ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ನೀಡುವುದನ್ನು ತಪ್ಪಿಸಲು ಉತ್ತರ ಪ್ರದೇಶ ಸರ್ಕಾರವು ನಿಖರವಾದ ಸಂಖ್ಯೆಯನ್ನು ಮರೆಮಾಡಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭಾ ಸಂಸದ, ‘ಮೌನಿ ಅಮವಾಸ್ಯೆಯ’ ಶುಭ ದಿನದಂದು ಲಕ್ಷಾಂತರ ಯಾತ್ರಿಕರು ಪವಿತ್ರ ಸ್ನಾನ ಮಾಡಲು ಸೇರಿದ್ದರಿಂದ ಸಂಭವಿಸಿದ ದುರಂತದ ತೀವ್ರತೆಯ ಮಾಹಿತಿಯನ್ನು ಯೋಗಿ ಆದಿತ್ಯನಾಥ್ ಸರ್ಕಾರವು ಮರೆಮಾಚಿದೆ ಎಂದು ಆರೋಪಿಸಿದರು.
“ಯುಪಿ ಸರ್ಕಾರ ಮತ್ತು ಮುಖ್ಯಮಂತ್ರಿ ನೈತಿಕವಾಗಿ ಮತ್ತು ರಾಜಕೀಯವಾಗಿಯೂ ವಿಫಲರಾಗಿದ್ದಾರೆ. ಪರಿಹಾರವನ್ನು ನೀಡಬೇಕಾಗಿಲ್ಲ ಎಂದು ಸರ್ಕಾರವು ಸಾವಿನ ಸಂಖ್ಯೆಯನ್ನು ಮರೆಮಾಡುತ್ತಿದೆ. ಸರ್ಕಾರವು ಸಾರ್ವಜನಿಕ ಗಮನವನ್ನು ಬೇರೆಡೆ ಸೆಳೆಯಲು ಬಯಸುತ್ತದೆ. ಯಾವುದೇ ಪಿತೂರಿ ಇಲ್ಲ, ಇದು ಸರ್ಕಾರದ ವೈಫಲ್ಯ. ಸಂತರು ಸಹ ಯೋಗಿ (ಆದಿತ್ಯನಾಥ) ಸುಳ್ಳುಗಾರ ಎಂದು ಹೇಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ; ಮಹಾಕುಂಭ ಮೇಳ: ಆಹಾರದಲ್ಲಿ ಬೂದಿ ಬೆರೆಸಿದ ಪೊಲೀಸ್ ಅಧಿಕಾರಿ ಅಮಾನತು


