ರೈತರು ಭಾನುವಾರ ಹರಿಯಾಣದ ಕರ್ನಾಲ್‌ನಲ್ಲಿ ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ್ದು, ಕೇಂದ್ರವು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನುಬದ್ಧ ಖಾತರಿ ನೀಡಬೇಕೆಂದು ಹೊಸ ಬೇಡಿಕೆಗಳನ್ನು ಮುಂದಿಟ್ಟರು. ಗಣರಾಜ್ಯೋತ್ಸವದಂದು ಕೇಂದ್ರದ ವಿರುದ್ಧ ಪ್ರತಿಭಟಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ರೈತರ ಒಕ್ಕೂಟವು ನೀಡಿದ ರಾಷ್ಟ್ರವ್ಯಾಪಿ ಕರೆಯ ಭಾಗವಾಗಿ ಈ ಮೆರವಣಿಗೆ ಇದೆ.
ಜನವರಿ 8 ರಂದು, ನೂರಾರು ಟ್ರ್ಯಾಕ್ಟರ್‌ಗಳು ಬೀದಿಗಿಳಿಯುತ್ತವೆ ಎಂದು ಹೇಳುತ್ತಾ ಎಸ್‌ಕೆಎಂ ರಾಷ್ಟ್ರವ್ಯಾಪಿ ಮೆರವಣಿಗೆಗೆ ಕರೆ ನೀಡಿತ್ತು.
ಫೆಬ್ರವರಿ 13, 2024 ರಿಂದ, ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಅಡಿಯಲ್ಲಿ ರೈತರು ಖಾನೌರಿಯ ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಇತರ ಬೇಡಿಕೆಗಳಲ್ಲಿ ಸಾಲ ಮನ್ನಾ, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಬಲಿಪಶುಗಳಿಗೆ ಪರಿಹಾರ ಸೇರಿವೆ.
ಅಮೃತಸರದಿಂದ ಇಂದಿನ ಪ್ರತಿಭಟನಾ ಮೆರವಣಿಗೆಯ ಕುರಿತು ಮಾತನಾಡಿದ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್, “75 ವರ್ಷಗಳ ಹಿಂದೆ ಈ ದಿನದಂದು ಭಾರತದ ಸಂವಿಧಾನವನ್ನು ಅಂಗೀಕರಿಸಲಾಯಿತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ರೈತರು ಮತ್ತು ಕಾರ್ಮಿಕರ ಧ್ವನಿಯನ್ನು ಗೌರವಿಸುವುದಿಲ್ಲ. ಅವರ ಬೇಡಿಕೆಗಳನ್ನು ಸ್ವೀಕರಿಸುವುದಿಲ್ಲ” ಎಂದು ಹೇಳಿದರು.
“ಇಂದಿನ ಟ್ರ್ಯಾಕ್ಟರ್ ಮೆರವಣಿಗೆ ಮಧ್ಯಾಹ್ನದಿಂದ ಪ್ರಾರಂಭವಾಗಿ ಮಧ್ಯಾಹ್ನ 2.30 ರವರೆಗೆ ಮುಂದುವರಿಯುತ್ತದೆ. ಪಂಜಾಬ್, ಹರಿಯಾಣ, ದಕ್ಷಿಣ ರಾಜ್ಯಗಳು ಮತ್ತು ಮಧ್ಯಪ್ರದೇಶ ಸೇರಿದಂತೆ ದೇಶಾದ್ಯಂತ ಲಕ್ಷಾಂತರ ಟ್ರ್ಯಾಕ್ಟರ್‌ಗಳು ಕೇಂದ್ರದ ಮೇಲೆ ಒತ್ತಡ ಹೇರುವ ಪ್ರಯತ್ನದಲ್ಲಿ ಬೀದಿಗಿಳಿಯುತ್ತವೆ” ಎಂದು ಅವರು ಹೇಳಿದರು.
ಈ ಮಧ್ಯೆ, ಕರ್ನಾಲ್‌ನ ರೈತರು ಪ್ರತಿಭಟನಾ ಮೆರವಣಿಗೆಗೆ ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಸಿದ್ಧರಾಗಿದ್ದರು, ಅವರಲ್ಲಿ ಹಲವರು ಹರಿಯಾಣದ ನಗರದ ಬೀದಿಗಳಿಗೆ ಇಳಿದರು.
ಟ್ರ್ಯಾಕ್ಟರ್ ಮೆರವಣಿಗೆಗೆ ಒಂದು ದಿನ ಮೊದಲು, ಎಸ್‌ಕೆಎಂ ಹೊಸ ಎಚ್ಚರಿಕೆಯನ್ನು ನೀಡಿತು. ಕೇಂದ್ರವು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ದೆಹಲಿಯ ಗಡಿಗಳಲ್ಲಿ 2020-21ರ ಪ್ರತಿಭಟನೆಗಳಿಗಿಂತ ದೊಡ್ಡದಾದ ದೇಶಾದ್ಯಂತ ಆಂದೋಲನಗಳನ್ನು ನಡೆಸುವುದಾಗಿ ಹೇಳಿದೆ.
ರೈತರು ಹಳೆಯ ಸ್ವಾಧೀನ ಕಾನೂನಿನಡಿಯಲ್ಲಿ ಶೇ. 10 ರಷ್ಟು ಪ್ಲಾಟ್‌ಗಳನ್ನು ಹಂಚಿಕೆ ಮಾಡಬೇಕು. ಪರಿಹಾರದ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು. ಜನವರಿ 1, 2014 ರ ನಂತರ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಶೇ. 20 ರಷ್ಟು ಪ್ಲಾಟ್‌ಗಳನ್ನು ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಭೂಹೀನ ರೈತರ ಮಕ್ಕಳಿಗೆ ಉದ್ಯೋಗ ಮತ್ತು ಪುನರ್ವಸತಿ ಪ್ರಯೋಜನಗಳನ್ನು ನೀಡುವುದು, ಹೈ ಪವರ್ ಕಮಿಟಿ ಅಂಗೀಕರಿಸಿದ ವಿಷಯಗಳ ಕುರಿತು ಸರ್ಕಾರಿ ಆದೇಶಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಿದ ಸರಿಯಾದ ಜಾಗ ನೀಡುವುದು ಸಹ ಬೇಡಿಕೆಗಳಲ್ಲಿ ಸೇರಿವೆ.
ಫೆಬ್ರವರಿ 2024 ರಿಂದ, ರೈತರು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಡಿಸೆಂಬರ್ 6, 8 ಮತ್ತು 14, 2024 ರಂದು ದೆಹಲಿಗೆ ಕಾಲ್ನಡಿಗೆಯಲ್ಲಿ ಮೆರವಣಿಗೆ ನಡೆಸಲು 101 ರೈತರ ಗುಂಪು ಮಾಡಿದ ಪ್ರಯತ್ನಗಳನ್ನು ಪೊಲೀಸರು ಹಲವು ಬಾರಿ ವಿಫಲಗೊಳಿಸಿದರು.
ಇದನ್ನೂ ಓದಿ; ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ ನಕ್ಸಲ್ ಪೀಡಿತ ಗ್ರಾಮ


