ಗಣರಾಜ್ಯೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ದಲಿತ ಸಮುದಾಯದ ಸದಸ್ಯರಿಗೆ ವೇದಿಕೆಯ ಮೇಲೆ ಕುಳಿತುಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಶಾಲಾ ಮುಖ್ಯೋಪಾಧ್ಯಾಯಿನಿಯೊಬ್ಬರಿಗೆ ಬೆದರಿಕೆ ಹಾಕಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ನಡೆದ ಆಘಾತಕಾರಿ ಘಟನೆ ನಡೆದಿದ್ದು, ಆರೋಪಿ ಬಸನಗೌಡ ಕೆಂಚರೆಡ್ಡಿ ಎಂಬಾತ ಬಾಚಿಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉಸ್ತುವಾರಿ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಡಾಂಗೆ ಅವರಿಗೆ ಫೋನ್ ಕರೆ ಮಾಡಿ ಅಸಭ್ಯವಾಗಿ ಮಾತನಾಡಿದ್ದಾನೆ ಎನ್ನಲಾಗಿದೆ. ದಲಿತರಿಗೆ ಆಸನ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ನಂತರ, ಅಧಿಕಾರಿಗಳು ಪ್ರಸ್ತುತ ತಲೆಮರೆಸಿಕೊಂಡಿರುವ ಕೆಂಚರೆಡ್ಡಿಯನ್ನು ಬಂಧಿಸಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.
ದೂರಿನ ಪ್ರಕಾರ, ಜನವರಿ 26 ರಂದು ಈ ಘಟನೆ ನಡೆದಿದ್ದು, ನಿರ್ಮಲಾ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಎಇಎಂಸಿ) ಸದಸ್ಯರು, ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಸಿಬ್ಬಂದಿ ಮತ್ತು ಪೋಷಕರು ಸೇರಿದಂತೆ ವಿವಿಧ ಅತಿಥಿಗಳನ್ನು ಗಣರಾಜ್ಯೋತ್ಸವ ಆಚರಣೆಗೆ ಆಹ್ವಾನಿಸಿದ್ದರು.
ಕಾರ್ಯಕ್ರಮ ಮುಗಿದ ಒಂದು ದಿನದ ನಂತರ ನಿರ್ಮಲಾ ಅವರಿಗೆ ಕರೆ ಮಾಡಿದ್ದ ಕೆಂಚರೆಡ್ಡಿ , ದಲಿತರಿಗೆ ಇತರ ಅತಿಥಿಗಳೊಂದಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶೀಕ್ಷಕಿ ಆರೋಪಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದಾಗ, ಆತ ಬೆದರಿಕೆಗಳನ್ನು ಹೆಚ್ಚಿಸಿದ್ದೂ ಅಲ್ಲದೆ, ಅಶ್ಲೀಲ ಭಾಷೆಯನ್ನು ಬಳಸಿ ಮತ್ತು ಆಕೆಯ ಪತಿಯನ್ನು ಗುರಿಯಾಗಿಸಿಕೊಂಡು ಅವಮಾನಿಸಿದ್ದಾನೆ. ಈ ಘಟನೆಯು ಶಿಕ್ಷಕರು, ಪೋಷಕರು ಮತ್ತು ಸ್ಥಳೀಯ ಸಮುದಾಯದಲ್ಲಿ ಕಳವಳವನ್ನು ಹುಟ್ಟುಹಾಕಿದೆ.
ಸ್ಥಳೀಯ ದಲಿತ ನಾಯಕ ಸಿದ್ದಣ್ಣ ಮೇಲಿಮನಿ ಈ ಘಟನೆಯನ್ನು ಖಂಡಿಸಿದ್ದು, ಜಾತಿ ಆಧಾರಿತ ದ್ವೇಷ ಮತ್ತು ಬೆದರಿಕೆಯನ್ನು ಉತ್ತೇಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯ ಒದಗಿಸಬೇಕು ಎಂದು ಅವರು ಒತ್ತಿ ಹೇಳಿದರು.
ಈ ಮಧ್ಯೆ, ಪೊಲೀಸ್ ತಂಡವು ಪ್ರಕರಣವನ್ನು ಸಕ್ರಿಯವಾಗಿ ತನಿಖೆ ನಡೆಸುತ್ತಿದೆ ಎಂದು ಸುರಪುರ ಡಿವೈಎಸ್ಪಿ ಜಾವೇದ್ ಇನಾಮದಾರ್ ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ; ದಲಿತ ಸಂಶೋಧಕರ ದತ್ತಾಂಶ ನಷ್ಟಕ್ಕೆ ಪರಿಹಾರ ಪಡೆಯುವ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್


