ದೆಹಲಿಯ ಮುಂದಿನ ಸರ್ಕಾರವನ್ನು ನಿರ್ಧರಿಸಲು 13,766 ಮತಗಟ್ಟೆಗಳಲ್ಲಿ ಚಲಾಯಿಸಲಾದ ಸುಮಾರು 9.5 ಮಿಲಿಯನ್ ಮತಗಳ ಎಣಿಕೆ ಕಾರ್ಯ ಇಂದು (ಫೆ.8) ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭಗೊಂಡಿದೆ.
ಕೇಂದ್ರಾಡಳಿತ ಪ್ರದೇಶವಾದ ರಾಷ್ಟ್ರ ರಾಜಧಾನಿಯ 19 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. 699 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.
“ಮತ ಎಣಿಕೆ ಹಿನ್ನೆಲೆ ನಾವು ಬಿಗಿ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದೇವೆ. ಎಣಿಕೆ ಕೇಂದ್ರಗಳ ಒಳಗೆ ಅಧಿಕೃತ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗುವುದು. ಅಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ” ಎಂದು ವಿಶೇಷ ಪೊಲೀಸ್ ಆಯುಕ್ತ ದೇವೇಶ್ ಚಂದ್ರ ಶ್ರೀವಾಸ್ತವ ಹೇಳಿದ್ದಾರೆ.
ಮತ ಎಣಿಕೆ ಕಾರ್ಯವನ್ನು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸಲು ಸುಮಾರು 5,000 ಸಿಬ್ಬಂದಿಯನ್ನು ನೇಮಿಸಲಾಗಿದೆ. ಮತ ಎಣಿಕೆಯ ಮುನ್ನಾದಿನ, ಅಂದರೆ ನಿನ್ನೆ (ಫೆ.7) ರಾಜಧಾನಿಯಲ್ಲಿ ರಾಜಕೀಯ ಕಿತ್ತಾಟ ದೊಡ್ಡ ಮಟ್ಟದಲ್ಲಿ ನಡೆದಿದೆ. ಎಲ್ಲಾ ಪಕ್ಷಗಳು ಪರಸ್ಪರ ಅಕ್ರಮಗಳ ಆರೋಪಗಳನ್ನು ಮಾಡಿವೆ.
ಫೆ.5 ಮತ್ತು 6ರಂದು ಪ್ರಕಟಗೊಂಡ ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಹುಮತ ಗಳಿಸಲಿದೆ ಎಂದಿವೆ. ರಾಷ್ಟ್ರ ರಾಜಧಾನಿಯ ಮೇಲಿನ ಆಮ್ ಆದ್ಮಿ ಪಕ್ಷದ (ಎಎಪಿ) ಹಿಡಿತವನ್ನು ಕೊನೆಗೊಳಿಸುವ ಮೂಲಕ 27 ವರ್ಷಗಳ ನಂತರ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದಿವೆ.
ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಈ ಬಾರಿಯ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗುವವರು ಯಾರು ಎಂಬುವುದು ಮಧ್ಯಾಹ್ನದ ವೇಳೆಗೆ ಖಚಿತವಾಗಬಹುದು.
ಫಾರ್ಮ್ ’17 ಸಿ’ ಮಾಹಿತಿ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ: ಕೇಜ್ರಿವಾಲ್ ಆರೋಪ


