ದೆಹಲಿಯಲ್ಲಿ ಒಂದು ದಶಕದಲ್ಲಿಯೇ ಅತ್ಯಂತ ಕಡಿಮೆ ಎಂದರೆ 5 ಮಹಿಳಾ ಶಾಸಕರು ಸ್ಥಾನ ಪಡೆದಿದ್ದಾರೆ. 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 699 ಅಭ್ಯರ್ಥಿಗಳಲ್ಲಿ 96 ಮಹಿಳೆಯರು ಸ್ಪರ್ಧಿಸಿದ್ದರು. ಇದರಲ್ಲಿ ಬಿಜೆಪಿ ಮತ್ತು ಎಎಪಿಯಿಂದ ತಲಾ 9 ಮತ್ತು ಕಾಂಗ್ರೆಸ್‌ನಿಂದ 7 ಮಂದಿ ಸ್ಪರ್ಧಿಸಿದ್ದರು.
ನವದೆಹಲಿ: ಈ ವರ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 100 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಕೇವಲ ಐವರು ಅಂದರೆ ಬಿಜೆಪಿಯಿಂದ 4 ಮತ್ತು ಎಎಪಿಯಿಂದ ಒಬ್ಬರು ವಿಜೇತರಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಕಳೆದ 10 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆಯಾಗಿದೆ.
ಈ ಬಾರಿ ಗೆದ್ದ ಎಎಪಿಯ ಏಕೈಕ ಮಹಿಳಾ ಅಭ್ಯರ್ಥಿ ನಿರ್ಗಮಿತ ಮುಖ್ಯಮಂತ್ರಿ ಅತಿಶಿ, ಹೊಸದಾಗಿ ಆಯ್ಕೆಯಾದ ಐದು ಮಹಿಳಾ ಶಾಸಕರಲ್ಲಿ ಒಬ್ಬರಾಗಿದ್ದಾರೆ. ಮಹಿಳಾ ಶಾಸಕಿಯರು ಈಗ ದೆಹಲಿಯ 70 ಸದಸ್ಯರ ವಿಧಾನಸಭೆಯಲ್ಲಿ 7%ರಷ್ಟಿದ್ದಾರೆ.
ಈ ವರ್ಷ 699 ಅಭ್ಯರ್ಥಿಗಳಲ್ಲಿ 96 ಮಹಿಳೆಯರು, ಬಿಜೆಪಿ ಮತ್ತು ಎಎಪಿಯಿಂದ ತಲಾ 9 ಮತ್ತು ಕಾಂಗ್ರೆಸ್‌ನಿಂದ 7 ಮಂದಿ ಸೇರಿದಂತೆ ಸ್ಪರ್ಧಿಸಿದ್ದರು. ಮೂರು ಪ್ರಮುಖ ರಾಜಕೀಯ ಪಕ್ಷಗಳು ಈ ಬಾರಿ 2020ರ ವಿಧಾನಸಭಾ ಚುನಾವಣೆಗಿಂತ ಹೆಚ್ಚು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.
1993ರಲ್ಲಿ ದೆಹಲಿ ವಿಧಾನಸಭೆಯನ್ನು ಪುನರ್ ರಚಿಸಿದ ನಂತರ ಈ ವರ್ಷ ಇದೇ ಮೊದಲ ಬಾರಿಗೆ ಹೆಚ್ಚಿನ ಮಹಿಳಾ ಮತದಾರರು ಅಂದರೆ 60.9% ರಷ್ಟು ಮತದಾನವನ್ನು ಚಲಾಯಿಸಿದ್ದು ದಾಖಲಾಗಿದೆ. ಫೆಬ್ರವರಿ 5ರಂದು ನಡೆದ ಒಂದೇ ಹಂತದ ಚುನಾವಣೆಯಲ್ಲಿ 72.36 ಲಕ್ಷ ನೋಂದಾಯಿತ ಮಹಿಳಾ ಮತದಾರರಲ್ಲಿ ಸುಮಾರು 44.08 ಲಕ್ಷ ಜನರಿಗೆ ಸಹಿ ಹಾಕಲಾಗಿದೆ.
2025ರ ದೆಹಲಿ ಚುನಾವಣೆಯಲ್ಲಿ ಗೆದ್ದ ಮಹಿಳೆಯರು
ಅತಿಶಿ: ಅವರು ತಮ್ಮ ಕಲ್ಕಾಜಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಮತ್ತು ಬಿಜೆಪಿಯ ರಮೇಶ್ ಬಿಧುರಿ ಅವರನ್ನು ಸೋಲಿಸಿ 3,521 ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದಿದ್ದಾರೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್ ಮತ್ತು ಸತ್ಯೇಂದರ್ ಜೈನ್ ಸೇರಿದಂತೆ ಪಕ್ಷದ ಹೆಚ್ಚಿನ ಪ್ರಮುಖ ನಾಯಕರು ಸೋತಿದ್ದರಿಂದ ಚುನಾವಣೆಯಲ್ಲಿ ಗೆದ್ದ ಕೆಲವು ಎಎಪಿ ಸಚಿವರು ಮತ್ತು ಹಿರಿಯ ನಾಯಕರಲ್ಲಿ ಅತಿಶಿ ಕೂಡ ಒಬ್ಬರಾಗಿದ್ದಾರೆ.
ನೀಲಂ ಪಹೇಲ್ವಾನ್: ನಜಾಫ್‌ಗಢದ ಬಿಜೆಪಿ ಅಭ್ಯರ್ಥಿ ನೀಲಂ ಪಹೇಲ್ವಾನ್ ತಮ್ಮ ಹತ್ತಿರದ ಪ್ರತಿಸ್ಪರ್ಧಿ ಎಎಪಿಯ ತರುಣ್ ಕುಮಾರ್ ಅವರನ್ನು ಸುಮಾರು 30,000 ಮತಗಳಿಂದ ಸೋಲಿಸಿದ್ದಾರೆ.
ರೇಖಾ ಗುಪ್ತಾ: ಶಾಲಿಮಾರ್ ಬಾಗ್ ಸ್ಥಾನದಿಂದ ಬಿಜೆಪಿಯಿಂದ ಸ್ಪರ್ಧಿಸಿ, ಎಎಪಿಯ ಬಂದಾನ ಕುಮಾರಿ ಅವರನ್ನು 29,595 ಮತಗಳಿಂದ ಸೋಲಿಸಿದ್ದಾರೆ.
ಪೂನಂ ಶರ್ಮಾ: ಬಿಜೆಪಿ ಅಭ್ಯರ್ಥಿಯಾದ ಇವರು ವಜೀರ್‌ಪುರ ಕ್ಷೇತ್ರದಲ್ಲಿ ಎಎಪಿಯ ರಾಜೇಶ್ ಗುಪ್ತಾ ಅವರನ್ನು 11,425 ಮತಗಳಿಂದ ಸೋಲಿಸಿದ್ದಾರೆ.
ಶಿಖಾ ರಾಯ್: ಗ್ರೇಟರ್ ಕೈಲಾಶ್‌ನಿಂದ ಹಾಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಅವರನ್ನು 3,188 ಮತಗಳ ಅಂತರದಿಂದ ಸೋಲಿಸುವ ಮೂಲಕ ಬಿಜೆಪಿ ನಾಯಕಿ ವಿಜಯಶಾಲಿಯಾಗಿದ್ದಾರೆ.
ಈ ಹಿಂದಿನ ದೆಹಲಿಯ ಮಹಿಳಾ ಶಾಸಕರತ್ತ ಒಂದು ನೋಟ
1993ರಿಂದ ಇಲ್ಲಿಯವರೆಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ 44 ಮಹಿಳಾ ಅಭ್ಯರ್ಥಿಗಳು ಮಾತ್ರ ಗೆದ್ದಿದ್ದಾರೆ. 1998ರಲ್ಲಿ 9 ಮಹಿಳೆಯರು ಗೆದ್ದಿದ್ದರು. 1993ರಲ್ಲಿ ಕೇವಲ 3 ಮಹಿಳೆಯರು ಆಯ್ಕೆಯಾಗಿದ್ದರು. ಇದು ವಿಧಾನಸಭೆಯ ಶೇಕಡಾ 4.3ರಷ್ಟಿತ್ತು.
2003ರಲ್ಲಿ ಏಳು ಮಹಿಳೆಯರು ಆಯ್ಕೆಯಾಗಿದ್ದರು ಮತ್ತು 2008 ಮತ್ತು 2013ರ ಎರಡೂ ಚುನಾವಣೆಗಳಲ್ಲಿ ಈ ಸಂಖ್ಯೆ ಮೂರಕ್ಕೆ ಇಳಿಯಿತು. 2015ರಲ್ಲಿ, ಒಟ್ಟು 63 ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ಅವರಲ್ಲಿ 6 ಮಂದಿ ಗೆದ್ದರು.
2020ರ ಚುನಾವಣೆಯಲ್ಲಿ ಸ್ಪರ್ಧಿಸಿದ 672 ನಾಮನಿರ್ದೇಶಿತರಲ್ಲಿ 76 ಮಹಿಳೆಯರು ಸೇರಿದ್ದರು. ಅವರಲ್ಲಿ 8 ಮಹಿಳೆಯರು ಗೆದ್ದಿದ್ದರು.
ದೆಹಲಿ ಇಲ್ಲಿಯವರೆಗೆ ಕೇವಲ ಮೂವರು ಮಹಿಳಾ ಮುಖ್ಯಮಂತ್ರಿಗಳನ್ನು ಮಾತ್ರ ಕಂಡಿದೆ. 1998ರಲ್ಲಿ ಬಿಜೆಪಿಯ ಸುಷ್ಮಾ ಸ್ವರಾಜ್, 1998ರಿಂದ 2013ರವರೆಗೆ 15 ವರ್ಷಗಳ ಕಾಲ ರಾಜಧಾನಿಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್‌ನ ಶೀಲಾ ದೀಕ್ಷಿತ್ ಮತ್ತು ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ನಗರದ ಕಿರಿಯ ಮುಖ್ಯಮಂತ್ರಿ ಎಎಪಿಯ ಅತಿಶಿಯಾಗಿದ್ದಾರೆ.


