ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಕಲಿ ಎನ್‌ಸಿಸಿ ಶಿಬಿರಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣ ಬೆಳಕಿಗೆ ಬಂದ ಆರು ತಿಂಗಳ ನಂತರ, ಜಿಲ್ಲೆಯ ಬರಗೂರು ಬಳಿಯ ಸರ್ಕಾರಿ ಶಾಲೆಯ ಮೂವರು ಶಿಕ್ಷಕರನ್ನು 13 ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬುಧವಾರ (ಫೆ.5) ಬಂಧಿಸಲಾಗಿದೆ.
ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಬಾಲಕಿಯ ಸಂಬಂಧಿಕರು ಬುಧವಾರ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಅವರ ಮನವೊಲಿಸಿದ್ದಾರೆ. ಅಧಿಕಾರಿಗಳೊಂದಿಗಿನ ಮಾತುಕತೆಯ ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗಿದೆ.
ವರದಿಗಳ ಪ್ರಕಾರ, ಸೋಮವಾರ (ಫೆ.4) ಸಂಜೆ ಬಾಲಕಿಯ ಶಾಲೆಗೆ ಹೋಗಿದ್ದ ಆಕೆಯ ತಾಯಿ, ಜನವರಿ 3ರಿಂದ ನನ್ನ ಮಗಳು ಅನಾರೋಗ್ಯದಿಂದ ರಜೆಯಲ್ಲಿದ್ದರೂ ಯಾರೂ ಏಕೆ ವಿಚಾರಿಸಲು ಬಂದಿಲ್ಲ ಎಂದು ಮುಖ್ಯೋಪಾಧ್ಯಾಯಿನಿಯನ್ನು (ಹೆಚ್‌ಎಂ) ಪ್ರಶ್ನಿಸಿದ್ದಾರೆ.
ನಂತರ, ಒಬ್ಬರು ಸಹ ಶಿಕ್ಷಕಿ ಜೊತೆ ಮುಖ್ಯ ಶಿಕ್ಷಕಿ ಬಾಲಕಿಯ ಆರೋಗ್ಯ ವಿಚಾರಿಸಲು ಆಕೆಯ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಜನವರಿ 2 ಮತ್ತು 3 ರಂದು 57, 48 ಮತ್ತು 37 ವರ್ಷ ವಯಸ್ಸಿನ ಮೂವರು ಶಿಕ್ಷಕರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕಿ ಶಿಕ್ಷಕಿಗೆ ತಿಳಿಸಿದ್ದಾಳೆ. ಮೂವರಲ್ಲಿ ಇಬ್ಬರು ಬಾಲಕಿಯ ತರಗತಿ ಶಿಕ್ಷಕರು ಎಂದು ವರದಿಗಳು ಹೇಳಿವೆ.
ಮರುದಿನ, ಬಾಲಕಿ ಮತ್ತು ಆಕೆಯ ತಾಯಿ, ಮುಖ್ಯ ಶಿಕ್ಷಕಿ ಮತ್ತು ಇತರೆ ಶಿಕ್ಷಕರೊಂದಿಗೆ ಬರಗೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ, ಕೃಷ್ಣಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಂತ್ರಸ್ತೆಯನ್ನು ಭೇಟಿ ಮಾಡಿ, ಕೃಷ್ಣಗಿರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿರುವ ಒನ್ ಸ್ಟಾಪ್ ಸೆಂಟರ್‌ಗೆ ಆಕೆಯನ್ನು ಕಳುಹಿಸಿದ್ದಾರೆ.
ಬಾಲಕಿಯ ದೂರಿನ ಮೇರೆಗೆ ಬರಗೂರು ಪೊಲೀಸರು ಪೋಕ್ಸೋ ಕಾಯ್ದೆಯ ಸೆಕ್ಷನ್ 5 (ಎಫ್) ಆರ್/ಡಬ್ಲ್ಯೂ 6 ರ ಅಡಿಯಲ್ಲಿ ತೀವ್ರ ಲೈಂಗಿಕ ದೌರ್ಜನ್ಯ ಮತ್ತು ಬಿಎನ್‌ಎಸ್ ಸೆಕ್ಷನ್ 329 (3) (ಕ್ರಿಮಿನಲ್ ಅತಿಕ್ರಮಣ) ಮತ್ತು 351 (2) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ, ಮುಖ್ಯ ಶಿಕ್ಷಣ ಅಧಿಕಾರಿ (ಪ್ರಭಾರ) ಎ. ಮುನಿರಾಜ್ ಮತ್ತು ಜಿಲ್ಲಾ ಶಿಕ್ಷಣ ಅಧಿಕಾರಿ (ಪ್ರಾಥಮಿಕ) ಥಾಮ್ಸನ್ ಶಾಲೆಗೆ ಭೇಟಿ ನೀಡಿದ್ದಾರೆ. ಸಿಇಒ ಅವರ ಸೂಚನೆಯ ಮೇರೆಗೆ ಮೂವರು ಆರೋಪಿ ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ.
ಕೇರಳ| ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ಅಮಾನತು


