ಫೆಬ್ರವರಿ 14ರಂದು ನಡೆಯಲಿರುವ ಸಭೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ, ಫೆಬ್ರವರಿ 25ರಂದು ಶಂಭು ಗಡಿಯಿಂದ ದೆಹಲಿಗೆ ರೈತರ ಗುಂಪೊಂದು ಪಾದಯಾತ್ರೆಯನ್ನು ಪುನರಾರಂಭಿಸಲಿದೆ ಎಂದು ಪಂಜಾಬ್ ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಸೋಮವಾರ (ಫೆ.10) ಹೇಳಿದ್ದಾರೆ.
ರೈತರ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಫೆಬ್ರವರಿ 14ರಂದು ಚಂಡೀಗಢದಲ್ಲಿ ಸಭೆ ಕರೆದಿದೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾವನ್ನು ಮಾತುಕತೆಗೆ ಆಹ್ವಾನಿಸಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ರೈತ ಸಂಘಟನೆಗಳ ನೇತೃತ್ವದಲ್ಲಿ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಫೆಬ್ರವರಿ 14ರಂದು ಚಂಡೀಗಢದಲ್ಲಿ ಕೇಂದ್ರ ಸಚಿವರೊಂದಿಗೆ ನಡೆಯಲಿರುವ ಸಭೆಯಲ್ಲಿ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪಂಧೇರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಫೆಬ್ರವರಿ 14ರಂದು ನಡೆಯಲಿರುವ ಸಭೆಯಲ್ಲಿ ಸರ್ಕಾರ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದರೆ, ರೈತರ ಗುಂಪು ಫೆಬ್ರವರಿ 25 ರಂದು ದೆಹಲಿಗೆ ಪಾದಯಾತ್ರೆಯನ್ನು ಪುನರಾರಂಭಿಸಲಿದೆ. ರೈತರು ಮಾತುಕತೆ ನಡೆಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಪಂಧೇರ್ ಹೇಳಿದ್ದಾರೆ.
ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಂಜನ್ ನೇತೃತ್ವದ ಕೇಂದ್ರದ ಉನ್ನತ ಮಟ್ಟದ ನಿಯೋಗವು ಜನವರಿ 18 ರಂದು ರೈತ ಸಂಘಟನೆಗಳಾದ ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂ ಅನ್ನು ಮಾತುಕತೆಗೆ ಆಹ್ವಾನಿಸಿತ್ತು.
ಫೆಬ್ರವರಿ 12ರಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆದಿರುವ ಏಕತಾ ಮಾತುಕತೆ ಸಭೆಯಲ್ಲಿ ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂನ ರೈತ ನಾಯಕರ ನಿಯೋಗ ಭಾಗವಹಿಸಲಿದೆ ಎಂದು ಪಂಧೇರ್ ತಿಳಿಸಿದ್ದಾರೆ.
ಈ ನಡುವೆ ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂ ಫೆಬ್ರವರಿ 11 ರಂದು ರಾಜಸ್ಥಾನದ ರತನ್‌ಪುರ, ಫೆಬ್ರವರಿ 12ರಂದು ಖಾನೌರಿ ಗಡಿ ಮತ್ತು ಫೆಬ್ರವರಿ 13ರಂದು ಶಂಭು ಗಡಿಯಲ್ಲಿ ‘ಕಿಸಾನ್ ಮಹಾಪಂಚಾಯತ್’ಗಳನ್ನು ನಡೆಸಲಿವೆ.
ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಅಡಿಯಲ್ಲಿ ರೈತರು 2024ರ ಫೆಬ್ರವರಿ 13ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದೆಹಲಿಗೆ ಮೆರವಣಿಗೆ ನಡೆಸಲು ಹಲವು ಬಾರಿ ರೈತರು ನಡೆಸಿದ ಪ್ರಯತ್ನಗಳನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.
ಭಾರತದಲ್ಲಿ ಅಲ್ಪಸಂಖ್ಯಾತ ವಿರೋಧಿ ದ್ವೇಷ ಭಾಷಣ 2024ರಲ್ಲಿ 74% ಹೆಚ್ಚಳ!


