ಉತ್ತರಾಖಂಡದಲ್ಲಿ ಜನವರಿ 27ರಿಂದ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ (ಜ.25) ತಿಳಿಸಿದ್ದಾರೆ.
ಸೋಮವಾರ (ನಾಳೆ) ಮಧ್ಯಾಹ್ನ 12.30ಕ್ಕೆ ಮುಖ್ಯಮಂತ್ರಿಗಳು ಸಚಿವಾಲಯದಲ್ಲಿ ಏಕರೂಪ ನಾಗರಿಕ ಸಂಹಿತೆ ಪೋರ್ಟಲ್ ಅನ್ನು ಉದ್ಘಾಟಿಸಲಿದ್ದಾರೆ ಮತ್ತು ಕಾನೂನಿನಡಿಯಲ್ಲಿ ನಿಯಮಗಳನ್ನು ಅದೇ ದಿನ ಗೆಜೆಟ್‌ನಲ್ಲಿ ತಿಳಿಸಲಾಗುವುದು ಎಂದು ಗೃಹ ಕಾರ್ಯದರ್ಶಿ ಶೈಲೇಶ್ ಬಗೌಲಿ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಏಕರೂಪ ನಾಗರಿಕ ಸಂಹಿತೆಯು ಎಲ್ಲಾ ನಾಗರಿಕರ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಸ್ವೀಕಾರವನ್ನು ನಿಯಂತ್ರಿಸುವ ಕಾನೂನುಗಳ ಸಾಮಾನ್ಯ ಗುಂಪಾಗಿದೆ.
ಪ್ರಸ್ತುತ, ವಿವಿಧ ಧಾರ್ಮಿಕ ಮತ್ತು ಬುಡಕಟ್ಟು ಗುಂಪುಗಳ ಅವರವರ ವೈಯಕ್ತಿಕ, ಸಮುದಾಯದ ನಿರ್ದಿಷ್ಟ ಕಾನೂನುಗಳನ್ನು ಆಧರಿಸಿವೆ. ಹೆಚ್ಚಾಗಿ ಧಾರ್ಮಿಕ ಗ್ರಂಥಗಳನ್ನು ಅನುಸರಿಸಲಾಗಿದೆ.
ಏಕರೂಪ ನಾಗರಿಕ ಸಂಹಿತೆ ಒಮ್ಮೆ ಜಾರಿಗೆ ಬಂದರೆ, ಉತ್ತರಾಖಂಡ ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ಮೊದಲ ಭಾರತೀಯ ರಾಜ್ಯವಾಗಲಿದೆ. 1867ರಲ್ಲಿ ಪೋರ್ಚುಗೀಸ್ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಂಡಾಗಿನಿಂದ ಗೋವಾದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಲ್ಲಿದೆ.
“ಏಕರೂಪ ನಾಗರಿಕ ಸಂಹಿತೆ ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ. ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಖಚಿತಪಡಿಸುತ್ತದೆ” ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
“ಏಕರೂಪ ನಾಗರಿಕ ಸಂಹಿತೆಯಡಿಯಲ್ಲಿ, ಜಾತಿ, ಧರ್ಮ, ಪ್ರದೇಶ ಮತ್ತು ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುವ ವೈಯಕ್ತಿಕ ನಾಗರಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಕಾನೂನುಗಳಲ್ಲಿ ಏಕರೂಪತೆಯನ್ನು ತರಲು ಪ್ರಯತ್ನಿಸಲಾಗಿದೆ” ಎಂದಿದೆ.
मुख्यमंत्री श्री पुष्कर सिंह धामी ने कहा कि राज्य में 27 जनवरी 2025 से समान नागरिक संहिता (यूसीसी) लागू की जाएगी। उत्तराखण्ड स्वतंत्र भारत का पहला राज्य बनेगा जहां यह कानून प्रभावी होगा। यूसीसी लागू करने के लिए सभी आवश्यक तैयारियां पूरी कर ली गई हैं, जिसमें अधिनियम की नियमावली को… pic.twitter.com/2O9vanPCeI
— CM Office Uttarakhand (@ukcmo) January 25, 2025
ಫೆಬ್ರವರಿ 5, 2024 ರಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉತ್ತರಾಖಂಡ ಸಚಿವ ಸಂಪುಟವು ಏಕರೂಪ ನಾಗರಿಕ ಸಂಹಿತೆಯ ಕರಡು ವರದಿಯನ್ನು ಅನುಮೋದಿಸಿತು.
ನಂತರ ಎರಡು ದಿನಗಳ ಕಾಲ ಚರ್ಚೆ ನಡೆಸಿ ವಿಧಾನಸಭೆಯಲ್ಲಿ ಧ್ವನಿ ಮತದ ಮೂಲಕ ಮಸೂದೆಗೆ ಅಂಗೀಕಾರ ಪಡೆಯಲಾಗಿತ್ತು. ರಾಜ್ಯದ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರು ಕಳೆದ ವರ್ಷ ಫೆಬ್ರವರಿ 28ರಂದು ಮಸೂದೆಗೆ ಅಂಕಿತ ಹಾಕಿದ್ದರು.
ನಂತರ, ರಾಜ್ಯ ಸರ್ಕಾರವು ನಿಯಮಗಳ ರಚನೆ ಮತ್ತು ಅನುಷ್ಠಾನ ಸಮಿತಿಯನ್ನು ರಚಿಸಿತ್ತು. ಮಾರ್ಚ್ 14ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆ ಮಸೂದೆಯನ್ನು ಅನುಮೋದಿಸಿದ್ದಾರೆ ಎಂದು ಸಿಎಂ ಧಾಮಿ ಘೋಷಿಸಿದ್ದರು.
2025ರ ಜನವರಿ 20ರಂದು ರಾಜ್ಯ ಸಚಿವ ಸಂಪುಟವು ಏಕರೂಪ ನಾಗರಿಕ ಸಂಹಿತೆಯ ನಿಯಮಗಳ ಕೈಪಿಡಿಯನ್ನು ಅನುಮೋದಿಸಿತ್ತು.
ಪಿತೃಪ್ರಧಾನ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಮಹಿಳೆಯರಿಗೆ ಸಮಾನತೆ ಮತ್ತು ನ್ಯಾಯವನ್ನು ಒದಗಿಸುವುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶವಾಗಿದೆ ಎಂದು ಉತ್ತರಾಖಂಡದ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಹೇಳಿಕೊಂಡಿದೆ.
ಸಾಮಾನ್ಯ ವೈಯಕ್ತಿಕ ಕಾನೂನನ್ನು ಪರಿಚಯಿಸುವುದು ಬಹಳ ಹಿಂದಿನಿಂದಲೂ ಬಿಜೆಪಿಯ ಕಾರ್ಯಸೂಚಿಯಲ್ಲಿದೆ ಮತ್ತು ಪಕ್ಷದ ಆಳ್ವಿಕೆಯಲ್ಲಿರುವ ಹಲವಾರು ರಾಜ್ಯಗಳು ಅದನ್ನು ಜಾರಿಗೆ ತರುವತ್ತ ಹೆಜ್ಜೆ ಹಾಕುತ್ತಿವೆ. ಉತ್ತರಾಖಂಡದಲ್ಲಿ ನಿಯಮಗಳ ಅನುಷ್ಠಾನವು ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳು ಇದನ್ನು ಅನುಸರಿಸಲು ಒಂದು ಪೂರ್ವನಿದರ್ಶನವಾಗಬಹುದು.
ಏಕರೂಪ ನಾಗರಿಕ ಸಂಹಿತೆಯ ವಿಷಯದಲ್ಲಿ ಬಿಜೆಪಿ ಮುಖ್ಯವಾಗಿ ಮುಸ್ಲಿಂ ವೈಯಕ್ತಿಕ ಕಾನೂನನ್ನು ಗುರಿಯಾಗಿಸಿಕೊಂಡಿದೆ. ಮುಸ್ಲಿಂ ಪುರುಷರು ಬಹುಪತ್ನಿತ್ವವನ್ನು ಅನುಸರಿಸಲು, ಹೆಚ್ಚಿನ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು, ವಿಚ್ಛೇದನ ನೀಡಲು ಮತ್ತು ಜೀವನಾಂಶ ನಿರಾಕರಿಸಲು ಅವಕಾಶ ನೀಡುವ ಮೂಲಕ ವೈಯಕ್ತಿಕ ಕಾನೂನು ಮಹಿಳೆಯರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಬಿಜೆಪಿ ವಾದಿಸಿದೆ.
ಆದಾಗ್ಯೂ, ಕಾನೂನು ತಜ್ಞರು ಈ ಮಸೂದೆಯನ್ನು ಪ್ರಾಥಮಿಕವಾಗಿ ಹಿಂದೂ ವೈಯಕ್ತಿಕ ಕಾನೂನಿನಿಂದ ಪಡೆಯಲಾಗಿದ್ದು, ಅಲ್ಪಸಂಖ್ಯಾತ ಸಮುದಾಯಗಳ ವೈಯಕ್ತಿಕ ಕಾನೂನು ಪದ್ಧತಿಗಳನ್ನು ಅಳಿಸಿಹಾಕಲು ಕಾರಣವಾಗಬಹುದು ಎಂದು ಹೇಳಿದ್ದಾರೆ.
ಮಹಿಳಾ ಗುಂಪುಗಳ ಸಮೂಹವಾದ ಉತ್ತರಾಖಂಡ ಮಹಿಳಾ ಮೋರ್ಚಾ, ಈ ಮಸೂದೆಯು “ಹಿಂದೂ ಕಾನೂನು ಮಾದರಿಯನ್ನು ಅನುಸರಿಸುತ್ತಿದೆ” ಎಂದು ಟೀಕಿಸಿತ್ತು. ಸಾರ್ವಜನಿಕ ಹೇಳಿಕೆಯಲ್ಲಿ, ಮಸೂದೆಯು “ಕ್ರಿಶ್ಚಿಯನ್ ಕುಟುಂಬ ಕಾನೂನು ಮತ್ತು ಪಾರ್ಸಿ ಕುಟುಂಬ ಕಾನೂನಿನ ಅನ್ವಯದ ಬಗ್ಗೆ ಸಂಪೂರ್ಣವಾಗಿ ಮೌನವಾಗಿದೆ”. ಇದು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎಂದಿದೆ.
ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಮನೆಯಲ್ಲೇ ಕುಸ್ತಿ ಒಕ್ಕೂಟದ ಕಚೇರಿ : ವಿವಾದದ ಬಳಿಕ ಸ್ಥಳಾಂತರಕ್ಕೆ ನಿರ್ಧಾರ


