ಮಹಿಳಾ ಕ್ರೀಡೆಗಳಲ್ಲಿ ಟ್ರಾನ್ಸ್‌ಜೆಂಡರ್ ಕ್ರೀಡಾಪಟುಗಳು ಸ್ಪರ್ಧಿಸುವುದನ್ನು ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಫೆ.5) ಸಹಿ ಹಾಕಿದ್ದಾರೆ.
ಕ್ರೀಡೆಗಳನ್ನು ನ್ಯಾಯಯುತವಾಗಿ ನಡೆಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಂಪ್ ಆಡಳಿತ ಸಮರ್ಥಿಸಿಕೊಂಡಿದೆ. ಮಹಿಳಾ ಕ್ರೀಡೆಗಳ ಸಮಗ್ರತೆಯನ್ನು ಎತ್ತಿ ಹಿಡಿಯಲು ಇದು ಅಗತ್ಯವಾದ ಹೆಜ್ಜೆ ಎಂದು ಟ್ರಂಪ್ ಬೆಂಬಲಿಗರು ಶ್ಲಾಘಿಸಿದ್ದಾರೆ. ಆದರೆ, ಜಾಗತಿಕ ಸಮುದಾಯ ಟ್ರಂಪ್ ನಡೆ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ವಿರುದ್ದದ ತಾರತಮ್ಯ ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಕ್ರಮ ಎಂದು ವಿರೋಧ ವ್ಯಕ್ತಪಡಿಸಿದೆ.
ಜನವರಿ 20, 2025ರಂದು ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಟ್ರಂಪ್ ಮಾಡಿದ್ದ ಉದ್ಘಾಟನಾ ಭಾಷಣದಲ್ಲಿ “ಅಮೆರಿಕ ಇನ್ನು ಮುಂದೆ ಗಂಡು, ಹೆಣ್ಣು ಎಂಬ ಎರಡು ಲಿಂಗಗಳನ್ನು ಮಾತ್ರ ಗುರುತಿಸಲಿದೆ” ಎಂದಿದ್ದರು.
ರಾಷ್ಟ್ರೀಯ ಬಾಲಕಿಯರು ಮತ್ತು ಮಹಿಳಾ ಕ್ರೀಡಾ ದಿನದಂದು “ಮಹಿಳಾ ಕ್ರೀಡೆಗಳಿಂದ ಪುರುಷರನ್ನು ದೂರವಿಡುವುದು” (Keeping Men Out of Women’s Sports) ಎಂಬ ವಿವಾದಾತ್ಮಕ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.
ಶ್ವೇತಭವನದ ಪೂರ್ವ ಕೋಣೆಯಲ್ಲಿ ಭಾಷಣ ಮಾಡಿದ ಟ್ರಂಪ್, “ಮಹಿಳಾ ಕ್ರೀಡಾಪಟುಗಳನ್ನು ರಕ್ಷಿಸುವತ್ತ ನಮ್ಮ ಆಡಳಿತ ಗಮನ ಹರಿಸುತ್ತಿದೆ. “ಮಹಿಳಾ ಕ್ರೀಡೆಗಳು ಮಹಿಳೆಯರಿಗೆ ಮಾತ್ರ” ಎಂದು ಎಂದಿದ್ದಾರೆ.
ಹೊಸ ಆದೇಶವನ್ನು ಜಾರಿಗೆ ತರಲು ಟ್ರಂಪ್ ಆಡಳಿತವು ಶಿಕ್ಷಣ ಇಲಾಖೆಯನ್ನು ಬಳಸಿಕೊಂಡಿದೆ. ಫೆಡರಲ್ ನಿಧಿಯನ್ನು ಪಡೆಯುವ ಶಾಲೆಗಳಲ್ಲಿ ಲಿಂಗ ಆಧಾರಿತ ತಾರತಮ್ಯವನ್ನು ನಿಷೇಧಿಸುವ 1972ರ ಕಾನೂನಾದ ಟೈಟಲ್ IX ಅನ್ನು ಮರು ವ್ಯಾಖ್ಯಾನಿಸಿದೆ. ಟ್ರಂಪ್ ಅವರ ನಿರ್ದೇಶನದ ಅಡಿಯಲ್ಲಿ, ಟೈಟಲ್ IX ಅನ್ನು ಲಿಂಗ ಗುರುತಿನ ಮೇಲೆ ಅಲ್ಲ, ಜೈವಿಕ ಲೈಂಗಿಕತೆಯ ಮೇಲೆ ಕೇಂದ್ರೀಕರಿಸಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗೂ ಇದೇ ರೀತಿಯ ನೀತಿಗಳನ್ನು ಅಳವಡಿಸಿಕೊಳ್ಳಲು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯನ್ನು ಒತ್ತಾಯಿಸಲು ವಿದೇಶಾಂಗ ಇಲಾಖೆಗೆ ಆದೇಶವು ನಿರ್ದೇಶಿಸಿದೆ. ಲಿಂಗ ಗುರುತಿಸುವಿಕೆ ಅಥವಾ ಟೆಸ್ಟೋಸ್ಟೆರಾನ್ ಮಟ್ಟಗಳಿಗಿಂತ ಬದಲಾಗಿ ಅರ್ಹತೆಯನ್ನು ಲಿಂಗದಿಂದ ನಿರ್ಧರಿಸಬೇಕು ಎಂದು ಟ್ರಂಪ್ ಆದೇಶ ಹೇಳಿದೆ. ಜಾಗತಿಕ ಮಟ್ಟದಲ್ಲಿ ಕಠಿಣ ನಿಯಮಗಳಿಗೆ ಒತ್ತಾಯಿಸಿದೆ.
“ಕೈಗೆ ಬೇಡಿ, ಕಾಲಿಗೆ ಸಂಕೋಲೆ ಹಾಕಲಾಗಿತ್ತು”…ಅಮೆರಿಕದಿಂದ ಗಡಿಪಾರಾದ ಭಾರತೀಯರ ಅಳಲು


