ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ನ್ಯಾಯಾಲಯ ಮಾಜಿ ಕೌನ್ಸಿಲರ್ ಒಬ್ಬರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿದೆ.
ಶಫೀಕ್ ಅನ್ಸಾರಿ (58) ಖುಲಾಸೆಗೊಂಡ ವ್ಯಕ್ತಿ. ವರದಿಗಳ ಪ್ರಕಾರ, ಸ್ಥಳೀಯಾಡಳಿತ ಅತಿಕ್ರಮಣ ತೆರವಿನ ಭಾಗವಾಗಿ ಮಹಿಳೆಯ ಮನೆಯನ್ನು ಕೆಡವಿತ್ತು. ತನ್ನ ಮನೆ ಕೆಡವಲು ಶಫೀಕ್ ಅನ್ಸಾರಿ ದೂರು ನೀಡಿರುವುದೇ ಕಾರಣ ಎಂಬ ವೈಷಮ್ಯದಲ್ಲಿ ಮಹಿಳೆ ಸುಳ್ಳು ಅತ್ಯಾಚಾರ ದೂರು ದಾಖಲಿಸಿದ್ದರು.
ಮಾರ್ಚ್ 2021ರಲ್ಲಿ ಮಹಿಳೆ ಅತ್ಯಾಚಾರ ದೂರು ದಾಖಲಿಸಿದ್ದರು. ಇದಾಗಿ 10 ದಿನಗಳ ಒಳಗೆ ಸರ್ಕಾರ ಶಫೀಕ್ ಅನ್ಸಾರಿ ಅವರ ಮನೆಯನ್ನು ಕೆಡವಿತ್ತು. ಇದೀಗ ನಿರಪರಾಧಿಯಾಗಿರುವ ಅವರು ಸುಖಾಸುಮ್ಮನೆ ಮನೆ ಕಳೆದುಕೊಂಡಂತಾಗಿದೆ.
ಶಿಕ್ಷೆಯ ಭಾಗವಾಗಿ ಮನೆ ಕೆಡವಲು ಅವಕಾಶ ನೀಡುವ ಯಾವುದೇ ನಿಬಂಧನೆಗಳು ಭಾರತೀಯ ಕಾನೂನಿನಲ್ಲಿ ಇಲ್ಲ. ಆದಾಗ್ಯೂ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಸರ್ಕಾರಗಳು ಕೇವಲ ಆರೋಪ ಕೇಳಿ ಬಂದ ತಕ್ಷಣವೇ ಆರೋಪಿಗಳ ಮನೆಗಳನ್ನು ಕೆಡವುವ ಪರಿಪಾಠವಿದೆ. ಇದು ಮುಸ್ಲಿಮರನ್ನು ಗುರಿಯಾಗಿಸುವ ಒಂದು ಅಸ್ತ್ರವಾಗಿ ಮಾರ್ಪಟ್ಟಿದೆ.
ದೋಷಮುಕ್ತಗೊಂಡಿರುವ ಬಳಿಕ ಮಾತನಾಡಿರುವ ಶಫೀಕ್ ಅನ್ಸಾರಿ “ನಾನು ಕಷ್ಟಪಟ್ಟು ಸಂಪಾದಿಸಿದ ಉಳಿತಾಯದಿಂದ 4,000 ಚದರ ಅಡಿ ಭೂಮಿಯಲ್ಲಿ ಮನೆ ನಿರ್ಮಿಸಿದ್ದೆ. ಈಗ, ಕೇವಲ ಅವಶೇಷಗಳು ಮಾತ್ರ ಉಳಿದಿವೆ. ನಾವು ನನ್ನ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ನಮ್ಮ ಬಳಿ ಮನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಇತ್ತು. ಆದರೂ, ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮನೆ ಕೆಡವಿದರು. ದಾಖಲೆಗಳನ್ನು ತೋರಿಸಲು ಮತ್ತು ಏನೂ ಮಾತನಾಡಲು ನಮಗೆ ಅವಕಾಶ ಕೊಟ್ಟಿರಲಿಲ್ಲ. ಬಹಳ ಸುಲಭವಾಗಿ ನಮ್ಮ ಮನೆ ಧ್ವಂಸಗೊಳಿಸಿದರು. ನನ್ನ ಕುಟುಂಬದಲ್ಲಿ ಏಳು ಜನರಿದ್ದಾರೆ. ಅವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಮೂರು ತಿಂಗಳು ಕಾಲ ಜೈಲಿನಲ್ಲಿದೆ” ಎಂದು ಭೋಪಾಲ್‌ನಿಂದ ಸುಮಾರು 130 ಕಿ.ಮೀ ದೂರದಲ್ಲಿರುವ ಸಾರಂಗಪುರ ಸ್ಥಳೀಯ ಸಂಸ್ಥೆಯ ಮಾಜಿ ಕಾರ್ಪೊರೇಟರ್ ಅನ್ಸಾರಿ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.
In March 2021, a woman accused Shafiq Ansari of rape at Sarangpur police station, Rajgarh, MP.
She alleged that Shafiq raped her when she went to his home seeking aid for her son's wedding.
She filed the FIR a month after settling her son's wedding. Shafiq's son Mohd Ahsan &… pic.twitter.com/DYfspDGCTB
— काश/if Kakvi (@KashifKakvi) February 21, 2025
ಮಗನ ಮದುವೆಗೆ ಸಹಾಯ ಮಾಡುವ ನೆಪದಲ್ಲಿ ಫೆಬ್ರವರಿ 4, 2021ರಂದು ನನ್ನನ್ನು ಅವರ ಮನೆಗೆ ಕರೆಸಿಕೊಂಡು ಶಫೀಕ್ ಅನ್ಸಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಮಾರ್ಚ್ 4, 2021ರಂದು ನೀಡಿದ್ದ ದೂರಿನಲ್ಲಿ ಮಹಿಳೆ ಆರೋಪಿಸಿದ್ದರು.
ಅನ್ಸಾರಿ ಅವರ ಮನೆಯನ್ನು 13 ಮಾರ್ಚ್ 2021ರಂದು ಸರ್ಕಾರ ಕೆಡವಿತ್ತು. ಆ ಸಂದರ್ಭವನ್ನು ಸ್ಮರಿಸಿದ ಅನ್ಸಾರಿ “ಅಂದು ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಬುಲ್ಡೋಝರ್‌ನೊಂದಿಗೆ ಅಧಿಕಾರಿಗಳು ಬಂದರು. ಏನಾಗುತ್ತಿದೆ ಎಂದು ನನ್ನ ಮನೆಯವರಿಗೆ ಅರ್ಥವಾಗುವ ಮೊದಲೇ, ಅವರು ಮನೆಯನ್ನು ಕೆಡವಿ ಆಗಿತ್ತು. ನಾನು ಆಗ ತಲೆಮರೆಸಿಕೊಂಡಿದ್ದೆ. ಮರುದಿನ ಪೊಲೀಸರ ಮುಂದೆ ಶರಣಾದೆ” ಎಂದಿದ್ದಾರೆ.
ವರದಿಗಳ ಪ್ರಕಾರ, ಶಫೀಕ್ ಅನ್ಸಾರಿ ಅವರ ಮಗ ಮತ್ತು ಸಹೋದರ ವಿರುದ್ದ ಅತ್ಯಾಚಾರ ದೂರು ದಾಖಲಾಗಿತ್ತು. ಫೆಬ್ರವರಿ 14ರಂದು ಎಲ್ಲರನ್ನೂ ದೋಷಮುಕ್ತಗೊಳಿಸಿ ರಾಜ್‌ಗಢ ಜಿಲ್ಲೆಯ ಮೊದಲ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಿತ್ರೇಂದ್ರ ಸಿಂಗ್ ಸೋಲಂಕಿ ತೀರ್ಪು ಪ್ರಕಟಿಸಿದ್ದಾರೆ.
ತೀರ್ಪು ನೀಡುವ ವೇಳೆ “ಮಹಿಳೆ ಮತ್ತು ಆಕೆಯ ಪತಿ ನೀಡಿರುವ ಸಾಕ್ಷ್ಯಗಳಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದಿದೆ. ಮನೆ ಸಮೀಪವೇ ಪೊಲೀಸ್ ಠಾಣೆ ಇದ್ದರೂ ಆಪಾದಿತ ಅತ್ಯಾಚಾರದ ಮಹಿಳೆ ತಕ್ಷಣ ದೂರು ನೀಡಿರಲಿಲ್ಲ. ಆಕೆಯ ಮಗನ ಮದುವೆ ಮುಗಿದು 15 ದಿನಗಳವರೆಗೆ ಪತಿಗಾಗಲಿ, ಮಕ್ಕಳಿಗಾಗಲಿ ಅತ್ಯಾಚಾರ ನಡೆದಿದೆ ಎಂದು ತಿಳಿಸಿರಲಿಲ್ಲ. ಈ ವಿಳಂಬಕ್ಕೆ ಸಮಂಜಸವಾದ ಕಾರಣವನ್ನು ಅವರು ನ್ಯಾಯಾಲಯಕ್ಕೆ ನೀಡಿಲ್ಲ. ದೂರುದಾರರ ಮಾದರಿಗಳಲ್ಲಿ ಯಾವುದೇ ಮಾನವ ವೀರ್ಯ ಕಂಡು ಬಂದಿಲ್ಲ. ವೈದ್ಯಕೀಯ ಮತ್ತು ವೈಜ್ಞಾನಿಕ ಪುರಾವೆಗಳಿಂದ ಅತ್ಯಾಚಾರವನ್ನು ದೃಢೀಕರಿಸಲು ಸಾಧ್ಯವಾಗಿಲ್ಲ” ಎಂದು ನ್ಯಾಯಾಧೀಶರು ಹೇಳಿದ್ದಾರೆ ಎಂದು ವರದಿಯಾಗಿದೆ.
ಸುಳ್ಳು ಆರೋಪ ಪರಿಗಣಿಸಿ ತನ್ನ ಮನೆ ಕೆಡವಿದ್ದ ಸರ್ಕಾರದ ವಿರುದ್ದ ನ್ಯಾಯಾಲಯದ ಮೊರೆ ಹೋಗಲು ಅನ್ಸಾರಿ ಯೋಜಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
90 ವರ್ಷಗಳಷ್ಟು ಹಳೆಯ ‘ನಮಾಜ್ ವಿರಾಮ’ ಸಂಪ್ರದಾಯಕ್ಕೆ ಅಂತ್ಯ ಹಾಡಿದ ಅಸ್ಸಾಂ ವಿಧಾನಸಭೆ


