ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ (ಕೈನಿಂದ ಮಲ ಬಾಚುವುದು) ಮಾಡುತ್ತಿರುವವರು ಶೇ.90ರಷ್ಟು ಜನ ಒಂದೇ ಜಾತಿಯವರಾಗಿದ್ದಾರೆ. ಒಂದೇ ಜಾತಿಯವರು ಈ ಕೆಲಸ ಮಾಡುತ್ತಿರುವುದು ಏಕೆ ಎಂಬುವುದು ಪ್ರಶ್ನೆಯಾಗಿದೆ ಎಂದು ಪ್ರಶ್ನಿಸಿದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, “ಭಾರತದಲ್ಲಿ ಜಾರಿಗೆ ತಂದಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ” ಎಂದು ಬೇಸರ ಹೊರಹಾಕಿದರು.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿವಿಯ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ, ಸಫಾಯಿ ಕರ್ಮಚಾರಿ ಕಾವಲು ಸಮಿತಿ, ತಮಟೆ, ಸಖಿ ಟ್ರಸ್ಟ್ ಸಹಯೋಗದೊಂದಿಗೆ ಮಲ ಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013ರ ಅನುಷ್ಠಾನ ಮತ್ತು ಸವಾಲುಗಳು ಕುರಿತ ‘ರಾಷ್ಟೀಯ ಸಮಾವೇಶ’ದಲ್ಲಿ ಅವರು ಮಾತನಾಡಿದರು.
“ಮ್ಯಾನುಯಲ್ ಸ್ಕ್ಯಾವೆಂಜರ್ ವೃತ್ತಿಗೂ ಮತ್ತು ಜಾತಿಗೆ ನೇರ ಸಂಬಂಧವಿದೆ; ವಂಶ ಪಾರಂಪರಿಕವಾಗಿ ಕೆಲವೇ ಕೆಲವು ಜಾತಿಗಳು ಈ ವೃತ್ತಿಯನ್ನುಮಾಡುತ್ತಿದ್ದಾರೆ. ಅದರಲ್ಲೂ, ಶೇ.90ರಷ್ಟು ಜನ ಒಂದೇ ಜಾತಿಯವರಾಗಿದ್ದಾರೆ. ಕೇವಲ ಒಂದೇ ಜಾತಿಯವರು ಈ ಕೆಲಸ ಮಾಡುತ್ತಿರುವುದು ಏಕೆ ಎಂಬುವುದು ಪ್ರಶ್ನೆಯಾಗಿದೆ” ಎಂದು ಹೇಳಿದರು.
“ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದ್ದರೂ ಮಲಹೊರುವ ಪದ್ಧತಿ ಜೀವಂತವಾಗಿದೆ. ಇಂದು ಭಾರತವು ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಯಾಗುತ್ತಿದ್ದರೂ ಈ ರೀತಿಯ ವೃತ್ತಿಗಳನ್ನು ಯಾಕೆ ಯಾಂತ್ರೀಕರಣಗೊಳಿಸುತ್ತಿಲ್ಲ? 2013ರ ಕಾಯ್ದೆ ಅನುಸಾರ ಸಮಗ್ರವಾದ ಸಮೀಕ್ಷೆಯನ್ನು ಸರಕಾರಗಳು ಕೈಗೊಳ್ಳಬೇಕು. ಕಾಯ್ದೆಯಡಿಯಲ್ಲಿ ಸಮಗ್ರ ಪುನರ್ವಸತಿಯನ್ನು ನೀಡಬೇಕು; ಜನರೂ ಸಹ ತಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಬೇಕು. ಅನಿವಾರ್ಯತೆಗಳಿದ್ದರೂ ಈ ವೃತ್ತಿಯನ್ನು ಮಾಡಬಾರದು; ಇತರೆ ಉದ್ಯೋಗಳನ್ನು ಆಯ್ಕೆಮಾಡಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು” ಎಂದು ಸಲಹೆ ನೀಡಿದರು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞೆ ಅಶ್ವಿನಿ ಕೆ.ಪಿ. ಮಾತನಾಡಿ, “ಮ್ಯಾನುಯಲ್ ಸ್ಕ್ಯಾವೆಂಜರ್ ಕುರಿತು ಅಂತರರಾಷ್ಟ್ರೀಯಮಟ್ಟದಲ್ಲಿ ಚರ್ಚಿಸಬೇಕಾಗುತ್ತದೆ; ನಾವೆಲ್ಲರೂ ಅದಕ್ಕೆ ಪೂರಕವಾಗಿ ಕೆಲಸ ಮಾಡೋಣ. ಭಾರತದಲ್ಲಿ ಜಾತಿ ಆಧಾರಿತ ವೃತ್ತಿಗಳಿಂದ ನಾವು ಹೊರ ಬರಬೇಕಾಗಿದೆ. ಅಂತರರಾಷ್ಟ್ರೀಯಮಟ್ಟದಲ್ಲಿ ಇದೇ ರೀತಿಯ ತಾರತಮ್ಯಗಳನ್ನು ಚರ್ಚಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ನಾವು ಭಾರತದಲ್ಲಿರುವ ಜಾತಿ ಆಧಾರಿತವಿಷಯಗಳನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಲ್ಲಿ ಮತ್ತು ವಿಶ್ವಸಂಸ್ಥೆಯಲ್ಲಿ ಚರ್ಚಿಸಲು ಪ್ರಯತ್ನಿಸಬೇಕಾಗಿದೆ” ಎಂದು ತಿಳಿಸಿದರು.
ಸಮಾವೇಶದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಸಾರ್ವಜನಿಕ ನೀತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಬಾಬು ಮ್ಯಾಥೂ, ಪ್ರಾಧ್ಯಾಪಕ ಚಂದ್ರಶೇಖರ್, ಹಿರಿಯ ಸಾಹಿತಿ ಡಾ.ಎಲ್.ಹನುಮಂತಯ್ಯ ಮತ್ತು ದು. ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ; ಮುಡಾ ಪ್ರಕರಣ| ಸಿಎಂ ಸಿದ್ದರಾಮಯ್ಯಗೆ ಕರ್ನಾಟಕ ಲೋಕಾಯುಕ್ತರಿಂದ ‘ಕ್ಲೀನ್ ಚಿಟ್’


