ಡೊನಾಲ್ಡ್ ಟ್ರಂಪ್ ಆಡಳಿತವು ಅಕ್ರಮ ವಲಸೆಯ ವಿರುದ್ಧ ಕೈಗೊಂಡ ಕ್ರಮಗಳ ಭಾಗವಾಗಿ, ಅಮೆರಿಕದಿಂದ ಗಡೀಪಾರು ವಿಮಾನ ಹತ್ತುವಾಗ ಅಕ್ರಮ ವಲಸಿಗರನ್ನು ಕೋಳ ಮತ್ತು ಸರಪಳಿಯಿಂದ ಬಂಧಿಸಿರುವುದನ್ನು ತೋರಿಸುವ ವೀಡಿಯೊವನ್ನು ಶ್ವೇತಭವನ ಮಂಗಳವಾರ ಪೋಸ್ಟ್ ಮಾಡಿದೆ.
ಗಡೀಪಾರು ವಿಮಾನಗಳಲ್ಲಿ ದಾಖಲೆರಹಿತ ವ್ಯಕ್ತಿಗಳನ್ನು ನಡೆಸಿಕೊಳ್ಳುವುದರ ಕುರಿತು ಭಾರತದಲ್ಲಿ ವಿರೋಧ ವ್ಯಕ್ತವಾಗುತ್ತಿರುವಾಗಲೇ, ಅಮೆರಿಕ ಗಡೀಪಾರು ಮಾಡುವ ವಿಮಾನಗಳಲ್ಲಿ ಅಧಿಕಾರಿಯೊಬ್ಬರು ಸಂಕೋಲೆಗಳಲ್ಲಿ ಬಂಧಿಸಲ್ಪಟ್ಟ ವ್ಯಕ್ತಿಯನ್ನು ಗಡೀಪಾರಿಗೆ ಸಿದ್ಧಪಡಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.
ಮುಖ ತೋರಿಸದ ವಲಸಿಗರೊಬ್ಬರು ಅಧಿಕಾರಿಯ ಹಿಂದೆ ನಡೆದುಕೊಂಡು ಹೋಗುವಾಗ ಕೈಕೋಳಗಳನ್ನು ಒಟ್ಟಿಗೆ ಜೋಡಿಸಿ ಕಾಲುಗಳನ್ನು ಸರಪಳಿಯಿಂದ ಕಟ್ಟಿರುವುದನ್ನು ಕಾಣಬಹುದು. ಮತ್ತೊಂದು ದೃಶ್ಯದಲ್ಲಿ ಒಬ್ಬ ವ್ಯಕ್ತಿಯು ವಿಮಾನದ ಮೆಟ್ಟಿಲು ಹತ್ತುವಾಗ ಕೈಕೋಳಗಳಿಂದ ಒಟ್ಟಿಗೆ ಜೋಡಿಸಿರುವುದು, ವ್ಯಕ್ತಿಯ ಕಾಳುಗಳನ್ನು ಸರಪಳಿಗಳಲ್ಲಿ ಬಂಧಿಸಿರುವುದನ್ನು ಕಾಣಬಹುದು.
ASMR: Illegal Alien Deportation Flight 🔊 pic.twitter.com/O6L1iYt9b4
— The White House (@WhiteHouse) February 18, 2025
ಮತ್ತೋರ್ವ ವ್ಯಕ್ತಿ ಸಂಕೋಲೆಯಲ್ಲಿ ವಿಮಾನ ಹತ್ತುತ್ತಿರುವುದು ಕೂಡ ಕಂಡುಬರುತ್ತದೆ. ವೀಡಿಯೊದಲ್ಲಿ ತೋರಿಸಿರುವ ಪುರುಷರಲ್ಲಿ ಯಾರ ಮುಖವೂ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡ ‘ಹಹಾ ವಾವ್’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ರೀ ಪೋಸ್ಟ್ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, 332 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಮೂರು ಯುಎಸ್ ಮಿಲಿಟರಿ ವಿಮಾನಗಳು ಅಮೃತಸರದಲ್ಲಿ ಬಂದಿಳಿದವು. ಎಲ್ಲ ಗಡೀಪಾರುದಾರರು ತಾವು ಸಂಕೋಲೆಯಲ್ಲಿದ್ದೇವು. ಪ್ರಯಾಣದ ಸಮಯದಲ್ಲಿ ಶೌಚಾಲಯಕ್ಕೆ ಮತ್ತು ಆಹಾರಕ್ಕೆ ಅವಕಾಶ ಇರಲಿಲ್ಲ ಎಂದು ದೂರಿದರು.
ಯುಎಸ್ ಬಾರ್ಡರ್ ಪೆಟ್ರೋಲ್ (ಯುಬಿಎಸ್‌ಪಿ) ಮುಖ್ಯಸ್ಥ ಮೈಕೆಲ್ ಡಬ್ಲ್ಯೂ ಬ್ಯಾಂಕ್ಸ್ ಈ ಹಿಂದೆ ಅಮೇರಿಕನ್ ಮಿಲಿಟರಿ ವಿಮಾನದಲ್ಲಿ ಭಾರತಕ್ಕೆ ‘ಅಕ್ರಮ ವಿದೇಶಿಯರನ್ನು’ ಗಡೀಪಾರು ಮಾಡುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವೀಡಿಯೊ ಭಾರತದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು, ವಿರೋಧ ಪಕ್ಷಗಳು ಯುಎಸ್‌ನಿಂದ ಭಾರತೀಯ ಗಡೀಪಾರು ಮಾಡಲ್ಪಟ್ಟವರ ‘ಅಮಾನವೀಯ ವರ್ತನೆ’ಯನ್ನು ಎತ್ತಿ ತೋರಿಸಿದವು.
ಇದನ್ನೂ ಓದಿ; ಗಾಜಾ: ತುಂಬಾ ಕಠಿಣವಾಗಿರುವ 2ನೇ ಹಂತದ ಒಪ್ಪಂದದ ಕುರಿತು ಈ ವಾರ ಮಾತುಕತೆ: ಇಸ್ರೇಲ್ ವಿದೇಶಾಂಗ ಸಚಿವ


