ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ರಾಜಕೀಯ ಪ್ರೇರಿತ ಬಜೆಟ್ ಎಂದು ವಿರೋಧ ಪಕ್ಷಗಳು ಶನಿವಾರ ಬಣ್ಣಿಸಿವೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಹಾರದ ಅಗತ್ಯಗಳನ್ನು ಮಾತ್ರ ಪೂರೈಸಿವೆ ಎಂದು ಅದು ಹೇಳಿವೆ. Union Budget 2025
ಬಿಹಾರದಲ್ಲಿ ಚುನಾವಣೆಗಳು ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನಡೆಯುವ ನಿರೀಕ್ಷೆಯಿದೆ. ಕೇಂದ್ರದ ಆಡಳಿತಾರೂಢ ಬಿಜೆಪಿಯು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯುನೈಟೆಡ್) ಜೊತೆಗೆ ರಾಜ್ಯದ ಸಮ್ಮಿಶ್ರ ಸರ್ಕಾರದ ಭಾಗವಾಗಿದೆ.
ಕೇಂದ್ರದ ತನ್ನ ಬಜೆಟ್‌ನಲ್ಲಿ, ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಮತ್ತು ಪಾಟ್ನಾದಲ್ಲಿರುವ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ವಿಸ್ತರಿಸುವ ಪ್ರಸ್ತಾಪವನ್ನು ಮಾಡಿದೆ. ಕೋಸಿ ನದಿ ಜಲಾನಯನ ಪ್ರದೇಶದಲ್ಲಿ ನೀರಾವರಿ ಯೋಜನೆಯಾದ ಪಶ್ಚಿಮ ಕೋಸಿ ಕಾಲುವೆಗೆ ಕೇಂದ್ರವು ಆರ್ಥಿಕ ನೆರವು ನೀಡಲಿದೆ ಎಂದು ಅದು ಭರವಸೆ ನೀಡಿದೆ. Union Budget 2025
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಗುಂಡಿನ ಗಾಯಗಳಿಗೆ ಬ್ಯಾಂಡ್-ಏಡ್” ಎಂದು ಕರೆದಿದ್ದಾರೆ. ಜಾಗತಿಕ ಅನಿಶ್ಚಿತತೆಯ ನಡುವೆ ದೇಶದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಮಾದರಿ ಬದಲಾವಣೆಯ ಅಗತ್ಯವಿದೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರು. “ಆದರೆ ಈ ಸರ್ಕಾರವು ಆಲೋಚನೆಗಳಿಲ್ಲದೆ ದಿವಾಳಿಯಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಬಜೆಟ್‌ನಲ್ಲಿ ಬಿಹಾರಕ್ಕೆ “ಘೋಷಣೆಗಳ ಕೊಡುಗೆ” ನೀಡಲಾಗಿದೆ ಎಂದು ಹೇಳಿದ್ದಾರೆ. “ವರ್ಷದ ಕೊನೆಯಲ್ಲಿ ಅಲ್ಲಿ ಚುನಾವಣೆಗಳು ನಡೆಯುವುದರಿಂದ ಇದು ಸಹಜ,” ಎಂದು ಅವರು ಹೇಳಿದ್ದಾರೆ. “ಆದರೆ ಎನ್‌ಡಿಎ ಸರ್ಕಾರದ ಇನ್ನೊಂದು ಸ್ತಂಭವಾದ ಆಂಧ್ರಪ್ರದೇಶವನ್ನು ಏಕೆ ಇಷ್ಟು ಕ್ರೂರವಾಗಿ ನಿರ್ಲಕ್ಷಿಸಲಾಗಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.
ಆಂಧ್ರಪ್ರದೇಶದ ಆಡಳಿತಾರೂಢ ತೆಲುಗು ದೇಶಂ ಪಕ್ಷವೂ ಬಿಜೆಪಿಯ ಮಿತ್ರಪಕ್ಷವಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಹುಮತಕ್ಕೇರುವಲ್ಲಿ ವಿಫಲವಾದ ಕಾರಣ ಬಿಜೆಪಿಯು ಜನತಾದಳ (ಯುನೈಟೆಡ್) ಮತ್ತು ತೆಲುಗು ದೇಶಂ ಪಕ್ಷ ಮತ್ತು ಇತರ ಎನ್‌ಡಿಎ ಪಕ್ಷಗಳ ಸರ್ಕಾರವನ್ನು ರಚಿಸಿತ್ತು.
ಎನ್‌ಡಿಎ ಸರ್ಕಾರ ಈ ಹಿಂದೆ ನೀಡಿದ ಭರವಸೆಗಳನ್ನು ಪರಿಶೀಲಿಸಬೇಕಾಗಿದೆ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. “ಈ ಹಿಂದೆ ನೀಡಿದ್ದ ಬಜೆಟ್ ಭರವಸೆಗಳನ್ನು ಈಡೇರಿಸಲಾಗಿದೆಯೇ?” ಎಂದು ಅವರು ಕೇಳಿದ್ದು, ಇಂದಿನ ಬಜ್‌ಟ್‌ನ ಸ್ಪಷ್ಟ ಚಿತ್ರಣವನ್ನು ಪಡೆಯಲು ಅದನ್ನು ಓದಬೇಕಿದೆ ಎಂದು ಹೇಳಿದ್ದಾರೆ.
ದ್ರಾವಿಡ ಮುನ್ನೇತ್ರ ಕಳಗಂ ಸಂಸದೆ ಕನಿಮೋಳಿ ಅವರು ಸಂಸತ್ತಿನಲ್ಲಿ ಮಾತನಾಡಿ, “ಬಿಹಾರ ರಾಜ್ಯದ ಬಜೆಟ್ ಅನ್ನು ಕೇಳಲು ಅವಕಾಶ ಸಿಕ್ಕಿದ್ದು ಇದೇ ಮೊದಲು” ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರಕ್ಕೆ ವಿಶೇಷ ಹಣಕಾಸು ಪ್ಯಾಕೇಜ್ ನೀಡುವ ಬಗ್ಗೆ ಬಜೆಟ್‌ನಲ್ಲಿ ಮಾತನಾಡಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. “ಅವರು ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನವನ್ನು ನೀಡುತ್ತಾರೆಯೇ ಎಂದು ನನಗೆ ಖಚಿತವಿಲ್ಲ” ಎಂದು ಅವರು ಹೇಳಿದ್ದಾರೆ. ಖನಿಜ ಸಮೃದ್ಧ ಜಾರ್ಖಂಡ್ ಅನ್ನು 2000 ರಲ್ಲಿ ರಾಜ್ಯದಿಂದ ಬೇರ್ಪಡಿಸಿದಾಗಿನಿಂದ ಬಿಹಾರ ವಿಶೇಷ ಸ್ಥಾನಮಾನವನ್ನು ಕೋರುತ್ತಿದೆ.
ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಪ್ರತಿಕ್ರಿಯಿಸಿ, ಬಜೆಟ್‌ನಲ್ಲಿ ಸಾಮಾನ್ಯ ಜನರಿಗೆ ಏನೂ ನೀಡಿಲ್ಲ ಎಂದು ಹೇಳಿದ್ದಾರೆ. “ಈ ವರ್ಷ ಬಿಹಾರದಲ್ಲಿ ಚುನಾವಣೆಗಳಿವೆ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಅದನ್ನು ಮನಸ್ಸಿನಲ್ಲಿಟ್ಟುಕೊಂಡು, ಬಿಹಾರಕ್ಕೆ ಬಜೆಟ್ ಅನ್ನು ಮಂಡಿಸಲಾಗಿದೆ… ಜುಲೈ 2024 ರಲ್ಲಿ ಬಜೆಟ್ ಮಂಡಿಸಿದಾಗ, ಆಂಧ್ರಪ್ರದೇಶ ಮತ್ತು ಬಿಹಾರಕ್ಕೆ ಎಲ್ಲವನ್ನೂ ಮಾಡಲಾಯಿತು.” ಎಂದು ಅವರು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಪಶ್ಚಿಮ ಬಂಗಾಳವು ಬಜೆಟ್‌ನಿಂದ ಏನನ್ನೂ ಪಡೆದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಬಜೆಟ್ ರಾಜಕೀಯ ಪ್ರೇರಿತವಾಗಿದೆ ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ. “ಸುಮಾರು 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತವು ಹಣದುಬ್ಬರ, ಬಡತನ ಮತ್ತು ನಿರುದ್ಯೋಗದಿಂದ ಬಳಲುತ್ತಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ಹಿಂದಿನ ಬಜೆಟ್‌ಗಳಂತೆ, ಸಾರ್ವಜನಿಕ ಕಲ್ಯಾಣದ ಮೇಲೆ ಕೇಂದ್ರೀಕರಿಸುವುದಕ್ಕಿಂತ ರಾಜಕೀಯ ಪ್ರೇರಿತವಾಗಿದೆ. ‘ಅಭಿವೃದ್ಧಿ ಹೊಂದಿದ ಭಾರತ’ದ ಕನಸು ಎಲ್ಲಾ ಸಮುದಾಯಗಳ ಹಿತಾಸಕ್ತಿಗಳನ್ನು ಒಳಗೊಂಡಿರಬೇಕು.” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ದೇಶದ ಖಜಾನೆಯ ಗಮನಾರ್ಹ ಭಾಗವನ್ನು ಕೆಲವು ಶತಕೋಟ್ಯಾಧಿಪತಿಗಳ ಸಾಲ ಮನ್ನಾ ಮಾಡಲು ಬಳಸಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ಇನ್ನು ಮುಂದೆ ಯಾವುದೇ ಶತಕೋಟ್ಯಾಧಿಪತಿಗಳ ಸಾಲವನ್ನು ಮನ್ನಾ ಮಾಡುವುದಿಲ್ಲ ಎಂದು ಬಜೆಟ್‌ನಲ್ಲಿ ಘೋಷಿಸಬೇಕೆಂದು ನಾನು ಒತ್ತಾಯಿಸಿದ್ದೆ” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಮಧ್ಯಮ ವರ್ಗದವರ ಗೃಹ ಸಾಲ ಮತ್ತು ವಾಹನ ಸಾಲಗಳನ್ನು ಅದರಿಂದ ಉಳಿಸಿದ ಹಣದಿಂದ ಮನ್ನಾ ಮಾಡಬೇಕು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ. ಆದಾಯ ತೆರಿಗೆ ಮತ್ತು ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಸಹ ಅರ್ಧಕ್ಕೆ ಇಳಿಸಬೇಕು. ಇದನ್ನು ಮಾಡದಿರುವುದು ನನಗೆ ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.
ಸೀತಾರಾಮನ್ ಶನಿವಾರ ಬಜೆಟ್ ಮಂಡಿಸುತ್ತಿದ್ದಾಗ, ಮಹಾ ಕುಂಭದಲ್ಲಿ ಕಾಲ್ತುಳಿತದ ಬಗ್ಗೆ ಚರ್ಚಿಸಬೇಕೆಂಬ ಬೇಡಿಕೆಯನ್ನು ಸ್ಪೀಕರ್ ಓಂ ಬಿರ್ಲಾ ಸ್ವೀಕರಿಸದ ನಂತರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ವಿರೋಧ ಪಕ್ಷದ ಸಂಸದರು ಲೋಕಸಭೆಯಿಂದ ಹೊರನಡೆದರುಬ ಎಂದು ವರದಿಯಾಗಿದೆ.
ಇದನ್ನೂಓದಿ: ನಕಲಿ ಚಿತ್ರ ಹಂಚಿಕೆ | ಬಿಜೆಪಿ ಬೆಂಬಲಿಗ ದುಷ್ಕರ್ಮಿ ಪ್ರಶಾಂತ್ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ದೂರು
ನಕಲಿ ಚಿತ್ರ ಹಂಚಿಕೆ | ಬಿಜೆಪಿ ಬೆಂಬಲಿಗ ದುಷ್ಕರ್ಮಿ ಪ್ರಶಾಂತ್ ಸಂಬರಗಿ ವಿರುದ್ಧ ನಟ ಪ್ರಕಾಶ್ ರಾಜ್ ದೂರು


