ಲೋಕಸಭೆಯ ಕಲಾಪವನ್ನು ಮಾರ್ಚ್ 10ರವರೆಗೆ ಮುಂದೂಡಲಾಗಿದ್ದು, ಬಜೆಟ್ ಅಧಿವೇಶನದ ಮೊದಲ ಹಂತದ ಕಲಾಪಗಳು ಇಂದು (ಫೆ.13) ಮುಕ್ತಾಯಗೊಂಡಿದೆ.
ಜಂಟಿ ಸಂಸದೀಯ ಸಮಿತಿ (ಜೆಪಿಸಿ) ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತ ತನ್ನ ವರದಿಯನ್ನು ಇಂದು ಲೋಕಸಭೆಯಲ್ಲಿ ಮಂಡಿಸಿತು. ಈ ವೇಳೆ, ಸರ್ಕಾರ ನಮ್ಮ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ತೆಗೆದು ಹಾಕಿದೆ ಎಂದು ಆರೋಪಿಸಿ ವಿರೋಧ ಪಕ್ಷಗಳ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದ ಸದನದಲ್ಲಿ ಕೋಲಾಹಲ ಉಂಟಾಯಿತು.
ಇದಕ್ಕೂ ಮುನ್ನ ಇಂದು ರಾಜ್ಯಸಭೆಯಲ್ಲೂ ಜೆಪಿಸಿ ವರದಿ ಮಂಡನೆಯಾಗಿದೆ. ಅಲ್ಲೂ ಪ್ರತಿಪಕ್ಷ ಸದಸ್ಯರು ಪ್ರತಿಭಟಿಸಿದ್ದರಿಂದ ಕಲಾಪಕ್ಕೆ ಅಡ್ಡಿಯಾಯಿತು. ಪ್ರತಿಪಕ್ಷ ಸದಸ್ಯರ ಭಿನ್ನಾಭಿಪ್ರಾಯಗಳನ್ನು ತಿರಸ್ಕರಿಸಲಾಗಿದೆ ಎಂದ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಪಿಸಿ ವರದಿಯನ್ನು ‘ಪ್ರಜಾಪ್ರಭುತ್ವ ವಿರೋಧಿ’ ಎಂದು ಕರೆದರು.
ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಘೋಷಣೆಗಳನ್ನು ಕೂಗಿದ ನಡುವೆಯೇ, ಜೆಪಿಸಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರು ಲೋಕಸಭೆಯಲ್ಲಿ ಸಮಿತಿಯ ವರದಿಯನ್ನು ಮಂಡಿಸಿದರು.
ವಿರೋಧ ಪಕ್ಷಗಳ ಪ್ರತಿಭಟನೆಯ ವೇಳೆ ಮಧ್ಯ ಪ್ರವೇಶಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸೇರಿಸಲು ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ” ಎಂದು ಹೇಳಿದರು.
“ವಿರೋಧ ಪಕ್ಷದ ಕೆಲವು ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಸಂಪೂರ್ಣವಾಗಿ (ವಕ್ಫ್ ಜೆಪಿಸಿ ವರದಿಯಲ್ಲಿ) ಸೇರಿಸಲಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ಕಳವಳಗಳನ್ನು ಪರಿಗಣಿಸಿ, ಏನು ಬೇಕಾದರು ಸೇರಿಸಬಹುದು. ನನ್ನ ಪಕ್ಷಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ನನ್ನ ಪಕ್ಷದ ಪರವಾಗಿ ನಾನು ಹೇಳಲು ಬಯಸುತ್ತೇನೆ” ಎಂದು ಅಮಿತ್ ಶಾ ತಿಳಿಸಿದರು.
ಮಧ್ಯಾಹ್ನ 2 ಗಂಟೆಗೆ ಸದನ ಪುನರಾರಂಭಗೊಂಡಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ಆದಾಯ ತೆರಿಗೆ ಮಸೂದೆ-2025’ ಅನ್ನು ಮಂಡಿಸಿದರು. ಇದನ್ನೂ ವಿರೋಧಿಸಿದ ಪ್ರತಿಪಕ್ಷ ಸದಸ್ಯರು, ಲೋಕಸಭೆಯ ಆಯ್ಕೆ ಸಮಿತಿಗೆ ಉಲ್ಲೇಖಿಸುವಂತೆ ಸ್ಪೀಕರ್‌ಗೆ ಒತ್ತಾಯಿಸಿದರು.
ಇಂದು ಲೋಕಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಅದಾನಿ ಇಂಧನ ಯೋಜನೆಗೆ ಪಾಕಿಸ್ತಾನ-ಭಾರತ ಗಡಿಯಲ್ಲಿ ಜಾಗ ನೀಡಲು ಭದ್ರತಾ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂಬ ಮಾಧ್ಯಮ ವರದಿಯನ್ನು ಪ್ರಸ್ತಾಪಿಸಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟಿಸಿದರು. ಇದರಿಂದ ಕೋಲಾಹಲ ಉಂಟಾಗಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ವಕ್ಫ್ ಮಸೂದೆ ಕುರಿತು ಜೆಪಿಸಿ ವರದಿಗೆ ಸಂಬಂಧಿಸಿದ ಗದ್ದಲದ ನಂತರ ಸದನದ ಕಲಾಪಗಳನ್ನು ಮಾರ್ಚ್ 10ರವರೆಗೆ ಮುಂದೂಡಲಾಯಿತು. ಮಾರ್ಚ್ 10ರಂದು ಬೆಳಿಗ್ಗೆ 11 ಗಂಟೆಯವರೆಗೆ ಸದನದ ಕಲಾಪಗಳನ್ನು ಮುಂದೂಡಲಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಘೋಷಿಸಿದರು.
“ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ 17 ಗಂಟೆ 23 ನಿಮಿಷಗಳ ಕಾಲ ನಡೆಯಿದೆ. 173 ಸಂಸದರು ಉತ್ಪಾದಕ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಬಜೆಟ್ ಮೇಲಿನ ಚರ್ಚೆಯ ಸಮಯದಲ್ಲಿ, 170 ಸದಸ್ಯರು 16 ಗಂಟೆ 13 ನಿಮಿಷಗಳ ಕಾಲ ಭಾಗವಹಿಸಿದ್ದಾರೆ” ಎಂದು ಸ್ಪೀಕರ್ ಓಂ ಬಿರ್ಲಾ ಮಾಹಿತಿ ನೀಡಿದರು.
ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪಗಳು ಮಾರ್ಚ್ 10 ರಿಂದ ಏಪ್ರಿಲ್ 4 ರವರೆಗೆ ನಡೆಯಲಿದೆ.
ವಕ್ಫ್ ಮಸೂದೆಯನ್ನು ಜೆಪಿಸಿಗೆ ಹಿಂತಿರುಗಿಸುವಂತೆ ಒತ್ತಾಯಿಸಿದ ಮಲ್ಲಿಕಾರ್ಜುನ ಖರ್ಗೆ


