ಭಾರತದ ಹಲವಾರು ಮುಖ್ಯವಾಹಿನಿ ಟಿವಿ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳ ಡಿಜಿಟಲ್ ಅಂಗಗಳನ್ನು ಪ್ರತಿನಿಧಿಸುವ ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (ಡಿಎನ್‌ಪಿಎ), ಕೃತಕ ಬುದ್ಧಿಮತ್ತೆ ಕಂಪನಿಯಾದ ಚಾಟ್‌ಜಿಪಿಟಿ (ChatGPT)ಯ ಮಾತೃ ಸಂಸ್ಥೆ ಓಪನ್‌ಎಐ (OpenAI) ವಿರುದ್ಧದ ಹಕ್ಕುಸ್ವಾಮ್ಯ (Copy Right) ಉಲ್ಲಂಘಣೆ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದೆ.
“ಓಪನ್‌ಎಐನ ಚಾಟ್ ಜಿಪಿಟಿ ಸೇರಿದಂತೆ ಇತರ ಎಐ ಮಾದರಿಗಳು ತರಬೇತಿ ನೀಡಲು ಯಾವುದೇ ಪರವಾನಗಿ, ಅಧಿಕಾರ ಅಥವಾ ಅನುಮತಿ ಇಲ್ಲದೆ ತಮ್ಮ ವಿಷಯ (Content) ಮತ್ತು ಮಾಹಿತಿಯನ್ನು (Information) ಬಳಸುವ ಮೂಲಕ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದು ಡಿಜಿಟಲ್ ಸುದ್ದಿ ಪ್ರಕಾಶಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಜನವರಿ 27ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಮಧ್ಯಂತರ ಅರ್ಜಿಯಲ್ಲಿ ಡಿಎನ್‌ಪಿಎ ಒತ್ತಿ ಹೇಳಿದೆ ಎಂದು ವರದಿಯಾಗಿದೆ.
ಸುದ್ದಿ ಸಂಸ್ಥೆ ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ದಾಖಲಿಸಿರುವ ಮೊಕದ್ದಮೆಯಲ್ಲಿ ಡಿಎನ್‌ಪಿಎ ಮಧ್ಯಪ್ರವೇಶಿಸಿದೆ. ಎಎನ್ಐ ಪ್ರಕರಣದ ಮುಂದಿನ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಈ ಮಧ್ಯಂತರ ಅರ್ಜಿಯನ್ನು ಸಲ್ಲಿಸಲಾಗಿದೆ. ಜನವರಿ 28ರಂದು ಪ್ರಕರಣ ಮುಂದಿನ ವಿಚಾರಣೆ ನಿಗದಿಯಾಗಿದೆ.
“ದೆಹಲಿ ಹೈಕೋರ್ಟ್ 19 ನವೆಂಬರ್ 2024 ರಂದು ನೀಡಿರುವ ತನ್ನ ಆದೇಶದಲ್ಲಿ ಎಎನ್ಐ VS ಓಪನ್‌ಎಐ ಪ್ರಕರಣದಿಂದ ಉದ್ಭವಿಸುವ ಹಲವಾರು ಮಹತ್ವದ ಕಾನೂನು ಪ್ರಶ್ನೆಗಳನ್ನು ಗುರುತಿಸಿದೆ” ಎಂದು ಡಿಎನ್‌ಪಿಎ ಹೇಳಿದೆ.
ಓಪನ್ಎಐ ಮಾದರಿಗಳಿಗೆ ತರಬೇತಿ ನೀಡಲು ಮತ್ತು ಅದನ್ನು ತನ್ನ ಔಟ್‌ಪುಟ್‌ಗಳಲ್ಲಿ ಬಳಸಲು ಓಪನ್‌ಎಐ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಅಸೋಸಿಯೇಟೆಡ್ ಪ್ರೆಸ್ (AP), ದಿ ಅಟ್ಲಾಂಟಿಕ್ ಮತ್ತು ನ್ಯೂಸ್ ಕಾರ್ಪ್‌ನೊಂದಿಗೆ ಪರವಾನಗಿ ಒಪ್ಪಂದಗಳನ್ನು ಮಾಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಎಐ ಮಾದರಿಗಳಿಗೆ (AI models) ತರಬೇತಿ ನೀಡಲು ಬೇಕಾದ ವಿಷಯವನ್ನು ಬಳಸಬೇಕಾದರೆ, ಓಪನ್ಎಐ ಕೂಡಾ ಪರವಾನಗಿ ಅಥವಾ ಅನುಮತಿ ಪಡೆಯಬೇಕಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಪ್ರಕರಣದ ಫಲಿತಾಂಶವು ಡಿಎನ್‌ಪಿಎ ಸದಸ್ಯರು ನೇಮಿಸಿಕೊಳ್ಳುವ ಪತ್ರಕರ್ತರು ಮಾತ್ರವಲ್ಲದೆ ಭಾರತೀಯ ಪತ್ರಿಕಾರಂಗದ ಉದ್ಯೋಗಿಗಳ ಜೀವನೋಪಾಯದ ಮೇಲೆಯೂ ಪರಿಣಾಮ ಬೀರುತ್ತದೆ ಎಂದು ಮಾಧ್ಯಮಗಳು ಹೇಳಿವೆ.
ಈ ಹಿಂದಿನ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ್ದ ಓಪನ್‌ಎಐ, “ಯಾವುದೇ ದತ್ತಾಂಶವನ್ನು ಭಾರತದಲ್ಲಿ ಸಂಸ್ಕರಿಸಲಾಗಿಲ್ಲ ಅಥವಾ ಸಂಗ್ರಹಿಸಲಾಗಿಲ್ಲ. ಹೀಗಾಗಿ, ಇದು ಭಾರತೀಯ ನ್ಯಾಯಾಲಯಗಳ ವ್ಯಾಪ್ತಿಗೆ ಬರುವುದಿಲ್ಲ” ಎಂದು ವಾದಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 18ರಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಅವರ ಏಕಸದಸ್ಯ ಪೀಠವು ಶಿಕ್ಷಣತಜ್ಞ ಅರುಲ್ ಜಾರ್ಜ್ ಸ್ಕಾರಿಯಾ ಮತ್ತು ವಕೀಲ ಆದರ್ಶ್ ರಾಮಾನಾಜುನ್ ಅವರನ್ನು ಸಲಹೆಗಾರರಾಗಿ ನೇಮಿಸಿತ್ತು.
ಶುಕ್ರವಾರ (ಜ.28) ದೆಹಲಿ ಹೈಕೋರ್ಟ್ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶೀಯ ಮತ್ತು ಅಂತಾರಾಷ್ಟ್ರೀಯ ಪುಸ್ತಕ ಪ್ರಕಾಶಕರನ್ನು ಪ್ರತಿನಿಧಿಸುವ ಭಾರತೀಯ ಪ್ರಕಾಶಕರ ಒಕ್ಕೂಟಕ್ಕೆ (ಎಫ್‌ಐಪಿ) ಎಎನ್‌ಐ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಅನುಮತಿ ನೀಡಿತ್ತು.
ಹಲವಾರು ಪ್ರಕಾರಗಳಲ್ಲಿನ ಪುಸ್ತಕಗಳನ್ನು “ಸೂಕ್ಷ್ಮವಾಗಿ ಸಂಗ್ರಹಿಸಲಾಗಿದೆ ಮತ್ತು ರಚಿಸಲಾಗಿದೆ. ಅವು ಇಚ್ಛೆಯಂತೆ ಲೂಟಿ ಮಾಡುವ ಸರಕುಗಳಲ್ಲ” ಎಂದು ಎಫ್‌ಐಪಿ ಮಧ್ಯಂತರ ಅರ್ಜಿಯಲ್ಲಿ ಹೇಳಿದೆ.
ಕಾರ್ಮಿಕರ ಹೋರಾಟಕ್ಕೆ ಬಹುದೊಡ್ಡ ಜಯ : ‘ಸ್ಯಾಮ್‌ಸಂಗ್ ಇಂಡಿಯಾ ವರ್ಕರ್ಸ್ ಯೂನಿಯನ್’ ನೋಂದಾಯಿಸಿದ ಸರ್ಕಾರ


