“ಕುಂಭಮೇಳದಲ್ಲಿ ಗಂಗಾಸ್ನಾನ ಮಾಡುವುದರಿಂದ ದೇಶದ ಬಡತನ ದೂರಾಗುವುದೇ?” ಇದು ಮಲ್ಲಿಕಾರ್ಜುನ ಖರ್ಗೆಯವರ ನೇರ ಮತ್ತು ಸರಳ ಪ್ರಶ್ನೆ. ವಿರೋಧ ಪಕ್ಷದ ನಾಯಕನಾಗಿ, ಪ್ರಜಾಪ್ರಭುತ್ವ ನೆಲೆಗಟ್ಟಿನ ಸರ್ಕಾರವೊಂದರ ಆದ್ಯತೆಗಳನ್ನು ಪ್ರಶ್ನೆ ಮಾಡುವುದು ಅವರ ಕರ್ತವ್ಯ. ಇದೇ ಮೊದಲೇನಲ್ಲ; ಈ ಹಿಂದೆ ಹಲವು ಬಾರಿ ಮೋದಿ ಸರ್ಕಾರದ ವೈಖರಿಗಳನ್ನು, ಆದ್ಯತೆಗಳನ್ನು ಟೀಕೆ ಮಾಡಿದ್ದಾರೆ. ಇಲ್ಲಿ ಖರ್ಗೆಯವರಿಗೆ ಧಾರ್ಮಿಕ ಕುಂಭಮೇಳದ ಮೇಲಾಗಲಿ ಅಥವಾ ಭಾವನಾತ್ಮಕ ಗಂಗಾಸ್ನಾನದ ಮೇಲಾಗಲಿ ಯಾವುದೇ ಪ್ರಶ್ನೆಗಳಿಲ್ಲ. ಆದರೆ ಸರ್ಕಾರ ತಾನು ಮಾಡಬೇಕಾದ ಕೆಲಸಗಳಿಂದ ವಿಮುಖವಾಗಿ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಂಡು, ಅದನ್ನಷ್ಟೇ ತನ್ನ ಕರ್ತವ್ಯ ಎಂಬಂತೆ ಮೈಮರೆತಿರುವ ಹೊಣೆಗೇಡಿತನದ ಬಗ್ಗೆ ಅವರ ತಿವಿತವಿದೆ.
ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ, ನಿರುದ್ಯೋಗದ ಬೇಗೆ ಚಾರಿತ್ರಿಕ ಏರಿಕೆ ಕಂಡಿದೆ, ಹಸಿವಿನ ಸೂಚ್ಯಂಕದಲ್ಲಿ ದೇಶ ಮತ್ತೆಮತ್ತೆ ಜಾರುತ್ತಿದೆ, ಮಹಿಳೆಯರು ಅಸುರಕ್ಷತೆಯಲ್ಲಿ ಬೆಂದು ಹೋಗುತ್ತಿದ್ದಾರೆ, ನಮ್ಮ ಗಡಿಭಾಗದ ಮೇಲೆ ನೆರೆ ದೇಶಗಳು ಅತಿಕ್ರಮಣ ಮಾಡುತ್ತಿವೆ, ಅಂತಾರಾಷ್ಟ್ರೀಯ ಸಾಲದ ಹೊರೆಯ ವೇಗ ದುಪ್ಪಟ್ಟಾಗಿದೆ, ಕೃಷಿಬಿಕ್ಕಟ್ಟುಗಳು ವಿಪರೀತಗೊಂಡು ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ, ಹಣದುಬ್ಬರದ ಬೆಲೆಯೇರಿಕೆಯಲ್ಲಿ ಮಧ್ಯಮ ಮತ್ತು ಬಡವರ್ಗಗಗಳು ಚೈತನ್ಯ ಕಳೆದುಕೊಳ್ಳುತ್ತಿವೆ, ಸಾರ್ವಜನಿಕ ಆಸ್ತಿ ಖಾಸಗಿ ಉದ್ದಿಮೆದಾರರ ಕೈವಶವಾಗುತ್ತಿವೆ…. ಇಂಥಾ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಸರ್ಕಾರವೊಂದು ಈ ಗಂಭೀರ ವಿಚಾರಗಳೆಡೆಗೆ ನಿರ್ಲಕ್ಷ್ಯ ತಳೆದು ಅಥವಾ ಈ ಅನಾಹುತಗಳಿಗೆ ತಾನೇ ಕಾರಣವಾಗಿದ್ದರೂ, ಆ ಪಾಪಪ್ರಜ್ಞೆಯಿಲ್ಲದೆ ಬೇರೆ ವಿಚಾರಗಳಲ್ಲಿ ಮೈಮರೆತರೆ ಅದನ್ನು ತಿವಿದು ಎಚ್ಚರಿಸಬೇಕಾದದ್ದು ವಿರೋಧ ಪಕ್ಷದ ಕರ್ತವ್ಯ. ಅದನ್ನು ಖರ್ಗೆ ಮಾಡಿದ್ದಾರೆ.
ಆದರೆ ಅವರ ಪ್ರಶ್ನೆಗೆ ಉತ್ತರವಿಲ್ಲದ ಬಿಜೆಪಿ, ಜನರೆದುರು ತನ್ನ ಬೂಟಾಟಿಕೆ ಬೆತ್ತಲಾಗುವ ಭಯದಲ್ಲಿ ಖರ್ಗೆಯವರ ಪ್ರಶ್ನೆಯನ್ನು ಧರ್ಮದ ಮೇಲಿನ ಹಲ್ಲೆಯೆಂಬಂತೆ ಬಿಂಬಿಸಿ “ಖರ್ಗೆಯವರು ಈ ಮಾತು ಹೇಳುವ ಮೂಲಕ ಸನಾತನ ಧರ್ಮದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಾಗಾಗಿ ಸೋನಿಯಾ ಮತ್ತು ರಾಹುಲ್ ಗಾಂಧಿ ಕೂಡಲೇ ಕ್ಷಮೆಯಾಚಿಸಬೇಕು” ಎಂದು ವಿಷಯಾಂತರದ ಊಳಿಡುತ್ತಿದೆ. ತಮಾಷೆಯ ಸಂಗತಿ ಏನಂದ್ರೆ, ಈ ಪ್ರಶ್ನೆ ಕೇಳಿದ್ದು ಮಲ್ಲಿಕಾರ್ಜುನ ಖರ್ಗೆಯವರು. ಆದ್ರೆ ಬಿಜೆಪಿ ಕ್ಷಮೆಗೆ ಆಗ್ರಹಿಸ್ತಾ ಇರೋದು ಮಾತ್ರ ಸೋನಿಯಾ ಮತ್ತು ರಾಹುಲ್‌ರನ್ನು. ಖರ್ಗೆಯವರ ಕ್ಷಮೆಗೆ ಆಗ್ರಹಿಸುವ ಧೈರ್ಯವೂ ಬಿಜೆಪಿಯಲ್ಲಿಲ್ಲ! ಯಾಕಂದ್ರೆ, ಖರ್ಗೆ ದಲಿತ ಸಮುದಾಯದಿಂದ ಬಂದವರು. ಅವರನ್ನು ಕೇಂದ್ರವಾಗಿಸಿಕೊಂಡು ಧರ್ಮಸೂಕ್ಷ್ಮತೆ ಡೈವರ್ಷನ್ ಇರುವ ಈ ಚರ್ಚೆಯನ್ನು ಮುಂದುವರೆಸಲು ಹೋದ್ರೆ, ದಲಿತರ ವಿರೋಧಕ್ಕೆ ಗುರಿಯಾಗಬೇಕಾಗುತ್ತೆ, ಮಾತ್ರವಲ್ಲ; ಅಂಬೇಡ್ಕರ್ ವಿಚಾರವಾದ ಚರ್ಚೆಯ ಮುನ್ನೆಲೆಗೆ ಬರುತ್ತೆ. ಬಹಳ ಹಿಂದೆಯೇ ಹಿಂದೂಧರ್ಮದ `ರಿಡಲ್ಸ್’ಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವ ಅಂಬೇಡ್ಕರ್ ಅವರು ಬಿಜೆಪಿ-ಸಂಘಪರಿವಾರದವರ ಸನಾತನವಾದವನ್ನು ನೂಲಿನಷ್ಟೂ ಬಟ್ಟೆಯಿಲ್ಲದೆ ಬೆತ್ತಲಾಗಿಸಿಹೋಗಿದ್ದಾರೆ. ಅಂಬೇಡ್ಕರ್ ಪ್ರತಿಪಾದಿಸಿದ ಸತ್ಯದ ಪ್ರಖರವನ್ನು ತಡೆದುಕೊಳ್ಳುವ ಸಾಮರ್ಥ್ಯ ಬಿಜೆಪಿಗಿಲ್ಲ. ಹಾಗಾಗಿ, ಅಂಬೇಡ್ಕರ್ ಮತ್ತು ದಲಿತರನ್ನು ಹೊರಗಿಡುವ ಉದ್ದೇಶದಿಂದ ಖರ್ಗೆಯವರು ಕೇಳಿದ ಪ್ರಶ್ನೆಗೆ ಸೋನಿಯಾ-ರಾಹುಲ್‌ರಿಂದ ಕ್ಷಮೆ ಬೇಡುವ ನಾಟಕವಾಡುತ್ತಿದೆ. ಮೊದಲನೆಯದಾಗಿ ಕ್ಷಮೆ ಕೇಳುವಂತಹ ಯಾವ ಲೋಪವೂ ಖರ್ಗೆಯವರ ಆ ಮಾತಿನಲ್ಲಿಲ್ಲ.
ಉದಾಹರಣೆಗೆ, ಒಂದು ಕುಟುಂಬವಿದೆ ಎಂದಿಟ್ಟುಕೊಳ್ಳಿ. ತೀರಾ ಸಿರಿವಂತವಲ್ಲದಿದ್ದರೂ, ಒಂದು ಕಾಲದಲ್ಲಿ ತಕ್ಕಮಟ್ಟಿಗೆ ಘನತೆಯಿಂದ ಬಾಳಿಬದುಕಿದ ಕುಟುಂಬ ಅಂತಲೇ ಅಂದುಕೊಳ್ಳೋಣ. ಆ ಮನೆಯ ಯಜಮಾನಿಕೆ ಈಗ ಮಗನ ಕೈಗೆ ವರ್ಗಾವಣೆಯಾಗಿದೆ. ಮಗ ದಡ್ಡನಲ್ಲ, ಆದರೆ ತನ್ನ ಬುದ್ದಿವಂತಿಕೆಯನ್ನು ಎಲ್ಲಿ ಖರ್ಚು ಮಾಡಬೇಕೊ ಅಲ್ಲಿ ಮಾಡದೆ, ಬೇಡದ ಉಸಾಬರಿಗಳಲ್ಲಿ ಬಳಸುವಾತ. ಹಾಗಾಗಿ ಆ ಮನೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಬರುತ್ತಿದೆ. ಕೈಯಲ್ಲಿದ್ದ ಆಸ್ತಿಪಾಸ್ತಿಗಳು ಕಂಡವರ ಪಾಲಾಗಿವೆ. ಅಳಿದುಳಿದ ತುಂಡು ಜಮೀನಿನಲ್ಲೂ ಮೈಮುರಿದು ಕೆಲಸ ಮಾಡುವವರಿಲ್ಲದೆ ದವಸ-ಧಾನ್ಯಗಳ ಇಳುವರಿಯೂ ಕುಂಠಿತವಾಗಿದೆ. ಅಡುಗೆ ಮನೆಯ ಡಬ್ಬಿಗಳಲ್ಲಿ ಕೊರತೆಗಳು ಗೂಡುಕಟ್ಟಿವೆ. ಮಕ್ಕಳ ವ್ಯಾಸಂಗಕ್ಕೆ ಖರ್ಚು ಮಾಡುವುದಕ್ಕೂ ಸಾಕಷ್ಟು ಹಣವಿಲ್ಲ. ಮನೆಯ ಹೆಣ್ಣುಮಕ್ಕಳ ಮೈಮೇಲಿದ್ದ ಒಡವೆಗಳು ಒಂದೊಂದೆ ಗಿರವಿ ಸೇಠುಗಳ ತಿಜೋರಿ ಪಾಲಾಗಿವೆ. ಒಟ್ಟಿನಲ್ಲಿ ಮನೆಯ ಒಳಾವರಣ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಆದರೆ ಯಜಮಾನಿಕೆ ವಹಿಸಿಕೊಂಡ ಮಗನ ದೌಲತ್ತು ಕಮ್ಮಿಯಾಗಿಲ್ಲ. ಶೋಕಿಯ ಬಟ್ಟೆಗಳು, ಹೊರಗೋಡೆಗೆ ಸುಣ್ಣಬಣ್ಣಗಳು, ಊರೂರು ಸುತ್ತಾಟಗಳು, ಗೆಳೆಯರ ಕೂಟದೊಂದಿಗೆ ಪಾರ್ಟಿ-ಫಂಕ್ಷನ್ನುಗಳು, ಅರಳಿಕಟ್ಟೆಯ ಮೇಲೆ ಸೊಬಗನಂತೆ ಉದ್ದುದ್ದ ಉಪದೇಶದ ಭಾಷಣಗಳು….
ಇಂಥಾ ಪರಿಸ್ಥಿತಿಯಲ್ಲಿ ಮನೆತನವನ್ನು ತಕ್ಕಮಟ್ಟಿಗೆ ನಿಭಾಯಿಸಿಕೊಂಡು ಹೋಗಿದ್ದ ಮುದಿ ತಂದೆಗೆ, ಮಗನ ಉಡಾಫೆಯ ಬಗ್ಗೆ ಸಿಟ್ಟು ಬರದಿರುತ್ತದೆಯೇ? ತನ್ನ ಕೋಪಕ್ಕೆ ಮಗ ಎಳ್ಳಷ್ಟು ಬೆಲೆ ಕೊಡಲಾರ, ಬುದ್ದಿಮಾತಿಗೆ ಬದಲಾಗಲಾರ ಎಂಬುದು ಗೊತ್ತಿದ್ದರೂ, ಹೊಟ್ಟೆಯ ಸಂಕಟಕ್ಕಾದರೂ ಮಗನ ಉಡಾಫೆಯ ಗುಣವನ್ನು ಬೈದು ಎಚ್ಚರಿಸುವ ಪ್ರಯತ್ನ ಮಾಡುತ್ತಾನೆ. ತಂದೆಯಾಗಿ ಅದು ಅವನ ಜವಾಬ್ಧಾರಿ. ಮನೆಯಲ್ಲಿ ಒಲೆ ಉರಿದು ಮೂರು ದಿನವಾಗಿದ್ದರೂ, ಕಂದಮ್ಮಗಳು ಹೊಟ್ಟೆತುಂಬಾ ಊಟ ಕಂಡು ಹಲವು ದಿನಗಳಾಗಿದ್ದರೂ, ನೆರೆಯವರ ಮುಂದೆ ದೌಲತ್ತು ತೋರಿಸುವ ಸಲುವಾಗಿ ಮನೆಗೆಲ್ಲ ಅಲಂಕಾರ ಮಾಡಿ ಭರ್ಜರಿಯಾಗಿ ಹಬ್ಬ ಮಾಡುತ್ತೇನೆ ಎಂದುಬರುವ ಮಗನಿಗೆ ಆ ತಂದೆ, “ಲೋ ಮುಠ್ಠಾಳ, ಮೊದ್ಲು ವರ್ಷದ ಕೂಳಿಗೆ ದಾರಿ ನೋಡ್ಕೊಳೊ; ಆಮೇಲೆ ಹರ್ಷದ ಕೂಳಿನ ಬಗ್ಗೆ ಯೋಚಿಸುವೆಯಂತೆ. ಹರ್ಷದ ಕೂಳಿನ ಸಂಭ್ರಮದಿಂದ ನಮ್ಮ ವರ್ಷದ ಕೂಳಿನ ಭಂಗ ತೀರೋದಿಲ್ಲ” ಅಂತ ಬುದ್ದಿ ಮಾತನ್ನು ಹೇಳಿಯೇ ಹೇಳ್ತಾನೆ. ಅಷ್ಟಕ್ಕೇ, ಮಗನಾದವನು ತಂದೆಯ ಮಾತಿನಲ್ಲಿರುವ ಕಾಳಜಿಯನ್ನು ಬದಿಗೆ ಸರಿಸಿ, “ಅಯ್ಯೋ ನನ್ನ ಅಪ್ಪನಿಗೆ ಹಬ್ಬದ ಮೇಲೆ ತಾತ್ಸಾರ. ದೇವರ ಮೇಲೆ ಭಯಭಕ್ತಿ ಇಲ್ಲ. ದೈವಭಕ್ತರಿಗೆ ಅಪಮಾನ ಮಾಡ್ತಿದಾನೆ” ಅಂತ ಊಳಿಡುತ್ತಾನೆ ಎಂದಿಟ್ಟುಕೊಳ್ಳಿ. ಆಗ ಬುದ್ದಿವಂತರೆನಿಸಿಕೊಂಡವರು ಯಾರ ಪರ ನಿಲ್ಲುತ್ತಾರೆ? ಮತ್ತು ನಿಲ್ಲಬೇಕು?
ಖರ್ಗೆಯವರ ವಿಚಾರದಲ್ಲಿ ಆಗ್ತಾ ಇರೋದು ಇಷ್ಟೇ! ಬುದ್ದಿವಾದ ಹೇಳಿದ ಅಸಹಾಯಕ ತಂದೆಯ ಸ್ಥಾನದಲ್ಲಿ ಖರ್ಗೆಯವರನ್ನೂ, ಅವರ ಆರೋಪವನ್ನು ವಿರೂಪಗೊಳಿಸುತ್ತಿರುವ ಮತಿಗೇಡಿ ಮಗನ ಸ್ಥಾನದಲ್ಲಿ ಬಿಜೆಪಿಯ ಒಣರೋಧನೆಯನ್ನೂ ಕಲ್ಪಿಸಿಕೊಂಡರೆ ನಮಗೆ ಇಡೀ ವೃತ್ತಾಂತದ ತಾತ್ಪರ್ಯ ಅರ್ಥವಾಗುತ್ತದೆ.
ಈಗ ಇನ್ನೊಂದು ಆಯಾಮದಿಂದ ಈ ವಿಚಾರವನ್ನು ನೋಡೋಣ. ಇತ್ತೀಚೆಗೆ ಬಿಜೆಪಿಗೆ ಅಂಬೇಡ್ಕರ್ ಮೇಲೆ ಮತ್ತು ಅವರು ರಚಿಸಿಕೊಟ್ಟಿರುವ ಸಂವಿಧಾನದ ಮೇಲೆ ವಿಪರೀತ ಪ್ರೀತಿ ಹುಟ್ಟಿದೆ. ಅಭಿಯಾನಗಳನ್ನೇ ನಡೆಸುತ್ತಿದೆ. ಈ ಪ್ರೀತಿ ಪ್ರಾಮಾಣಿಕವಾದುದೇ? ತಿಳಿವಳಿಕೆ ಇರುವ ಎಂತವರಿಗೇ ಆದರೂ ಬಿಜೆಪಿಯ ಬೂಟಾಟಿಕೆ ಅರ್ಥವಾಗುತ್ತದೆ. ಖರ್ಗೆಯವರ ಪ್ರಕರಣ ಅದನ್ನು ಸಾಬೀತು ಮಾಡುತ್ತೆ. ಖರ್ಗೆಯವರು ಕೇಳಿರುವ ಪ್ರಶ್ನೆ ಸನಾತನ ಧರ್ಮಕ್ಕೆ ಅಪಚಾರ ಎಸಗಿರುವಂತದ್ದು, ಭಾವನೆಗಳಿಗೆ ಧಕ್ಕೆ ತಂದಿರುವಂತದ್ದು, ಹಾಗಾಗಿ ಕ್ಷಮೆ ಕೇಳಬೇಕು ಅನ್ನೋದು ಬಿಜೆಪಿಯ ವಕಾಲತ್ತು. ಆ ನಿಟ್ಟಿನಲ್ಲಿ ನೋಡುವುದಾದರೆ ಸನಾತನವಾದಕ್ಕೆ ಅಂಬೇಡ್ಕರ್ ಎಂತೆಂಥಾ ಏಟು ಕೊಟ್ಟಿಲ್ಲ! ರಾಮಕೃಷ್ಣರನ್ನು ದೇವರೇ ಅಲ್ಲವೆಂದರು, ಶೋಷಣೆಯ ವರ್ಣಾಶ್ರಮ ವ್ಯವಸ್ಥೆಯಿರುವ ಹಿಂದೂಧರ್ಮದ ಹುಳುಕುಗಳನ್ನು ಬಿಚ್ಚಿಟ್ಟರು, ಶೋಷಣೆಯ ಮನುವಾದಕ್ಕೆ ಪ್ರತಿಯಾಗಿ ಸಮಾನತೆಯ ಸಂವಿಧಾನವನ್ನು ರಚಿಸಿಕೊಟ್ಟರು, ಹಿಂದೂವಾಗಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯಲಾರೆ ಎಂದರು, ಅದಕ್ಕೆ ತಕ್ಕಂತೆ ಬುದ್ದನನ್ನು ಅರಸಿ ಹೊರಟರು…. ಹಾಗಾದರೆ ಬಿಜೆಪಿಯ ಪ್ರಕಾರ ಇವೆಲ್ಲವೂ ಸನಾತನವಾದಕ್ಕೆ ತೋರಿದ ಅಪಚಾರವಲ್ಲವೇ? ಗಂಗಾಸ್ನಾನವನ್ನು ಪ್ರಶ್ನಿಸಿದ ಮಾತ್ರಕ್ಕೆ ಬಿಜೆಪಿ ಖರ್ಗೆಯವರ ಮೇಲೆ ಮುಗಿಬೀಳುತ್ತಿದೆಯೆಂದರೆ, ಅವತ್ತು ಸನಾತನವಾದದ ಮೌಢ್ಯಗಳನ್ನು, ಶೋಷಣೆಗಳನ್ನು ಅಲ್ಲಗಳೆದ ಅಂಬೇಡ್ಕರ್ ಅವರ ಮೇಲೆ ಸಂಘ ಪರಿವಾರ ಅದಿನ್ನೆಷ್ಟು ವಿಷಕಾರಿರಬೇಡ. ಒಂದುವೇಳೆ, ಅಂಬೇಡ್ಕರ್ ಅವರ ಅಷ್ಟೆಲ್ಲ ಪ್ರಶ್ನೆಗಳ, ತಕರಾರುಗಳ, ರುಜುವಾತುಗಳ ನಂತರವೂ ಬಿಜೆಪಿಯು ಅಂಬೇಡ್ಕರ್ ಅವರನ್ನು ಗೌರವಿಸಿ ಪ್ರೀತಿಸಲು ಸಾಧ್ಯವಿದ್ದರೆ, ಕೇವಲ ಗಂಗಾಸ್ನಾನವನ್ನು ತನ್ನ ಪ್ರಶ್ನೆಯಲ್ಲಿ ಉಲ್ಲೇಖಿಸಿದ ಖರ್ಗೆಯವರನ್ನೂ ಅದು ಸನಾತನವಾದಕ್ಕೆ ಅಪಚಾರ ಎಂದು ಪರಿಗಣಿಸಬಾರದಿತ್ತಲ್ಲವೇ? ಇಂತವರು ಅಂಬೇಡ್ಕರ್ ಅವರ ಬಗ್ಗೆ ಪ್ರೀತಿ ತೋರಲು ಸಾಧ್ಯವೇ? ಆ ಪ್ರೀತಿಯಲ್ಲಿ ಪ್ರಾಮಾಣಿಕತೆ ಇರಲು ಸಾಧ್ಯವೇ?
ದಲಿತರನ್ನು ಕಾಂಗ್ರೆಸಿನ ವಿರುದ್ಧ ಎತ್ತಿಕಟ್ಟುವ ತನ್ನ ಅಜೆಂಡಾದ ಭಾಗವಾಗಿ ಬಿಜೆಪಿಯು ಅಂಬೇಡ್ಕರ್‍ರನ್ನು ಬಳಸಿಕೊಳ್ಳುತ್ತಿದೆ. ಅದಕ್ಕೋಸ್ಕರ ಚರಿತ್ರೆಯ ಪುಟದ ಅರ್ಧಸತ್ಯಗಳನ್ನು ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನಿಸಲು ಇಂತಹ ಅಭಿಯಾನಗಳನ್ನು ನಡೆಸುತ್ತಿದೆ. ದಲಿತರ ಬಗ್ಗೆ, ಜಾತಿವ್ಯವಸ್ಥೆಯ ಬಗ್ಗೆ, ಮೀಸಲಾತಿಯ ಬಗ್ಗೆ, ಸಂವಿಧಾನದ ಬಗ್ಗೆ ಬಿಜೆಪಿ-ಸಂಘ ಪರಿವಾರಕ್ಕೆ ಇರುವ ಅಸಹನೆ ಅಪರಿಮಿತದ್ದು. ಖರ್ಗೆಯವರ ಮೇಲಿನ ದಾಳಿಯಿಂದ ಅದು ಇನ್ನಷ್ಟು ಸ್ಪಷ್ಟವಾಗಿದೆ. ಅಂಬೇಡ್ಕರ್ ಅವರಿಗೆ ಕೋಮುವಾದಿ ರಾಜಕಾರಣದ ಕುರಿತು, ಸನಾತನವಾದದ ವರ್ಣಾಶ್ರಮದ ಕುರಿತು, ಜಾತಿವ್ಯವಸ್ಥೆಯ ಕುರಿತು, ಸಾಮಾಜಿಕ ಶೋಷಣೆಯ ಕುರಿತು ಅಪಾರ ವಿರೋಧವಿತ್ತು. ಜೊತೆಗೆ, ಆವತ್ತಿನ ಕಾಲಘಟ್ಟದ ಕಾಂಗ್ರೆಸ್ ಕುರಿತು ಎಚ್ಚರವೂ ಇತ್ತು. ನಾವೀಗ ವಿರೋಧ ಮತ್ತು ಎಚ್ಚರದ ನಡುವಿನ ತೆಳುವಾದ ಅಂತರವನ್ನು ಸ್ಪಷ್ಟವಾಗಿ ಗ್ರಹಿಸಬೇಕಿದೆ. ಆಗ ಮಾತ್ರ, ಬಿಜೆಪಿ-ಸಂಘ ಪರಿವಾರಗಳು ಹೆಣೆಯುವ ಹುನ್ನಾರಗಳನ್ನು ನಾವು ಸುಲಭವಾಗಿ ಮಣಿಸುತ್ತಾ ಸಾಗಬಹುದು. ಯಾಕೆಂದರೆ, ಸಾಗುತ್ತಲೇ ನಡೆಸುವ ಈ ಸಂಘರ್ಷದ ಹಾದಿ ನಿರಂತರವಾದುದು. ಇಲ್ಲಿ ನಾವು ಒಮ್ಮೆ ಎಚ್ಚರತಪ್ಪಿದರೂ, ಇಷ್ಟುದಿನ ದಕ್ಕಿಸಿಕೊಂಡ ದೂರವನ್ನು ಏಕಾಏಕಿ ಕಳೆದುಕೊಂಡು ಶೂನ್ಯರಾಗಿಬಿಡುವ ಅಪಾಯವಿದೆ.
ಕಾರ್ಪೊರೇಟ್ ಜಗತ್ತಿನ ಸಂಪತ್ತು, ಬಿಗ್ ಬಾಸ್ ಹನುಮಂತು, ಟ್ರ್ಯಾಪ್ ಆದ ಕೆಲವು ಪ್ರಗತಿಪರ ಚಿಂತಕರು…


