ಟಿವಿ ವಾಹಿನಿಯಲ್ಲಿ ಚರ್ಚೆಯ ಸಂದರ್ಭ ನೀಡಿದ ದ್ವೇಷದ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಪಿ.ಸಿ ಜಾರ್ಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ಶುಕ್ರವಾರ (ಫೆ.21) ತಿರಸ್ಕರಿಸಿದ್ದು, “ಜಾಮೀನು ಕೊಟ್ಟರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ” ಎಂದು ಹೇಳಿದೆ.
ಜನವರಿ 5, 2025ರಂದು ಟಿವಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಪಿ.ಸಿ ಜಾರ್ಜ್, “ಭಾರತದಲ್ಲಿರುವ ಎಲ್ಲಾ ಮುಸ್ಲಿಮರು ಭಯೋತ್ಪಾದಕರು ಮತ್ತು ಕೋಮುವಾದಿಗಳು. ಭಾರತದಲ್ಲಿ ಭಯೋತ್ಪಾದಕರಲ್ಲದ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲ. ಮುಸ್ಲಿಮರು ದೇಶದ ಸಂಪತ್ತನ್ನು ಲೂಟಿ ಮಾಡುವ ಲೂಟಿಕೋರರು. ಮುಸ್ಲಿಂ ರಾಷ್ಟ್ರವನ್ನು ರಚಿಸಲು ಮುಸ್ಲಿಮರು ಲಕ್ಷಾಂತರ ಹಿಂದೂಗಳು ಮತ್ತು ಕ್ರಿಶ್ಚಿಯನ್ನರನ್ನು ಹತ್ಯೆ ಮಾಡಿದ್ದಾರೆ. ಎಲ್ಲಾ ಭಾರತೀಯ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು. ಎಲ್ಲಾ ಮುಸ್ಲಿಮರು ಕೋಮು ರಾಕ್ಷಸರು ಮತ್ತು ದುಷ್ಟರು” ಎಂದು ಹೇಳಿದ್ದರು.
“ರಾಜಕಾರಣಿಗಳು ಸಮಾಜಕ್ಕೆ ಮಾದರಿಯಾಗಿರಬೇಕು. ಧರ್ಮ, ಜಾತಿ ಇತ್ಯಾದಿಗಳನ್ನು ಆಧರಿಸಿ ಹೇಳಿಕೆಗಳನ್ನು ನೀಡುವ ಇಂದಿನ ಪ್ರವೃತ್ತಿಯನ್ನು ಚಿಗುರಿನಲ್ಲೇ ಕಿತ್ತೊಗೆಯಬೇಕು. ಏಕೆಂದರೆ ಅವು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ” ಎಂದು ಜಾಮೀನು ನಿರಾಕರಿಸುವ ವೇಳೆ ನ್ಯಾಯಾಲಯ ಹೇಳಿದೆ.
“ಇಂತಹ (ದ್ವೇಷದ) ಹೇಳಿಕೆಗಳನ್ನು ನೀಡುವ ಅಪರಾಧಿಗೆ ಕೇವಲ ದಂಡ ವಿಧಿಸುವ ಮೂಲಕ ತಪ್ಪಿಸಿಕೊಳ್ಳಲು ಅವಕಾಶ ನೀಡಬೇಕೇ ಎಂಬುದರ ಬಗ್ಗೆ ಸಂಸತ್ತು ಮತ್ತು ಕಾನೂನು ಆಯೋಗ ತೀರ್ಮಾನಿಸಬೇಕು” ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಾರ್ಜ್ ಅವರಂತೆ ದ್ವೇಷದ ಹೇಳಿಕೆಗಳನ್ನು ನೀಡುವ ಪ್ರಕರಣಗಳಲ್ಲಿ ಕಡ್ಡಾಯವಾಗಿ ಜೈಲು ಶಿಕ್ಷೆ ವಿಧಿಸುವ ಅಗತ್ಯತೆಯ ಬಗ್ಗೆ ಹೈಕೋರ್ಟ್ ಸಂಸತ್ ಮತ್ತು ಕಾನೂನು ಆಯೋಗದ ಗಮನ ಸೆಳೆದಿದೆ.
ಐಪಿಸಿ ಸೆಕ್ಷನ್ 153 ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ಮತ್ತು 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಅಪರಾಧಗಳಿಗೆ ಕಾರಣವಾಗುವ ಯಾವುದೇ ಹೇಳಿಕೆಯನ್ನು ನೀಡಬಾರದು ಎಂಬ ಷರತ್ತಿನ ಮೇಲೆ 2022ರಲ್ಲಿ ಪಿ.ಸಿ ಜಾರ್ಜ್ ಅವರಿಗೆ ಎರಡು ಪ್ರಕರಣಗಳಲ್ಲಿ ಹೈಕೋರ್ಟ್ ಜಾಮೀನು ನೀಡಿತ್ತು ಎಂದು ನ್ಯಾಯಮೂರ್ತಿ ಪಿ.ವಿ ಕುನ್ಹಿಕೃಷ್ಣನ್ ಹೇಳಿದ್ದಾರೆ.
ಐಪಿಸಿ ಸೆಕ್ಷನ್‌ಗಳಾದ 153 ಎ ಮತ್ತು 295ಎ ಹೊಸ ಕ್ರಿಮಿನಲ್ ಕಾನೂನು ಬಿಎನ್‌ಎಸ್ ಅಡಿ ಕ್ರಮವಾಗಿ ಸೆಕ್ಷನ್ 196 ಮತ್ತು 299 ಆಗಿದೆ. ಇದರಡಿ ಪಿ.ಸಿ ಜಾರ್ಜ್ ವಿರುದ್ದದ ಇತ್ತೀಚಿನ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಜಾರ್ಜ್ ಅವರು 2022ರಲ್ಲಿ ನೀಡಲಾದ ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ, ಈಗ ಜಾಮೀನು ಕೊಟ್ಟರೆ ‘ಸಮಾಜಕ್ಕೆ ತಪ್ಪು ಸಂದೇಶ’ ನೀಡಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
“ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದರೂ, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಸಿಗುತ್ತದೆ ಎಂದು ಜನರು ಭಾವಿಸಬಹುದು. ಅಂತಹ ಸಂದೇಶ ಸಮಾಜಕ್ಕೆ ಹೋಗಬಾರದು. ಆದ್ದರಿಂದ, ಅರ್ಜಿದಾರರು (ಜಾರ್ಜ್) ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದು ನಾನು ಪರಿಗಣಿಸುತ್ತೇನೆ. ಈ ಜಾಮೀನು ಅರ್ಜಿ ಸಲ್ಲಿಸಲು ಯಾವುದೇ ಅರ್ಹತೆ ಅವರಿಗೆ ಇಲ್ಲ. ಹಾಗಾಗಿ, ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ತಿಳಿಸಿದ್ದಾರೆ.
“ಕೋಮು ಸೌಹಾರ್ದತೆಗೆ ದಕ್ಕೆ ತರುವಂತಹ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ ನಂತರ ಜಾರ್ಜ್ ಅವರು ಕ್ಷಮೆಯಾಚಿಸಿದರೆ, ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದಿದ್ದಾರೆ.
“ಒಂದು ಚಾನೆಲ್‌ನ ನೇರ ಪ್ರಸಾರದ ಚರ್ಚೆಯಲ್ಲಿ ಭಾಗವಹಿಸಿದ್ದೇನೆ, ಲಕ್ಷಾಂತರ ಜನರು ಇದನ್ನು ವೀಕ್ಷಿಸುತ್ತಿದ್ದಾರೆ ಎಂಬ ಪರಿಜ್ಞಾನ ಅರ್ಜಿದಾರರಿಗೆ (ಜಾರ್ಜ್) ಇರಬೇಕಿತ್ತು. ಅಲ್ಲದೆ, ಮರುದಿನ ಫೇಸ್‌ಬುಕ್‌ನಲ್ಲಿ ಕ್ಷಮೆಯಾಚಿಸಿ ಪೋಸ್ಟ್ ಹಾಕುವುದು ಅಲ್ಲ. ಆದ್ದರಿಂದ, ಅರ್ಜಿದಾರರು ಕ್ಷಮೆಯಾಚಿಸಿದ ಮಾತ್ರಕ್ಕೆ ಅಪರಾಧ ಅಳಿಸಿಹೋಗುತ್ತದೆ ಎಂಬುದನ್ನು ನಾನು ಒಪ್ಪಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಕುನ್ಹಿಕೃಷ್ಣನ್ ಹೇಳಿದ್ದಾರೆ.
ಜಾರ್ಜ್ ಪರ ವಕೀಲರು ವಾದ ಮಂಡಿಸಿ, ಕಸ್ಟಡಿ ವಿಚಾರಣೆ ಮಾಡುವ ಅಗತ್ಯವಿಲ್ಲ ಮತ್ತು ಅವರ ಮೇಲೆ ದಾಖಲಾಗಿರುವ ಅಪರಾಧಗಳಿಗೆ ಏಳು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ಇದೆ. ಆದ್ದರಿಂದ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಹುದು” ಎಂದಿದ್ದಾರೆ.
ಆದರೆ, ಹೈಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ. “ಏಳು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ಇರುವ ಪ್ರಕರಣದಲ್ಲಿ ಕಸ್ಟಡಿ ವಿಚಾರಣೆ ಅಥವಾ ಗರಿಷ್ಠ ಜೈಲು ಶಿಕ್ಷೆಯ ಅಗತ್ಯವಿಲ್ಲದಿದ್ದರೆ ನಿಯಮಿತ ರೀತಿಯಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಸಾಧ್ಯವಿಲ್ಲ” ಎಂದಿದೆ.
“ಆರೋಪಿಯ ಪೂರ್ವಾಪರ ಮತ್ತು ಆರೋಪದ ಗಂಭೀರತೆ ಕೂಡ ನ್ಯಾಯಾಲಯ ಪರಿಗಣಿಸಬೇಕಾದ ಪ್ರಮುಖ ಅಂಶಗಳಾಗಿವೆ” ಎಂದು ಹೇಳಿದೆ.
ಅರ್ಜಿದಾರ ( ಜಾರ್ಜ್) ನೀಡಿದ ಹೇಳಿಕೆಗಳ ವಿಡಿಯೋ ನೋಡಿದರೆ, ಪ್ರಾಥಮಿಕವಾಗಿ ಬಿಎನ್‌ಎಸ್‌ನ ಸೆಕ್ಷನ್ 196 ಮತ್ತು 299 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ” ಹೈಕೋರ್ಟ್ ತಿಳಿಸಿದೆ.
ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಪಿಸಿ ಜಾರ್ಜ್ ವಿರುದ್ದ ಮುಸ್ಲಿಂ ಯೂತ್ ಲೀಗ್ ನಾಯಕ ಮುಹಮ್ಮದ್ ಶಿಹಾಬ್ ಅವರು ಎರಟ್ಟುಪೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಕೊಟ್ಟಾಯಂ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಅರ್ಜಿಯನ್ನು ತಿರಸ್ಕರಿಸಿದ ನಂತರ ಪಿ.ಸಿ ಜಾರ್ಜ್ ಹೈಕೋರ್ಟ್ ಮೊರೆ ಹೋಗಿದ್ದರು.
ಜಾರ್ಜ್ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 196(1)(ಎ) ಮತ್ತು 299 ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(ಒ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅತ್ಯಾಚಾರ ಪ್ರಕರಣ | ಬಿಜೆಪಿ ಸರ್ಕಾರ ಮನೆ ಧ್ವಂಸಗೊಳಿಸಿದ್ದ ಆರೋಪಿ ಖುಲಾಸೆ


