ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಕೇಂದ್ರ ಬಜೆಟ್ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಿರಾಶಾದಾಯಕವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೂಡಾ, ಕೇಂದ್ರ ಬಜೆಟ್‌ನ ಈ ದಿನ ಕರ್ನಾಟಕಕ್ಕೆ ಕರಾಳ ದಿನ ಎಂದು ಬಣ್ಣಿಸಿದ್ದಾರೆ. Union Budget 2025
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಖಂಡ್ರೆ ಅವರು, “ಬಜೆಟ್‌ನಲ್ಲಿ ಎಂ.ಎಸ್.ಪಿ. (ಕನಿಷ್ಠ ಬೆಂಬಲ ಬೆಲೆ) ಕಾಯ್ದೆ ಕುರಿತು ಯಾವುದೇ ಘೋಷಣೆ ಮಾಡದಿರುವುದು ಅನ್ನದಾತರ ಮೇಲೆ ದೊಡ್ಡ ಅನ್ಯಾಯವಾಗಿದೆ. ರೈತರು ಬೆಳೆದ ಬೆಳೆಗೆ ಖಚಿತ ಬೆಲೆ ನಿರ್ಧಾರವಾಗಬೇಕೆಂಬ ಬಹುದಿನದ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಪ್ರಕೃತಿ ವಿಕೋಪದ ಹೊಡೆತದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಕುರಿತು ಯಾವುದೇ ಘೋಷಣೆ ಇಲ್ಲ ಎಂಬುದು ವಿಷಾದನೀಯ” ಎಂದು ಹೇಳಿದ್ದಾರೆ. Union Budget 2025
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಂಪೂರ್ಣ ಅಸಡ್ಡೆ ತೋರಿಸಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ 7 ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ₹5000 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಈ ಪ್ರದೇಶದ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿಲ್ಲ ಎಂಬುದು ದೌರ್ಭಾಗ್ಯಕರ” ಎಂದು ಅವರು ಹೇಳಿದ್ದಾರೆ.
“ಎನ್.ಡಿ.ಎ. ಆಡಳಿತದ 11 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಸಾಕಷ್ಟು ಉಲ್ಭಣಿಸಿದೆ. ಈ ಬಜೆಟ್‌ನಲ್ಲಿ ಯುವಕರ ಕೈಗೆ ಉದ್ಯೋಗ ನೀಡುವ ಯಾವುದೇ ಗಂಭೀರ ಯೋಜನೆ ರೂಪಿಸದಿರುವುದು ಖಂಡನಾರ್ಹ. ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ, ಬಿಜೆಪಿ ನೇತೃತ್ವದ ಸರ್ಕಾರ ಎನ್.ಡಿ.ಎ.ಯೇತರ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿರುವುದು ಅಕ್ಷಮ್ಯ. ರಾಜ್ಯಗಳ ನಡುವೆ ರಾಜಕೀಯ ವ್ಯತ್ಯಾಸಗಳನ್ನು ಮೆಟ್ಟಿಲು ಮಾಡಿಕೊಳ್ಳುವ ನೀತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಬೇರೇ ಕಡೆ ಗಂಭೀರ ಯೋಜನೆಗಳನ್ನು ಘೋಷಿಸಿ, ಕರ್ನಾಟಕದ ಭಾಗ್ಯ ತಿರಸ್ಕರಿಸಿರುವುದು ಅಕ್ಷಮ್ಯ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲವೂ ಬಿಹಾರಕ್ಕೆ ಕೊಟ್ಟರೆ ಕರ್ನಾಟಕದವರು ಕಡ್ಲೆ ಬೀಜ ತಿನ್ನೋಕೆ ಇರುವುದೆ? – ಸಚಿವ ಕೃಷ್ಣಬೈರೇಗೌಡ
ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರತಿಕ್ರಿಯಿಸಿ, “ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ. ಕರ್ನಾಟಕದ ಯಾವ ಬೇಡಿಕೆಯೂ ಈಡೇರಿಲ್ಲ. ಕರ್ನಾಟಕಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ರಾಜ್ಯದ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ” ಎಂದು ಹೇಳಿದ್ದಾರೆ.
“ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಹಾಗಾದರೆ, ಕರ್ನಾಟಕದ ನಾವು ಕಡ್ಲೆ ಬೀಜ ತಿನ್ನೋಕೆ ಇರುವುದೆ? ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ. ಇದು ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ. 11,495 ಕೋಟಿ ಫೈನಾನ್ಸ್ ಕಮೀಷನ್ ಕೊಡಲು ಹೇಳಿತ್ತು. ಬರಲೇ ಬೇಕಾದ ಅನುದಾನ ದ ಬಗ್ಗೆ ಚಕಾರ ಎತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ಪೈಸಾ ಕೂಡ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ್ಕೆ ಏನೂ ನೀಡಿಲ್ಲ.” ಎಂದು ಹೇಳಿದ್ದಾರೆ.
“ಬೆಂಗಳೂರು ದೇಶಕ್ಕೆ ಉದ್ಯೋಗ ಕೊಡುತ್ತಿದೆ. ರಪ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ಕೊಡುತ್ತಿದೆ. ಆದರೂ ಬಜೆಟ್‌ನಲ್ಲಿ ಏನು ಕೊಟ್ಟಿಲ್ಲ. ಯುಪಿ, ಬಿಹಾರ ಮಾತ್ರ ಕೇಂದ್ರಕ್ಕೆ ಕಾಣುತ್ತಿದೆ, ಕರ್ನಾಟಕ ಕಾಣುತ್ತಿಲ್ಲ. ತೆರಿಗೆ ಕಟ್ಟಿದ ಕನ್ನಡಿಗರು ಕಾಣುತ್ತಿಲ್ಲ. ನಮ್ಮ ರಾಜ್ಯ ಕೇವಲ ದುಡಿಯವ ಆಳಿನ ರೀತಿ ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಹಾಗೇ ಸರ್ಕಾರದ ಪರವಾಗಿ ಇದನ್ನ ನಾನು ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ಗುಜರಾತ್ ಗಲಭೆ ಸಂತ್ರಸ್ತೆ, ಹೋರಾಟಗಾರ್ತಿ ಝಕಿಯಾ ಜಾಫ್ರಿ (86) ನಿಧನ


