ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅಕ್ರಮಗಳ ಕುರಿತು ಎಫ್‌ಐಆರ್ ದಾಖಲಾದ ಸುಮಾರು ಎರಡು ತಿಂಗಳ ನಂತರ, ರಾಜ್ಯ ಸರ್ಕಾರ 167 ಕೋಟಿ ರೂಪಾಯಿ ಹಗರಣ ತನಿಖೆಯನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ವರ್ಗಾಯಿಸಿದೆ.
ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ, ಮೂವರು ಡಿವೈಎಸ್ಪಿಗಳನ್ನು ಒಳಗೊಂಡ ತಂಡವು ತನಿಖೆ ನಡೆಸಲಿದೆ. ಎನ್95 ಮಾಸ್ಕ್ ಪಿಪಿಇ ಕಿಟ್‌ಗಳ ಖರೀದಿ ಮತ್ತು ಕೋವಿಡ್ ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ನವೆಂಬರ್ 2024ರಲ್ಲಿ ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರದ ಪ್ರಕಾರ, ಈ ಪ್ರಕರಣವನ್ನು ಆರಂಭದಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ಮಾಡಿಸಲು ನಿರ್ಧರಿಸಲಾಗಿತ್ತು. ಆದರೆ, 5 ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ವಂಚನೆಗಳನ್ನು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗವು ತನಿಖೆ ಮಾಡಬೇಕು ಎನ್ನುವುದನ್ನು ಕಡ್ಡಾಯಗೊಳಿಸುವ ಸ್ಥಾಪಿತ ಶಿಷ್ಟಾಚಾರವನ್ನು ಉಲ್ಲೇಖಿಸಿ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿದೆ.
ಪ್ರಕರಣದ ಎಫ್‌ಐಆರ್‌ನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮಾಜಿ ನಿರ್ದೇಶಕ ಪಿ.ಜಿ. ಗಿರೀಶ್, ಅಧಿಕಾರಿಗಳಾದ ರಘು ಜಿ.ಪಿ. ಮತ್ತು ಎನ್. ಮುನಿರಾಜು ಅವರ ವಿರುದ್ಧ ಆರೋಪ ಹೊರಿಸಲಾಗಿದೆ. ಇವರು ಇತರ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸೇರಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ- 1999 ಅನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ದುರುಪಯೋಗದಿಂದ ಒಟ್ಟು 167 ಕೋಟಿ ರೂ. ರಾಜ್ಯ ಖಜಾನೆಗೆ ನಷ್ಟವಾಗಿದೆ ಎಂದು ವರದಿಯಾಗಿದೆ.
ಸಿಐಡಿ ಅಧಿಕಾರಿಗಳು ತಮ್ಮ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು 1988ರ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17(1)(A)ಅಡಿಯಲ್ಲಿ ಆರೋಪಿತ ಅಧಿಕಾರಿಗಳನ್ನು ಪ್ರಾಥಮಿಕ ವಿಚಾರಣೆಗೆ ಒಳಪಡಿಸಲು ರಾಜ್ಯ ಸರ್ಕಾರದ ಅನುಮೋದನೆಯನ್ನು ಕೋರಿದ್ದಾರೆ.
ಪ್ರಕರಣವನ್ನು ಪರಿಶೀಲಿಸುವ ಸಂಪುಟ ಉಪಸಮಿತಿಯ ನೇತೃತ್ವ ವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ನೇತೃತ್ವದ ಆಯೋಗದ ವರದಿಯ ಪ್ರಮುಖ ಅಂಶಗಳನ್ನು ಉಲ್ಲೇಖಿಸಿದ್ದಾರೆ. ವರದಿಯು ದೊಡ್ಡ ಮಟ್ಟದ ಆರ್ಥಿಕ ಅಕ್ರಮವನ್ನು ಎತ್ತಿ ತೋರಿಸಿದೆ ಎಂದು ವರದಿಯಾಗಿದೆ.
ಕೋವಿಡ್-19 ಪರೀಕ್ಷಾ ವೆಚ್ಚದಲ್ಲಿ ಗಂಭೀರ ಅಕ್ರಮಗಳನ್ನು ಡಿ.ಕೆ ಶಿವಕುಮಾರ್ ಉಲ್ಲೇಖಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲೇ 84 ಲಕ್ಷ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿದ್ದು, 502 ಕೋಟಿ ರೂ. ಬಿಲ್ ಮಾಡಲಾಗಿದೆ. ಅದರಲ್ಲಿ 400 ಕೋಟಿ ರೂ.ಗಳನ್ನು ಈಗಾಗಲೇ ಪಾವತಿಸಲಾಗಿದೆ. ಇಷ್ಟೊಂದು ಹಣ ಖರ್ಚಾಗಲು ಸಾಧ್ಯವಿಲ್ಲ. ಬಿಲ್ ಮೊತ್ತ ನೋಡಿದರೆ ಪ್ರತಿ ಮನೆಗೆ ಸರಾಸರಿ ಎರಡು ಪರೀಕ್ಷೆಗಳು ನಡೆಯುತ್ತವೆ ಎಂದು ಡಿಕೆಶಿ ಹೇಳಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ICMR) ಅಗತ್ಯವಾದ ತಾಂತ್ರಿಕ ಸಾಮರ್ಥ್ಯ ಮತ್ತು ಅನುಮೋದನೆಯ ಕೊರತೆಯಿದ್ದರೂ, 24 ಲಕ್ಷ ಪರೀಕ್ಷೆಗಳನ್ನು ನಡೆಸಲು 146 ಕೋಟಿ ರೂ. ಬಿಲ್ ಮಾಡಿದ ಕಿದ್ವಾಯಿ ಆಸ್ಪತ್ರೆಯ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟಿಕೊಂಡಿದೆ.
ಸಿದ್ರಾಮುಲ್ಲಾ ಖಾನ್ ಪ್ರಕರಣ | ಬಿಜೆಪಿ ನಾಯಕರ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಕಾಂಗ್ರೆಸ್ ಸರ್ಕಾರ ನಿರ್ಧಾರ!


