ಮುಂಬೈ: ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳ ರೈತ ನಾಯಕರ ನಡುವೆ ಪ್ರಸ್ತಾವಿತ 802 ಕಿಲೋಮೀಟರ್ ನಾಗಪುರ-ಗೋವಾ ಶಕ್ತಿಪೀಠ ಎಕ್ಸ್‌ಪ್ರೆಸ್‌ವೇ ಕುರಿತು ಭೂಸ್ವಾಧೀನ ಕಾಳಜಿಗಳು ಮತ್ತು ಗ್ರಹಿಸಿದ ಅಸಮಾನತೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಬಿರುಕು ಮೂಡಿದೆ.
ವಿದರ್ಭದ ರೈತರು ಆರ್ಥಿಕ ಪ್ರಯೋಜನಗಳು ಮತ್ತು ಮಾರುಕಟ್ಟೆಗಳಿಗೆ ಸುಧಾರಿತ ಪ್ರವೇಶವನ್ನು ನಿರೀಕ್ಷಿಸುತ್ತಾ ಈ ಯೋಜನೆಯನ್ನು ಹೆಚ್ಚಾಗಿ ಬೆಂಬಲಿಸುತ್ತಿದ್ದಾರೆ, ಆದರೆ ಮರಾಠವಾಡ ಮತ್ತು ಸಾಂಗ್ಲಿ ಮತ್ತು ಕೊಲ್ಹಾಪುರ (ರಾಜ್ಯದ ಪಶ್ಚಿಮ ಭಾಗದಲ್ಲಿ)ದ ರೈತರು ಸ್ಥಳಾಂತರ, ಕೃಷಿ ಭೂಮಿಯ ನಷ್ಟ ಮತ್ತು ಅಸಮರ್ಪಕ ಪರಿಹಾರದ ಭಯದಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವಿತ ಹೆದ್ದಾರಿಯು ಗೋವಾವನ್ನು ಪ್ರವೇಶಿಸುವ ಮೊದಲು ಮಹಾರಾಷ್ಟ್ರದ 12 ಜಿಲ್ಲೆಗಳಾದ ವಾರ್ಧಾ, ಯವತ್ಮಾಲ್, ಹಿಂಗೋಲಿ, ನಾಂದೇಡ್, ಪರ್ಭಾನಿ, ಬೀಡ್, ಲಾತೂರ್, ಧಾರಶಿವ್, ಸೋಲಾಪುರ, ಸಾಂಗ್ಲಿ, ಕೊಲ್ಹಾಪುರ ಮತ್ತು ಸಿಂಧುದುರ್ಗದ ಮೂಲಕ ಹಾದುಹೋಗುವ ಗುರಿಯನ್ನು ಹೊಂದಿದೆ.
ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ನೇತೃತ್ವ ವಹಿಸಿರುವ ರೈತ ನಾಯಕ ಮತ್ತು ಮಾಜಿ ಸಂಸದ ರಾಜು ಶೆಟ್ಟಿ ಈ ಯೋಜನೆಯ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭೂಸ್ವಾಧೀನ ವೆಚ್ಚವನ್ನು ಹೆಚ್ಚಿಸಿದ್ದರೂ ಕಡಿಮೆ ಪರಿಹಾರವನ್ನು ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು ಲಾತೂರ್‌ನ ರೈತರು ಪ್ರಸ್ತಾವಿತ ಹೆದ್ದಾರಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಇದನ್ನು ಗುತ್ತಿಗೆದಾರರ ಲಾಭಕ್ಕಾಗಿ ನಿರ್ಮಿಸಲಾಗುತ್ತಿದೆ ಮತ್ತು ಯೋಜನೆಗಾಗಿ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರನ್ನು ತೀವ್ರವಾಗಿ ತೊಂದರೆಗೊಳಿಸಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
ಈ ಹೆದ್ದಾರಿಯನ್ನು ಕೊಲ್ಹಾಪುರ ಜಿಲ್ಲೆಯಲ್ಲಿ ಮಾತ್ರ ವಿರೋಧಿಸಲಾಗಿದೆ ಎಂಬ ಸುಳ್ಳು ನಿರೂಪಣೆಯನ್ನು ಸರ್ಕಾರ ಎತ್ತಿ ತೋರಿಸುತ್ತಿದೆ. ವಾಸ್ತವದಲ್ಲಿ ಹೆದ್ದಾರಿ ಹಾದುಹೋಗುವ ಎಲ್ಲಾ 12 ಜಿಲ್ಲೆಗಳಿಂದ ವಿರೋಧವಿದೆ. ಸರ್ಕಾರ ಈ ಅನಗತ್ಯ ಹೆದ್ದಾರಿಯನ್ನು ಹೇರಲು ಪ್ರಯತ್ನಿಸಿದರೆ, ರೈತರು ಮಾಡು-ಇಲ್ಲವೇ-ಮಡಿ ಹೋರಾಟವನ್ನು ಕೈಗೊಳ್ಳುತ್ತಾರೆ ಎಂದು ರೈತರನ್ನು ಪ್ರತಿನಿಧಿಸುವ ಸಂಘಟನೆಯಾದ ಶಕ್ತಿಪೀಠ ಹೆದ್ದಾರಿ ವಿರೋಧಿ ಸಂಘರ್ಷ ಸಮಿತಿಯ ಸಂಯೋಜಕ ಗಿರೀಶ್ ಫೋಂಡೆ ಹೇಳಿದ್ದಾರೆ.
ಆದಾಗ್ಯೂ ವಿದರ್ಭದ ಇತರ ರೈತರೊಂದಿಗೆ ಯೋಜನೆಯನ್ನು ಬೆಂಬಲಿಸುತ್ತಿರುವ ಸಂಜಯ್ ಧೋಲೆ, ಈ ಹೆದ್ದಾರಿಯನ್ನು ನಿರ್ಮಿಸಿದರೆ ವಿದರ್ಭ ಪ್ರದೇಶಕ್ಕೆ ಹೆಚ್ಚಿನ ಯೋಜನೆಗಳು ಬರುತ್ತವೆ ಎಂದು ಹೇಳಿದ್ದಾರೆ.
ವಿದರ್ಭಕ್ಕೆ 8 ಮೆಗಾ ಹೂಡಿಕೆ ಯೋಜನೆಗಳು ಬರಲಿವೆ. ಇವು ವಿದ್ಯಾವಂತ ಮತ್ತು ಕೌಶಲ್ಯಪೂರ್ಣ ಕೆಲಸಗಾರರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಈ ಯೋಜನೆಯ ಬಗ್ಗೆ ಯಾವುದೇ ವ್ಯಕ್ತಿಯ ಪ್ರಶ್ನೆಗಳು ಅಥವಾ ಸಂದೇಹಗಳನ್ನು ಪರಿಹರಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಸುಮಾರು 86,000 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಮೊದಲು ಸೆಪ್ಟೆಂಬರ್ 2022ರಲ್ಲಿ ಘೋಷಿಸಲಾಯಿತು. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC) ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಿ ನಂತರ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿದೆ.
ಮೂಲಗಳ ಪ್ರಕಾರ ಯೋಜನೆಗೆ ಅಗತ್ಯವಿರುವ 8,419 ಹೆಕ್ಟೇರ್‌ಗಳಲ್ಲಿ 8,100 ಹೆಕ್ಟೇರ್‌ಗಳು ಖಾಸಗಿ ಒಡೆತನದ ಕೃಷಿ ಭೂಮಿಯಾಗಿದೆ. ಯೋಜನೆಯ ಅಂದಾಜು ವೆಚ್ಚ 86,000 ಕೋಟಿ ರೂ. ಅಥವಾ ಪ್ರತಿ ಕಿ.ಮೀ.ಗೆ 107 ಕೋಟಿ ರೂ. ಆಗಿದೆ. ಇದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಭೂಸ್ವಾಧೀನಕ್ಕಾಗಿ ನಿಗದಿಪಡಿಸಿದ ಪ್ರತಿ ಕಿಲೋಮೀಟರ್‌ಗೆ 20-25 ಕೋಟಿ ರೂ.ಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಶೆಟ್ಟಿ ಹೇಳಿಕೊಂಡಿದ್ದಾರೆ.
ಶಕ್ತಿಪೀಠ ಎಕ್ಸ್‌ಪ್ರೆಸ್‌ವೇಗೆ ರೈತರಿಗೆ ಪರಿಹಾರವು ಮುಂಬೈ-ನಾಗ್ಪುರ ಸಮೃದ್ಧಿ ಎಕ್ಸ್‌ಪ್ರೆಸ್‌ವೇಗೆ ನೀಡಲಾಗಿದ್ದ ಪರಿಹಾರದ ಶೇ.40 ಮಾತ್ರ ಎಂದು ಅವರು ಹೇಳಿಕೊಂಡಿದ್ದಾರೆ.
ಕಳೆದ ವರ್ಷ ರಾಜ್ಯದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳ ನಂತರ, ಅಂದಿನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಯೋಜನೆಯನ್ನು ಜನರ ಮೇಲೆ ಹೇರಲಾಗುವುದಿಲ್ಲ ಮತ್ತು ವಿರೋಧ ಇರುವಲ್ಲಿ ಮಾರ್ಗದ ಮರುಜೋಡಣೆಯ ಬಗ್ಗೆಯೂ ಸರ್ಕಾರ ಯೋಚಿಸುತ್ತಿದೆ ಎಂದು ಹೇಳಿದ್ದರು. ಕಳೆದ ವರ್ಷ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ, ಬಿಜೆಪಿ ನೇತೃತ್ವದ ಮಹಾಯುತಿ ಯೋಜನೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಳೆದ ತಿಂಗಳು ಅಧಿಕಾರಿಗಳಿಗೆ ಯೋಜನೆಯನ್ನು ಪ್ರಾರಂಭಿಸಲು ನಿರ್ದೇಶಿಸಿದರು. ಯೋಜನೆಯ ಆರ್ಥಿಕ, ಪ್ರವಾಸೋದ್ಯಮ ಮತ್ತು ಸಂಪರ್ಕ ಸಂಬಂಧಿತ ಪ್ರಯೋಜನಗಳನ್ನು ಒತ್ತಿ ಹೇಳಿದ್ದಾರೆ.
“ಹೆದ್ದಾರಿಗೆ ಯಾವುದೇ ವಿರೋಧವಿಲ್ಲ. ಪ್ರತಿರೋಧವಿದ್ದರೆ ನಾನು ರೈತರೊಂದಿಗೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುತ್ತೇನೆ” ಎಂದು ಅವರು ಹೇಳಿದ್ದರು.
ಆದಾಗ್ಯೂ ರಾಜ್ಯ ಸಚಿವ ಹಸನ್ ಮುಶ್ರೀಫ್, “ಶಕ್ತಿಪೀಠ ಹೆದ್ದಾರಿ ಕೊಲ್ಹಾಪುರ ಜಿಲ್ಲೆಯ ಮೂಲಕ ಹಾದುಹೋಗುವುದಿಲ್ಲ. ಸಾಂಗ್ಲಿಯವರೆಗೆ ಯಾವುದೇ ವಿರೋಧವಿಲ್ಲ, ಆದ್ದರಿಂದ ಅಲ್ಲಿ ಪ್ರತಿಭಟಿಸುವುದು ನಮ್ಮ ಕಾಳಜಿಯಲ್ಲ” ಎಂದು ಹೇಳಿದ್ದಾರೆ. ಸಾಂಗ್ಲಿಯ ನಂತರ ಹೆದ್ದಾರಿಯು ಸಂಕೇಶ್ವರ ಪಟ್ಟಣದ ಮೂಲಕ ಗೋವಾ ಕಡೆಗೆ ಸಾಗಬಹುದು ಎಂದು ಅವರು ತಿಳಿಸಿದ್ದಾರೆ.
ವಿರೋಧ ಪಕ್ಷದ ಕಾಂಗ್ರೆಸ್‌ನ ಎಂಎಲ್‌ಸಿ ಸತೇಜ್ ಪಾಟೀಲ್ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ನಾಗ್ಪುರ-ರತ್ನಗಿರಿ ಹೆದ್ದಾರಿ ನಿರ್ಮಾಣ ಈಗಾಗಲೇ ನಡೆಯುತ್ತಿದೆ. ಹಾಗಾದರೆ ಈ ಹೊಸ ಹಸಿರು ಕ್ಷೇತ್ರ ಯೋಜನೆಗೆ ಏಕೆ ಒತ್ತಾಯಿಸಬೇಕು.
“ಈ ಯೋಜನೆಯ ಪರಿಸರ ಪರಿಣಾಮದ ಅಧ್ಯಯನ ಇರುವುದಿಲ್ಲ. ಇದು ಸಾಮಾನ್ಯ ಜನರಿಗೆ ಯಾವುದೇ ಪ್ರಯೋಜನವಿಲ್ಲ, ಗುತ್ತಿಗೆದಾರರಿಗೆ ಲಾಭ ತರುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ನಾಗ್ಪುರ-ರತ್ನಗಿರಿ ಹೆದ್ದಾರಿಗಾಗಿ ಸ್ವಾಧೀನಪಡಿಸಿಕೊಳ್ಳುತ್ತಿರುವ ಭೂಮಿಯಲ್ಲಿ ಶಕ್ತಿಪೀಠ ಹೆದ್ದಾರಿಗಾಗಿ ಹೆಚ್ಚಿನ ರೈತರು ಭೂಮಿಯನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಶಕ್ತಿಪೀಠ ಹೆದ್ದಾರಿ ವಿರೋಧಿ ಕೃತಿ ಸಮಿತಿಯ ಅಡಿಯಲ್ಲಿ ರೈತರು ಯೋಜನೆಯ ವಿರುದ್ಧ ತಮ್ಮ ಆಂದೋಲನವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಜಿಲ್ಲೆಯಿಂದ ಹೆದ್ದಾರಿ ಹಾದುಹೋಗುವುದನ್ನು ವಿರೋಧಿಸಿ ರೈತರು ಮತ್ತು ಕಾರ್ಮಿಕರ ಪಕ್ಷವು ಸಾಂಗ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಸಾಂಗ್ಲಿ ಜಿಲ್ಲೆಯ ರೈತ ಗುಂಪಿನ ಸಂಚಾಲಕ ದಿಗಂಬರ್ ಕಾಂಬ್ಳೆ, “ಸಾಂಗ್ಲಿಯ 19 ಹಳ್ಳಿಗಳ ಮೂಲಕ ಹೆದ್ದಾರಿ ಹಾದುಹೋಗಲು ಬಿಡುವುದಿಲ್ಲ. ರೈತರು ಅದಕ್ಕಾಗಿ ಬೀದಿಗಿಳಿಯಲು ಸಿದ್ಧರಾಗಿದ್ದಾರೆ” ಎಂದು ಹೇಳಿದ್ದಾರೆ.
ಒಡಿಶಾ: 5 ವರ್ಷಗಳಲ್ಲಿ ಕಾಣೆಯಾಗಿರುವ 36,000 ಮಹಿಳೆಯರು: ಮುಖ್ಯಮಂತ್ರಿ ಮಾಝಿ


