ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಖಾಸಗಿ ಶಾಲೆಯ ಮುಖ್ಯಸ್ಥೆ ಮತ್ತು ಆಕೆಯ ಪತಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಒಳಗೊಂಡ ಪ್ರಕರಣದಲ್ಲಿ ಮಹಿಳೆಯ ಪತಿ ‘ಪ್ರಮುಖ ಆರೋಪಿ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಿರುಚಿರಾಪಳ್ಳಿ ಜಿಲ್ಲೆಯ ಮನಪ್ಪರೈನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತೋರ್ವ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಸಂತ್ರಸ್ತೆಯ ಪೋಷಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಮತ್ತು ಬಂಧನಗಳನ್ನು ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಗತ್ಯವಿದ್ದರೆ, ಪ್ರಕರಣದಲ್ಲಿ ಹೆಚ್ಚಿನ ಜನರನ್ನು ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಅಧಿಕಾರಿ ಹೇಳಿದರು.
ಗುರುವಾರ ತಡರಾತ್ರಿ, ಬಾಲಕಿಯ ಸಂಬಂಧಿಕರು ಮತ್ತು ಸ್ಥಳೀಯರು ಆಕ್ರೋಶಗೊಂಡು, ಶಾಲೆಯಲ್ಲಿನ ಕಿಟಕಿ ಗಾಜುಗಳು ಮತ್ತು ಹೂವಿನ ಕುಂಡಗಳನ್ನು ಒಡೆದು, ಅಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿ ಮಾಡಿದ್ದಾರೆ.
ಮೂಲಗಳ ಪ್ರಕಾರ, ಜಿಲ್ಲೆಯ ಮನಪ್ಪರೈ ಪ್ರದೇಶದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಬಾಲಕಿ, ಶಾಲಾ ಸಿಬ್ಬಂದಿಯ ಪತಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಇದರಿಂದ ಆಘಾತಗೊಂಡ ಪೋಷಕರು ಮತ್ತು ಮಗುವಿನ ಸಂಬಂಧಿಕರು, ಗುರುವಾರ ರಾತ್ರಿ ಶಾಲಾ ಆವರಣಕ್ಕೆ ನುಗ್ಗಿ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿದರು. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಗುಂಪು ಕಲ್ಲುಗಳನ್ನು ಎಸೆದು ಶಾಲಾ ಕೋಣೆಯ ಕಿಟಕಿಗಳನ್ನು ಒಡೆದರು ಮತ್ತು ಹತ್ತಿರದಲ್ಲಿ ನಿಲ್ಲಿಸಿದ್ದ ವಾಹನದ ಗಾಜುಗಳನ್ನು ಸಹ ಹಾನಿಗೊಳಿಸಿದರು.
ನಂತರ ಅವರು ಶಾಲಾ ಸಿಬ್ಬಂದಿಯ ಪತಿ ವಸಂತ ಕುಮಾರ್ ಎಂದು ಗುರುತಿಸಲಾದ ಆರೋಪಿ ಮೇಲೆ ಹಲ್ಲೆ ನಡೆಸಿದರು.
ಪೊಲೀಸರ ಮಧ್ಯಪ್ರವೇಶದ ನಂತರ ಕುಮಾರ್ ಅವರನ್ನು ರಕ್ಷಿಸಲಾಯಿತು; ನಂತರ ಚಿಕಿತ್ಸೆಗಾಗಿ ಮನಪ್ಪರೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರ ಹೊರತಾಗಿಯೂ, ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒತ್ತಾಯಿಸಿ ಅನೇಕರು ಪ್ರತಿಭಟನೆ ಮುಂದುವರೆಸಿದರು. ನೊಚಿಮೇಡು ಪ್ರದೇಶದ ಬಳಿ ರಸ್ತೆ ತಡೆ ನಡೆಸಿದರು.
ಇದನ್ನೂ ಓದಿ; ತಮಿಳುನಾಡು| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ; ಶಾಲೆಯನ್ನು ಧ್ವಂಸಗೊಳಿಸಿದ ಪೋಷಕರು


