ಉಡುಪಿ: ಕಳೆದ 2 ದಶಕದ ಹಿಂದೆ ನಾಪತ್ತೆಯಾಗಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ನಕ್ಸಲ್ ಲಕ್ಷ್ಮೀ ಇಂದು (ಫೆ.2) ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾರೆ. ಈ ಮೂಲಕ ಉಡುಪಿ ಜಿಲ್ಲೆಯ ಪ್ರಥಮ ನಕ್ಸಲ್ ಹೋರಾಟಗಾರ್ತಿ ಸಮಾಜದ ಮುಖ್ಯವಾಹಿನಿಗೆ ಆಗಮಿಸಿದ್ದಾರೆ.
ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರಾದ ವಕೀಲ ಕೆ.ಪಿ. ಶ್ರೀಪಾಲ್ ಇದ್ದರು. ಎಸ್ ಪಿ ಡಾ.ಕೆ.ಅರುಣ್, ಹೆಚ್ಚುವರಿ ಎಸ್ಪಿ ಎಸ್. ಟಿ. ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆಯು ನಡೆಯಿತು.
ರಾಜ್ಯದಲ್ಲಿ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬರುತ್ತಿರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬಹುತೇಕ ಎಲ್ಲ ನಕ್ಸಲ್ ಹೋರಾಟಗಾರರು ಮುಖ್ಯವಾಹಿನಿಗೆ ಬಂದಿದ್ದು, ಕರ್ನಾಟಕ ನಕ್ಸಲ್ ಹೋರಾಟ ಮುಕ್ತ ರಾಜ್ಯವೆಂದು ಘೋಷಿಸಲಾಗಿದೆ.

ತೊಂಬಟ್ಟುವಿನ ಲಕ್ಷ್ಮೀಯವರು 2006 ಮಾರ್ಚ್ 6ರಂದು ಊರು ತೊರೆದಿದ್ದರು. ಅವರು ನಕ್ಸಲ್ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಮಾಜಿ ನಕ್ಸಲ್ ಹೋರಾಟಗಾರ ಸಂಜೀವ ಎಂಬಾತನನ್ನು ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಸದ್ಯ ಸಂಜೀವ ಅವರು ಈಗಾಗಲೇ ಮುಖ್ಯವಾಹಿನಿಗೆ ಬಂದಿದ್ದಾರೆ. ಆದರೆ, ಲಕ್ಷ್ಮಿ ಅವರು ಮುಖ್ಯವಾಹಿನಿಗೆ ಬಂದಿರಲಿಲ್ಲ. ಅವರ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಬೆದರಿಕೆ, ಕರಪತ್ರ ಹಂಚಿಕೆಗೆ ಸಂಬಂಧಪಟ್ಟಿವೆ ಎಂದು ವರದಿಯಾಗಿದೆ.
ತೊಂಬಟ್ಟುವಿನ ಪಂಜು ಪೂಜಾರಿ ಮತ್ತು ಅಬ್ಬಕ್ಕ ಪೂಜಾರಿ ದಂಪತಿಯ ಆರು ಮಕ್ಕಳ ಪೈಕಿ ಲಕ್ಷ್ಮಿ ಐದನೆಯವರು. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದ ಲಕ್ಷ್ಮಿ, ತನ್ನ ಗ್ರಾಮದ ಸಾಮಾಜಿಕ ಚಳುವಳಿಗಳಾದ ರಸ್ತೆ ಸಮಸ್ಯೆ, ಸಾರಾಯಿ ಅಂಗಡಿ ವಿರುದ್ಧ ಹೋರಾಟಗಳಲ್ಲಿ ಭಾಗಿಯಾಗಿದ್ದರು. ನಕ್ಸಲ್ ಗುಂಪಿನಲ್ಲಿ ಹಾಡುಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ನಕ್ಸಲ್ ಮುಕ್ತ ಕರ್ನಾಟಕ: ಮುಖ್ಯವಾಹಿನಿಗೆ ಮರಳಿದ ಕಟ್ಟಕಡೆಯ ಸಶಸ್ತ್ರ ಹೋರಾಟಗಾರ ರವೀಂದ್ರ


