಷಣ ಮತ್ತು 113 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನಟ ಅನಂತನಾಗ್, ರಿಕ್ಕಿ ಕೇಜ್ ಸೇರಿ ಕರ್ನಾಟಕದ 9 ಮಂದಿಗೆ ವಿವಿಧ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ.
ಕೇಂದ್ರದ ‘ಕೃಷಿ ಮಾರುಕಟ್ಟೆ ನೀತಿ’ ತಿರಸ್ಕರಿಸಿದ ರೈತ ಸಂಘಗಳು : ದೇಶದಾದ್ಯಂತ ಬೃಹತ್ ಹೋರಾಟಕ್ಕೆ ನಿರ್ಧಾರ


