ಫೆಬ್ರವರಿ 2020ರಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಕುರಿತಾದ ಚಲನಚಿತ್ರ ‘2020 ಡೆಲ್ಲಿ’ ಬಿಡುಗಡೆಯನ್ನು ಮುಂದೂಡಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಶರ್ಜೀಲ್ ಇಮಾಮ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗುರುವಾರ (ಜ.30) ಕೇಂದ್ರ ಸರ್ಕಾರ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ(ಸಿಬಿಎಫ್‌ಸಿ) ಪ್ರತಿಕ್ರಿಯೆ ಕೋರಿದೆ ಎಂದು ಪಿಟಿಐ ವರದಿ ಮಾಡಿದೆ.
ನ್ಯಾಯಾಲಯ ದೆಹಲಿ ಪೊಲೀಸರು ಮತ್ತು ಚಿತ್ರದ ನಿರ್ಮಾಪಕರಿಗೂ ನೋಟಿಸ್ ಜಾರಿ ಮಾಡಿದೆ ಎಂದು ವರದಿ ಹೇಳಿದೆ.
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಪಿತೂರಿ ನಡೆಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿ, ಪ್ರಸ್ತುತ ಶರ್ಜೀಲ್ ಇಮಾಮ್ ಅವರನ್ನು ಜೈಲಿನಲ್ಲಿಡಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧ ನಡೆದಿದ್ದ ಪ್ರತಿಭಟನೆ ಮತ್ತು ನಂತರ ನಡೆದ ಗಲಭೆಗಳನ್ನು ಆಧರಿಸಿದ ‘2020 ಡೆಲ್ಲಿ’ ಚಿತ್ರ ನಿರ್ಮಿಸಲಾಗಿದೆ. ಶನಿವಾರ (ಜ.1) ಅದು ಬಿಡುಗಡೆಯಾಗಲಿದೆ.
ಸಿನಿಮಾದ ಚಿತ್ರಕಥೆಗಾರ ಮತ್ತು ನಿರ್ದೇಶಕ ದೇವೇಂದ್ರ ಮಾಲ್ವಿಯಾ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಈ ಚಿತ್ರವು ತನ್ನ ಪ್ರಕರಣದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಮಾತ್ರವಲ್ಲದೆ, ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಲವಾರು ವಿಚಾರಣೆ ಮತ್ತು ಜಾಮೀನು ಅರ್ಜಿಗಳ ಮೇಲೂ ಪರಿಣಾಮ ಬೀರಬಹುದು ಎಂದು ಶರ್ಜೀಲ್ ಇಮಾಮ್ ಕಳವಳ ವ್ಯಕ್ತಪಡಿಸಿದ್ದಾರೆ.
“ಸುಳ್ಳು, ಕಲ್ಪಿತ ಮತ್ತು ಕಾಲ್ಪನಿಕ ಕಥೆ ಹೊಂದಿರುವ ಚಿತ್ರವನ್ನು ನಿಜವಾದ ಘಟನೆಗಳನ್ನು ಆಧರಿಸಿ ನಿರ್ಮಿಸಲಾಗಿದೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ತನ್ನನ್ನು ಭಯೋತ್ಪಾದಕ ಅಥವಾ ದೇಶದ್ರೋಹಿ ಎಂದು ತಪ್ಪಾಗಿ ಬ್ರಾಂಡ್ ಮಾಡುವ ಈ ಚಿತ್ರವು ಖಂಡಿತವಾಗಿಯೂ ಇನ್ನೂ ಪ್ರಾರಂಭಗೊಳ್ಳದ ವಿಚಾರಣೆಯ ಮೇಲೆ ಗಂಭೀರ ಪೂರ್ವಾಗ್ರಹ ಪೀಡಿತ ಪರಿಣಾಮ ಬೀರುತ್ತದೆ” ಎಂದು ಶರ್ಜೀಲ್ ಇಮಾಮ್ ವಾದಿಸಿದ್ದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ನ್ಯಾಯಾಲಯದ ತೀರ್ಪು ಬರುವ ಮುನ್ನವೇ ವ್ಯಕ್ತಿಗಳಿಗೆ ಭಯೋತ್ಪಾದಕರು ಎಂದು ಹಣೆಪಟ್ಟಿ ಕಟ್ಟುವುದು ನ್ಯಾಯಾಂಗದ ಪಕ್ಷಪಾತಕ್ಕೆ ಕಾರಣವಾಗಬಹುದು. ಅಲ್ಲದೆ, ಸಮಾನತೆ, ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುವ ಸಂವಿಧಾನ 14 ಮತ್ತು 21 ನೇ ವಿಧಿಯ ವಿರುದ್ಧವೂ ಆಗುತ್ತದೆ ಎಂದು ಶರ್ಜೀಲ್ ಇಮಾಮ್ ಅರ್ಜಿಯಲ್ಲಿ ಹೇಳಿದ್ದಾರೆ.
ಫೆಬ್ರವರಿ 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಬಲಿಗರು ಮತ್ತು ಅದನ್ನು ವಿರೋಧಿಸುವವರ ನಡುವೆ ಘರ್ಷಣೆಗಳು ನಡೆದಿದ್ದವು. ಈ ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿದ್ದರು ಮತ್ತು ನೂರಾರು ಜನರು ಗಾಯಗೊಂಡಿದ್ದರು. ಮೃತರಲ್ಲಿ ಹೆಚ್ಚಿನವರು ಮುಸ್ಲಿಮರು.
ಈ ಹಿಂಸಾಚಾರವು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದದ ದೊಡ್ಡ ಪಿತೂರಿಯ ಭಾಗವಾಗಿದ್ದು, ವಿವಾದಾತ್ಮಕ ಪೌರತ್ವ ಕಾನೂನಿನ ವಿರುದ್ಧ ಪ್ರತಿಭಟನೆಗಳನ್ನು ಆಯೋಜಿಸಿದವರೇ ಗಲಭೆಯ ಹಿಂದಿನ ಸಂಚು ರೂಪಿಸಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ.


