ಕಳೆದ ವರ್ಷದ (2024) ಫೆಬ್ರವರಿಯಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಮತ್ತು ಶಂಭು ಗಡಿ ಬಿಂದುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಶುಕ್ರವಾರ (ಫೆ.14) ಕೇಂದ್ರ ಸರ್ಕಾರ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಸಚಿವ ಪ್ರಲ್ಹಾದ್ ಜೋಶಿ ರೈತ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಆದರೆ, ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಸಚಿವ ಮುಂದಿಟ್ಟಿದ್ದಾರೆ. ಇದರಿಂದ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಕೇಂದ್ರ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ 28 ಸದಸ್ಯರ ರೈತ ನಾಯಕರ ನಿಯೋಗ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಸಾಲ ಮನ್ನಾ, ಪ್ರತಿಭಟನಾ ನಿರತ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ಮತ್ತು 2021ರ ಲಖಿಂಪುರ ಖೇರಿ ಹಿಂಸಾಚಾರದ ಬಲಿಪಶುಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ರೈತ ನಾಯಕ ಅಭಿಮನ್ಯು ಕೊಹರ್ ಹೇಳಿದ್ದಾರೆ.
ಕಳೆದ ವರ್ಷದ (2024) ನವೆಂಬರ್ 26ರಿಂದ ಆಮರಣಾಂತ ಉಪವಾಸ ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಮೊಮ್ಮಗಳ ಮರಣದ ನಡುವೆಯೂ ಅವರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.
“ನಾವು ನಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ಅದಕ್ಕೆ ಕೇಂದ್ರ ಸಚಿವರ ಬಳಿ ಸಮರ್ಪಕರ ಉತ್ತರ ಸಿಕ್ಕಿಲ್ಲ. ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುವಂತೆ ನಾವು ಪ್ರಧಾನಿ ಮತ್ತು ಗೃಹ ಸಚಿವರನ್ನು ಒತ್ತಾಯಿಸುತ್ತೇವೆ” ಎಂದು ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕೃಷಿ ಸಚಿವರ ಸಮ್ಮುಖದಲ್ಲಿ ಚರ್ಚಿಸಬೇಕಷ್ಟೆ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾಗಿ ಪಂಧೇರ್ ತಿಳಿಸಿದ್ದಾರೆ.
ಸರ್ಕಾರವು ಶಂಭು ಗಡಿಯನ್ನು ತೆರೆಯಬೇಕೆಂದು ಪಂಧೇರ್ ಒತ್ತಾಯಿಸಿದ್ದು, ಇನ್ನೊಂದು ಬದಿಯಲ್ಲಿರುವ ಉದ್ಯಮಿಗಳು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.
“ದೇಶದ ವಿವಿಧ ಕಡೆಗಳಿಂದ ಹಲವಾರು ರೈತ ಮುಖಂಡರು ಇಲ್ಲಿಗೆ (ಚಂಡೀಗಢ) ಬಂದಿರುವುದರಿಂದ ನಾವು ದೆಹಲಿಗೆ ಹೋಗಲು ಬಯಸಿದ್ದೇವೆ. ಪ್ರಯಾಣದ ವಿಷಯದಲ್ಲೂ ದೆಹಲಿ ಹೋಗುವುದು ಸುಲಭ” ಎಂದು ಪಂಧೇರ್ ಹೇಳಿದ್ದಾರೆ.
ಈ ನಡುವೆ, ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಂತೆ ದಲ್ಲೇವಾಲ್ ಅವರಿಗೆ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ. ಆದರೆ ಕೇಂದ್ರ ಸರ್ಕಾರ ಎಂಎಸ್‌ಪಿಗೆ ಕಾನೂನುಬದ್ಧ ಖಾತರಿ ನೀಡುವವರೆಗೆ ಉಪವಾಸ ಮುಂದುವರಿಸುವುದಾಗಿ ದಲ್ಲೇವಾಲ್ ತಿಳಿಸಿದ್ದಾರೆ.
ರೈತರು ಮತ್ತು ಕೇಂದ್ರದ ನಡುವಿನ ಮುಂದಿನ ಸಭೆ ಫೆಬ್ರವರಿ 22ರಂದು ನಿಗದಿಯಾಗಿದ್ದು, ರೈತರು ದೆಹಲಿಯಲ್ಲಿ ಸಭೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರಲ್ಹಾದ್ ಜೋಶಿ ಹೇಳಿದ್ದೇನು?
ರೈತ ನಾಯಕರೊಂದಿಗಿನ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ಚಂಡೀಗಢದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಜೊತೆ ಮಹತ್ವದ ಸಭೆ ನಡೆಸಿ, ರೈತ ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡಿದೆವು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರೈತರ ಕಲ್ಯಾಣಕ್ಕಾಗಿ ನಾವು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳನ್ನು ಸಭೆಯಲ್ಲಿ ಎತ್ತಿ ತೋರಿಸಿದ್ದೇವೆ. ರೈತರೊಂದಿಗೆ ಮಾತುಕತೆಗೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ. ಮಾತುಕತೆಗಳು ಸಕಾರಾತ್ಮಕವಾಗಿ ಪ್ರಾರಂಭವಾಗಿರುವುದರಿಂದ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ನಾನು ಮನವಿ ಮಾಡಿದ್ದೇನೆ.
ಮುಂದಿನ ನಿರ್ಣಾಯಕ ಸಭೆ ಫೆಬ್ರವರಿ 22ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರ
ನೇತೃತ್ವದಲ್ಲಿ ನಡೆಯಲಿದೆ. ರೈತರ ಕಳವಳಗಳನ್ನು ಪ್ರಾಮಾಣಿಕತೆ ಮತ್ತು ಅತ್ಯಂತ ದೃಢ ನಿಶ್ಚಯದಿಂದ ಪರಿಹರಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
Held a significant meeting in Chandigarh with the Sanyukt Kisan Morcha (Non-Political) and Kisan Mazdoor Morcha, engaging in constructive discussions with farmer representatives.
Under the leadership of Hon'ble PM Shri @narendramodi ji, we highlighted key decisions for farmers'… pic.twitter.com/zxgUeq9Knb
— Pralhad Joshi (@JoshiPralhad) February 14, 2025
ಭದ್ರತಾ ಪಡೆಗಳು ದೆಹಲಿಗೆ ಮೆರವಣಿಗೆ ನಡೆಸಲು ಅವಕಾಶ ನೀಡದಿರುವ ಹಿನ್ನೆಲೆ, ಕಳೆದ ವರ್ಷದ (2024) ಫೆಬ್ರವರಿ 13ರಿಂದ ರೈತರು ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂ ಬ್ಯಾನರ್ ಅಡಿಯಲ್ಲಿ ಶಂಭು ಮತ್ತು ಖಾನೌರಿ ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿ ಪ್ರತಿಭಟಿಸುತ್ತಿದ್ದಾರೆ.


