ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿಯುತ ವ್ಯಕ್ತಿಗಳಿಂದಲೇ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಶುಕ್ರವಾರ (ಫೆ.21) ಹೇಳಿದ್ದಾರೆ.
ನ್ಯಾಯಮೂರ್ತಿ ಸುನಂದಾ ಭಂಡಾರೆ ಪ್ರತಿಷ್ಠಾನ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸುನಂದಾ ಭಂಡಾರೆ ಸ್ಮಾರಕ 29ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
“ಭಾರತದ ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿಯುತ ವ್ಯಕ್ತಿಗಳು ಅದನ್ನು ತಿರಸ್ಕರಿಸುವುದನ್ನು ನಾವು ನೋಡುತ್ತಿದ್ದೇವೆ. ಇದನ್ನು ಔಪಚಾರಿಕ ಮತ್ತು ಅನೌಪಚಾರಿಕವಾಗಿ ಹಲವು ವಿಧಗಳಲ್ಲಿ ಮಾಡಲಾಗುತ್ತಿದೆ. ಔಪಚಾರಿಕ ವಿಧಕ್ಕೆ ಪೌರತ್ವ ಕಾಯ್ದೆಯ ತಿದ್ದುಪಡಿ ಒಂದು ಉದಾಹರಣೆ. ಈ ಕಾಯ್ದೆ ಕೆಲವು ಧಾರ್ಮಿಕ ಸಮುದಾಯಗಳಿಗೆ ಮಾತ್ರ ತ್ವರಿತ ಪೌರತ್ವವನ್ನು ನೀಡುತ್ತದೆ” ಎಂದು ಇಂದಿರಾ ಜೈಸಿಂಗ್ ಹೇಳಿದ್ದಾರೆ.
“ಜಾತ್ಯತೀತ ಸಂವಿಧಾನದ ಅಡಿಯಲ್ಲಿ ಹಿಂದೂ ರಾಷ್ಟ್ರ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಬಹುಸಂಖ್ಯಾತರ ಸಿದ್ಧಾಂತಕ್ಕೆ ಅನುಗುಣವಾಗಿ ಕಾಯ್ದೆಗಳನ್ನು ಮರು ವ್ಯಾಖ್ಯಾನಿಸುವುದು ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಗೆ ಅಪಾಯಕಾರಿ. ಧರ್ಮ, ಶ್ರದ್ಧೆಗಳು ಕಾನೂನು ವ್ಯವಸ್ಥೆಯ ಆಧಾರವಾಗಲು ಸಾಧ್ಯವಿಲ್ಲ. ಭಾರತಕ್ಕೆ ಭದ್ರತೆ ಮತ್ತು ಸಮಗ್ರತೆಯನ್ನು ಕಲ್ಪಿಸುವ ಏಕೈಕ ಖಾತರಿ ಜಾತ್ಯತೀತತೆ ಆಗಿರುವುದರಿಂದ ಅದನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದು ನನ್ನ ಅಭಿಪ್ರಾಯ” ಎಂದಿದ್ದಾರೆ.
ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮವನ್ನು (ಬಿಎಸ್‌ಎ) ಟೀಕಿಸಿದ ಇಂದಿರಾ ಜೈಸಿಂಗ್, “ವೈವಾಹಿಕ ಅತ್ಯಾಚಾರದಂತಹ ವಿಷಯಗಳನ್ನು ‘ವಸಾಹತುಶಾಹಿಯಿಂದ ಮುಕ್ತಗೊಳಿಸುವಲ್ಲಿ’ ಹೊಸ ಕಾನೂನುಗಳು ವಿಫಲವಾಗಿವೆ” ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತ ಸಮುದಾಯಗಳನ್ನು ವಿಶೇಷವಾಗಿ ಗುರಿಯಾಗಿಟ್ಟುಕೊಂಡು ದೇಶದಾದ್ಯಂತ ಜಾರಿಗೆ ತರಲಾದ ಮತಾಂತರ ವಿರೋಧಿ ಕಾನೂನುಗಳ ಬಗ್ಗೆಯೂ ಹಿರಿಯ ವಕೀಲೆ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತೀಯ ನ್ಯಾಯಾಲಯಗಳಲ್ಲಿ ಇತ್ತೀಚೆಗೆ ಕಾಣುತ್ತಿರುವ ನ್ಯಾಯಯುತತೆ ಮತ್ತು ನಿಷ್ಪಕ್ಷಪಾತದ ಕೊರತೆಯ ಬಗ್ಗೆ ಗಮನಸೆಳೆದ ಇಂದಿರಾ ಜೈಸಿಂಗ್, “ಅಲಹಾಬಾದ್ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಶೇಖರ್ ಯಾದವ್ ಮಾಡಿದ ದ್ವೇಷ ಭಾಷಣ, ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕೆ ಅನುಮತಿ ಕೋರಿದಾಗ, “ನಿನ್ನ ಅಜ್ಜಿ ನಿನ್ನ ವಯಸ್ಸಿನಲ್ಲಿ ಹೇಗೆ ಹೆರಿಗೆ ಮಾಡಿಸುತ್ತಿದ್ದರು ಎಂದು ಕೇಳಿ ಬಾ” ಎಂಬುವುದಾಗಿ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರೊಬ್ಬರು ಹೇಳಿರುವುದು ಇತ್ಯಾದಿ ಸೇರಿವೆ” ಎಂದಿದ್ದಾರೆ.
ಮುಂದುವರಿದು, “ನ್ಯಾಯಾಧೀಶರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲು ದೈವಿಕ ಮಾರ್ಗದರ್ಶನವನ್ನು ಹುಡುಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ಸಂವಿಧಾನ ವಿರೋಧಿಯಾಗಿದೆ. ನಾನು ಭಾರತದ ಸಂವಿಧಾನವನ್ನು ದೃಢೀಕರಿಸಲು ಇಲ್ಲಿ ನಿಂತಿದ್ದೇನೆ ಎಂದು ಹೇಳುವ ಮೂಲಕ ಮಾತು ಮುಗಿಸಲು ಬಯಸುತ್ತೇನೆ” ಎಂದು ಇಂದಿರಾ ಜೈಸಿಂಗ್ ಭಾಷಣ ಕೊನೆಗೊಳಿಸಿದ್ದಾರೆ.
‘ಭಾರತದ ಆಧುನಿಕ ಸಾಂವಿಧಾನಿಕತೆ’ ಎಂಬ ಉಪನ್ಯಾಸದ ವಿಷಯವನ್ನು ‘ಅತ್ಯಂತ ಮಹತ್ವದ್ದು’ ಎಂದು ಕರೆದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ, “ಸಂವಿಧಾನವನ್ನು ಹೊಂದಿರುವುದು ಮತ್ತು ಸಾಂವಿಧಾನಿಕತೆಯನ್ನು ಆಚರಿಸುವುದರ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ.
ಕಾನೂನಿನ ಆಳ್ವಿಕೆಯ ಮಹತ್ವವನ್ನು ಒತ್ತಿ ಹೇಳಿದ ನ್ಯಾಯಮೂರ್ತಿ ಉಪಾಧ್ಯಾಯ, “ಸರ್ವಾಧಿಕಾರಿ ಆಡಳಿತಗಳು ಕೂಡ ಸಂವಿಧಾನವನ್ನು ಹೊಂದಿವೆ. ಆದರೆ, ಅವುಗಳಿಗೆ ಸಾಂವಿಧಾನಿಕತೆಯ ಕೊರತೆಯಿದೆ. ನನ್ನ ತಿಳುವಳಿಕೆಯಲ್ಲಿ, ಈ ಎರಡನ್ನೂ ಪ್ರತ್ಯೇಕಿಸುವುದು ಕಾನೂನಿನ ನಿಯಮ. ಸರ್ವಾಧಿಕಾರಿ ಆಡಳಿತಗಳು ಸಂವಿಧಾನವನ್ನು ಹೊಂದಿರಬಹುದು, ಆದರೆ, ಸಾಂವಿಧಾನಿಕತೆಯಿಲ್ಲ. ಜರ್ಮನಿಯಲ್ಲಿ ಮೊದಲ ಮಹಾಯುದ್ಧದ ನಂತರ ಹಿಟ್ಲರ್ ಮುನ್ನಲೆಗೆ ಬಂದಿರುವುದು ಇದಕ್ಕೆ ಅತ್ಯುತ್ತಮ ಉದಾಹರಣೆ” ಎಂದಿದ್ದಾರೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಭು ಭಕ್ರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


