ರಾಜ್ಯಪಾಲರು ಕೋರಿದ ವಿವರಣೆಯೊಂದಿಗೆ ಮೈಕ್ರೋ ಫೈನಾನ್ಸ್‌ಗೆ ಸಂಬಂಧಿಸಿದ ಸುಗ್ರೀವಾಜ್ಞೆಯನ್ನು ಸರ್ಕಾರ ರಾಜಭವನಕ್ಕೆ ಕಳುಹಿಸಿತ್ತು. ಅದಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಬುಧವಾರ (ಫೆ.12) ತಿಳಿಸಿದೆ.
ಮೈಕ್ರೊ ಫೈನಾನ್ಸ್ ಕಂಪನಿಗಳು ಜನ ಸಾಮಾನ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ತಡೆಗಟ್ಟಲು ರಾಜ್ಯ ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ತಿರಸ್ಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಶುಕ್ರವಾರ (ಫೆ.7) ಹೇಳಿತ್ತು.
- ಸುಗ್ರೀವಾಜ್ಞೆಯಲ್ಲಿ ಹೇಳಲಾಗಿರುವ 10 ವರ್ಷಗಳ ಶಿಕ್ಷೆ ಹಾಗೂ ₹ 5 ಲಕ್ಷ ದಂಡ ವಿಪರೀತವಾಗಿದೆ.
- ಈಗ ಚಾಲ್ತಿಯಲ್ಲಿರುವ ಕಾನೂನನ್ನು ಉಪಯೋಗಿಸಿಕೊಂಡು ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ನಿಯಂತ್ರಿಸಬಹುದು.
- ಸುಗ್ರೀವಾಜ್ಞೆಯು ಮೈಕ್ರೊ ಫೈನಾನ್ಸ್ ಕಂಪನಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಬಡವರಿಗೂ ತೊಂದರೆಯಾಗಲಿದೆ.
ಮೇಲಿನ ಮೂರು ಕಾರಣಗಳನ್ನು ಕೊಟ್ಟು ರಾಜ್ಯಪಾಲರು ಸುಗ್ರಿವಾಜ್ಞೆ ತಿರಸ್ಕರಿಸಿದ್ದಾರೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿತ್ತು.
ನಂತರ ಮೈಕ್ರೋ ಫೈನಾನ್ಸ್ ಕುರಿತ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಕೇಳಿದ ಸಮಗ್ರ ವಿವರಣೆಗಳೊಂದಿಗೆ ವಾಪಾಸ್ ರಾಜಭವನಕ್ಕೆ ರವಾನಿಸಲಾಗಿದೆ ಎಂದು ಸೋಮವಾರ (ಫೆ.10) ಸರ್ಕಾರ ತಿಳಿಸಿತ್ತು.
ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ಜನವರಿ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸುಗ್ರಿವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿತ್ತು.
ಒಳ ಮೀಸಲಾತಿ | ಜಸ್ಟೀಸ್ ನಾಗಮೋಹನ್ ದಾಸ್ ಭೇಟಿಯಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟ ಪ.ಜಾತಿಗಳ ಒಕ್ಕೂಟ


