ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ಸಂಯೋಜಿಸುವ ಮೂಲಕ ರೂಪಿಸಿದ ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನ ಕಟ್ಟಡ ಸೆಸ್ ಸಂಗ್ರಹದಲ್ಲಿ ಕುಸಿತಕ್ಕೆ ಕಾರಣವಾಗಬಹುದು. ಇದು ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಲ್ಯಾಣ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇರಳದ ಕಾರ್ಮಿಕ ಸಚಿವ ವಿ.ಶಿವನ್‌ಕುಟ್ಟಿ ಬುಧವಾರ (ಫೆಬ್ರವರಿ 12, 2025) ವಿಧಾನಸಭೆಗೆ ತಿಳಿಸಿದ್ದಾರೆ.
ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ರೀತಿಯಲ್ಲಿ ರಾಜ್ಯದಲ್ಲಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗುವುದು ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ.
ಪ್ರಸ್ತುತ ಇರುವ ಮಾನದಂಡಗಳ ಪ್ರಕಾರ ₹10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ನಿರ್ಮಾಣ ವೆಚ್ಚದ ಕಟ್ಟಡಗಳಿಗೆ ಶೇ.1 ರಷ್ಟು ಕಟ್ಟಡ ಸೆಸ್ ವಿಧಿಸಲಾಗುತ್ತದೆ. ಕೇಂದ್ರದ ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ, ₹50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಿರ್ಮಾಣ ವೆಚ್ಚದ ಕಟ್ಟಡಗಳಿಗೆ ಮಾತ್ರ ಸೆಸ್ ಸಂಗ್ರಹಿಸಬಹುದು. ಇದು ಸೆಸ್ ಸಂಗ್ರಹದಲ್ಲಿ ಪ್ರಮುಖ ಕೊರತೆಗೆ ಕಾರಣವಾಗುತ್ತದೆ. ಇದರಿಂದಾಗಿ ಕಲ್ಯಾಣ ಮಂಡಳಿ ಸದಸ್ಯರಿಗೆ ಪಿಂಚಣಿ ಮತ್ತು ಇತರ ಸವಲತ್ತುಗಳ ವಿತರಣೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಕೇರಳದ ವಿಶಿಷ್ಟ ಪರಿಸ್ಥಿತಿಯನ್ನು ಪರಿಗಣಿಸಿ ಮಾತ್ರ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗುವುದು ಎಂದು ಶಿವನ್ ಕುಟ್ಟಿ ತಿಳಿಸಿದ್ದಾರೆ.
ಸೆಸ್ ಅದಾಲತ್‌ಗಳು
ಸಚಿವರ ಪ್ರಕಾರ, ಸೆಪ್ಟೆಂಬರ್ 2023 ರವರೆಗಿನ ಪಿಂಚಣಿ ಸೌಲಭ್ಯಗಳನ್ನು ವಿತರಿಸಲಾಗಿದೆ. ಆದರೆ ಮಾರ್ಚ್ 31, 2024 ರವರೆಗಿನ ಇತರ ಸೌಲಭ್ಯಗಳನ್ನು ಮಾತ್ರ ವಿತರಿಸಲಾಗಿದೆ. ಕಟ್ಟಡ ಸೆಸ್ ಸಂಗ್ರಹದಲ್ಲಿನ ಕೊರತೆಯನ್ನು ನೀಗಿಸಲು ಸರ್ಕಾರ 2021 ರಿಂದ ಸೆಸ್ ಅದಾಲತ್‌ಗಳನ್ನು ಆಯೋಜಿಸುತ್ತಿದೆ. ಕಟ್ಟಡ ಮಾಲೀಕರು ಕಟ್ಟಡ ಸೆಸ್ ಅನ್ನು ಐದು ಕಂತುಗಳಲ್ಲಿ ಪಾವತಿಸಲು ಅವಕಾಶವನ್ನು ಒದಗಿಸಲಾಗಿದೆ. 2021-22 ರಲ್ಲಿ, ಅದಾಲತ್‌ಗಳ ಮೂಲಕ ₹285.11 ಕೋಟಿ ಸಂಗ್ರಹಿಸಲಾಗಿದೆ. 2022-23 ರಲ್ಲಿ ₹378.18 ಕೋಟಿ ಮತ್ತು 2023-24 ರಲ್ಲಿ ₹385.53 ಕೋಟಿ ಸಂಗ್ರಹಿಸಲಾಗಿದೆ.
ಫೆಬ್ರವರಿ 2024ರಿಂದ, ಸೆಸ್ ಸಂಗ್ರಹವನ್ನು ಸುಧಾರಿಸುವ ಉದ್ದೇಶದಿಂದ ಸ್ಥಳೀಯ ಸಂಸ್ಥೆಗಳಿಗೆ ಕಟ್ಟಡ ಸೆಸ್ ಸಂಗ್ರಹಿಸುವ ಅಧಿಕಾರವನ್ನು ನೀಡಲಾಗಿದೆ. ಕಲ್ಯಾಣ ಮಂಡಳಿ ಸದಸ್ಯರಿಗೆ ಪಿಂಚಣಿ ಪಾವತಿ ವಿಳಂಬದ ಕುರಿತು ಕಾಂಗ್ರೆಸ್ ಶಾಸಕರಾದ ಸಿ.ಆರ್. ಮಹೇಶ್, ಎ.ಪಿ. ಅನಿಲ್‌ಕುಮಾರ್, ಐ.ಸಿ. ಬಾಲಕೃಷ್ಣನ್ ಮತ್ತು ರೋಜಿ ಎಂ. ಜಾನ್ ಅವರು ಎತ್ತಿದ ಪ್ರಶ್ನೆಗಳಿಗೆ ಸಚಿವ ಶಿವನ್‌ಕುಟ್ಟಿ ಉತ್ತರ ನೀಡಿದ್ದಾರೆ.
ಅದಾನಿಗಾಗಿ ಗಡಿ ಭದ್ರತಾ ನಿಯಮಗಳ ಸಡಿಲಿಕೆ ಆರೋಪ : ಪ್ರಧಾನಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ ಕಾಂಗ್ರೆಸ್


