ಸೆಕ್ಯುರಿಟೀಸ್ ವಂಚನೆ ಮತ್ತು ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿ 2,237 ಕೋಟಿ ರೂ. ಲಂಚ ಆರೋಪದ ಕುರಿತಂತೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ವಿರುದ್ಧ ತನಿಖೆಗೆ ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್(ಎಸ್‌ಇಸಿ) ಭಾರತ ಸರ್ಕಾರದ ಸಹಾಯ ಕೋರಿದೆ ಎಂದು ನ್ಯಾಯಾಲಯದ ದಾಖಲೆಗಳು ತೋರಿಸಿದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂಗಳವಾರ (ಫೆ.18) ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದ ದಾಖಲೆ ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದ್ದು, ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅವರಿಗೆ ದೂರಿನ ಪ್ರತಿ ನೀಡಲು ಯುಎಸ್ ಸೆಕ್ಯುರಿಟೀಸ್ ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಹಾಯ ಕೇಳಿದೆ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಭಾರತದಲ್ಲಿದ್ದು ಅಮೆರಿಕದ ವಶದಲ್ಲಿಲ್ಲ ಎಂದು ಹೇಳಿದೆ.
ಈ ಕುರಿತು ಅದಾನಿ ಗ್ರೂಪ್ ಮತ್ತು ಭಾರತದ ಕಾನೂನು ಸಚಿವಾಲಯ ತಕ್ಷಣ ಪ್ರತಿಕ್ರಿಯಿಸಿಲ್ಲ ಎಂದು ರಾಯಿಟರ್ಸ್ ತಿಳಿಸಿದೆ.
ಕಳೆದ ವಾರ, ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾಧ್ಯಮದವರೊಂದಿಗೆ ಮಾತನಾಡುವಾಗ “ಅದಾನಿ ಪ್ರಕರಣದ ಬಗ್ಗೆ ಚರ್ಚಿಸಲಿಲ್ಲ. ಅದು ನಾಯಕರು ಚರ್ಚಿಸದ ವೈಯಕ್ತಿಕ ವಿಷಯ” ಎಂದಿದ್ದರು.
ವಿರೋಧ ಪಕ್ಷ ಕಾಂಗ್ರೆಸ್ ಈಗಾಗಲೇ ಅದಾನಿಯವರ ಬಂಧನಕ್ಕೆ ಆಗ್ರಹಿಸಿದೆ. ಮೋದಿ ಈ ಹಿಂದೆ ಅದಾನಿಯನ್ನು ರಕ್ಷಿಸಿದ್ದಾರೆ ಅಥವಾ ವ್ಯವಹಾರಗಳಲ್ಲಿ ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ, ಪ್ರಧಾನಿ ಮೋದಿ, ಬಿಜೆಪಿ ಮತ್ತು ಅದಾನಿ ಆರೋಪಗಳನ್ನು ನಿರಾಕರಿಸಿದ್ದಾರೆ.


