ಉತ್ತರ ಪ್ರದೇಶದ ಮೈನ್‌ಪುರಿಯ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ತಮ್ಮ ಮೊಬೈಲ್ ಫೋನ್‌ನಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುತ್ತಿದ್ದಾಗ 60 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲೆಯ ಮಹಾರಾಜ ತೇಜ್ ಸಿಂಗ್ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಈ ಘಟನೆಯು ರೋಗಿಯ ಕುಟುಂಬ ಸದಸ್ಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಇಡೀ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ.
ಪ್ರವೇಶ್ ಕುಮಾರಿ ತೀವ್ರ ಎದೆನೋವು ಎಂದು ಹೇಳಿದ್ದರಿಂದ ಅವರ ಮಗ ಗುರುಶರಣ್ ಸಿಂಗ್ ಅವರನ್ನು ಡಾ. ಆದರ್ಶ್ ಸೆಂಗರ್ ಕರ್ತವ್ಯದಲ್ಲಿದ್ದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅವರು ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ವೈದ್ಯರು ಕುಳಿತಲ್ಲೇ ಕುಳಿತು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ರೀಲ್‌ಗಳನ್ನು ನೋಡುತ್ತಿದ್ದರು ಎಂದು ಗುರುಶರಣ್ ಆರೋಪಿಸಿದ್ದಾರೆ. ಬದಲಾಗಿ, ಅವರು ನರ್ಸಿಂಗ್ ಸಿಬ್ಬಂದಿಗೆ ರೋಗಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದರು.
“ನನ್ನ ತಾಯಿಯ ಸ್ಥಿತಿ ತೀವ್ರ ಹದಗೆಟ್ಟಾಗ ನಾವು ಹತಾಶೆಯಿಂದ ಕೂಗಾಡಿದೆವು. ಸಿಟ್ಟಿಗೆದ್ದ ಡಾ. ಸೆಂಗಾರ್ ಕೊನೆಗೆ ಎದ್ದು ನಿಂತರು. ಆದರೆ ಸಹಾಯ ಮಾಡುವ ಬದಲು ನನ್ನ ಕಪಾಳಮೋಕ್ಷ ಮಾಡಿದರು. ಆ ಹೊತ್ತಿಗೆ, ನನ್ನ ತಾಯಿ ಈಗಾಗಲೇ ಮೃತಪಟ್ಟಿದ್ದರು” ಎಂದು ಗುರುಶರಣ್ ಹೇಳಿದರು.
ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಯಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಮದನ್ ಲಾಲ್ ಕೂಡ ಸ್ಥಳಕ್ಕೆ ಆಗಮಿಸಿದರು.
“ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಗಳು ನಿಜವೆಂದು ಕಂಡುಬಂದರೆ, ವೈದ್ಯರ ವಿರುದ್ಧ ಕಠಿಣ ಇಲಾಖಾ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕರಣದ ಸಂಪೂರ್ಣ ತನಿಖೆಗೆ ಭರವಸೆ ನೀಡಿದ ಮದನ್ ಲಾಲ್ ಹೇಳಿದರು. ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ; ಹಂದಿ ಸಾಕಣೆ ವಲಯಕ್ಕೆ ಥಾಯ್ ಕಂಪನಿ ಪ್ರವೇಶ; ಅಸ್ಸಾಂ ರೈತರಿಂದ ವಿರೋಧ


