ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ- 2013ರ ಅಡಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರವಿದೆ ಎಂದು ತೀರ್ಪು ನೀಡಿದ್ದ ಲೋಕಪಾಲ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಗುರುವಾರ (ಫೆ.20) ತಡೆ ನೀಡಿದೆ.
ಲೋಕಪಾಲ್ ಆದೇಶ ‘ತುಂಬಾ ಕಳವಳಕಾರಿ’ ಎಂದಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಲೋಕಪಾಲ್ ರಿಜಿಸ್ಟ್ರಾರ್‌ಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ವಿಶೇಷ ಪೀಠವು ನೋಟಿಸ್ ಜಾರಿಗೊಳಿಸಿ, ಕೇಂದ್ರ ಸರ್ಕಾರ, ಲೋಕಪಾಲ್ ರಿಜಿಸ್ಟ್ರಾರ್ ಮತ್ತು ಹಾಲಿ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ದೂರು ದಾಖಲಿಸಿರುವ ವ್ಯಕ್ತಿಯಿಂದ ಪ್ರತಿಕ್ರಿಯೆ ಕೋರಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೈಕೋರ್ಟ್ ನ್ಯಾಯಾಧೀಶರು ಎಂದಿಗೂ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ-2013 ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಅಭಯ್ ಎಸ್ ಓಕಾ ಅವರನ್ನೂ ಒಳಗೊಂಡ ಪೀಠವು, ದೂರುದಾರರು ನ್ಯಾಯಾಧೀಶರ ಹೆಸರನ್ನು ಬಹಿರಂಗಪಡಿಸದಂತೆ ತಡೆಯಾಜ್ಞೆ ನೀಡಿದೆ ಮತ್ತು ಅವರು ಸಲ್ಲಿಸಿದ ದೂರನ್ನು ಗೌಪ್ಯವಾಗಿಡಲು ನಿರ್ದೇಶಿಸಿದೆ. ಆಕ್ಷೇಪಾರ್ಹ ಆದೇಶಕ್ಕೆ ತಡೆಯಾಜ್ಞೆ ನೀಡುತ್ತಿದ್ದೇವೆ ಎಂದು ಹೇಳಿದೆ.
ಲೋಕಪಾಲ್ ಜನವರಿ 27 ರಂದು ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.
ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಷಯವನ್ನು ನಿರ್ವಹಿಸುವಲ್ಲಿ ಪೀಠಕ್ಕೆ ಸಹಾಯ ಮಾಡಲು ಬಯಸುವುದಾಗಿ ಹೇಳಿದ್ದಾರೆ. ಲೋಕ್ ಪಾಲ್ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳ ನಿರ್ದೇಶನ ಅನುಸಾರ ಮಾರ್ಚ್ 18 ರಂದು ಈ ವಿಷಯವನ್ನು ಮತ್ತೆ ವಿಚಾರಣೆಗೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ.
“ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಈ ವಿಷಯವು ಬಹಳ ಮಹತ್ವದ್ದಾಗಿರುವುದರಿಂದ” ಸಿಬಲ್ ಮತ್ತು ಮತ್ತೊಬ್ಬ ಹಿರಿಯ ವಕೀಲರು ನ್ಯಾಯಾಲಯಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
“ಲೋಕಪಾಲ್ ಅಧಿಕಾರಕ್ಕೆ ಮಿತಿ ಇದೆ. ಈ ಆದೇಶವನ್ನು ನಾವು ತಡೆಹಿಡಿದಿದ್ದೇವೆ. ಈ ಆದೇಶದ ಪರಿಣಾಮಗಳೇನು ಎಂದು ಅವರಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ. ಅವರಿಗೆ ಇದು ಅರ್ಥವಾಗದಿದ್ದರೆ, ನಾವು ಇಲ್ಲಿದ್ದೇವೆ” ಎಂದು ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ.
ಹೈಕೋರ್ಟ್‌ನ ಹಾಲಿ ಹೆಚ್ಚುವರಿ ನ್ಯಾಯಾಧೀಶರ ವಿರುದ್ಧ ದಾಖಲಾಗಿದ್ದ ಎರಡು ದೂರುಗಳ ಮೇರೆಗೆ ಲೋಕಪಾಲ್ ಆದೇಶ ನೀಡಿತ್ತು.
ಖಾಸಗಿ ಕಂಪನಿಯೊಂದು ದೂರುದಾರರ ವಿರುದ್ಧ ಹೂಡಿದ್ದ ಮೊಕದ್ದಮೆಯನ್ನು ನಿರ್ವಹಿಸಬೇಕಿದ್ದ ರಾಜ್ಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಅದೇ ಹೈಕೋರ್ಟ್‌ನ ನ್ಯಾಯಾಧೀಶರ ಮೇಲೆ ಅವರು ಪ್ರಭಾವ ಬೀರಿ ಆ ಸಂಸ್ಥೆಯ ಪರವಾಗಿ ಕೆಲಸ ಮಾಡಿದ್ದಾರೆ ಎಂದು ದೂರುಗಳಲ್ಲಿ ಆರೋಪಿಸಲಾಗಿದೆ.
ಖಾಸಗಿ ಕಂಪನಿಯು ಈ ಹಿಂದೆ ಹೈಕೋರ್ಟ್ ನ್ಯಾಯಾಧೀಶರು ವಕೀಲರ ಸಂಘದ ಸದಸ್ಯರಾಗಿ ಅಭ್ಯಾಸ ಮಾಡುತ್ತಿದ್ದಾಗ ಅವರ ಕಕ್ಷಿದಾರರಾಗಿದ್ದರು ಎಂದು ಹೇಳಲಾಗಿದೆ.
ಕೇಂದ್ರದ ಬಿಜೆಪಿ ಸರ್ಕಾರ ಬಂಡವಾಳಶಾಹಿಗಳನ್ನು ಉತ್ತೇಜಿಸುತ್ತಿದೆ – ರಾಹುಲ್ ಗಾಂಧಿ


