ಮೀರತ್‌ನಲ್ಲಿ ಕಳವಳಕಾರಿ ಬೆಳವಣಿಗೆ ವರದಿಯಾಗಿದ್ದು, ಬಹುಪಾಲು ಹಿಂದೂಗಳೆ ವಾಸಿಸುವ ಬಡಾವಣೆಯಲ್ಲಿ ಮನೆ ಖರೀದಿಸಿದ ಮುಸ್ಲಿಂ ಕುಟುಂಬದ ವಿರುದ್ಧ ಹಿಂದುತ್ವ ಕಾರ್ಯಕರ್ತರು ಪ್ರತಿಭಡನೆ ನಡೆಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಹಿಂದುತ್ವ ಸಿದ್ಧಾಂತಗಳ ನೆರಳಿನಲ್ಲಿ, ದೇಶದ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುವ ಈ ಘಟನೆಯು ಉದ್ವಿಗ್ನತೆಯನ್ನು ಹೆಚ್ಚಿಸಿದೆ.
ದುರ್ಗಾಪುರಂ ಕಾಲೋನಿಯ ಶಿವಶಕ್ತಿ ದೇವಸ್ಥಾನದ ಬಳಿ ಇರುವ ಮನೆಯನ್ನು ಹಿಂದೂ ಕುಟುಂಬವೊಂದು ಮುಸ್ಲಿಂ ವ್ಯಕ್ತಿ ರಿಯಾಜುದ್ದೀನ್‌ಗೆ ಮಾರಾಟ ಮಾಡಿದೆ. ವ್ಯವಹಾರವು ಸಂಪೂರ್ಣವಾಗಿ ಕಾನೂನುಬದ್ಧ ಹಾಗೂ ಒಮ್ಮತದಿಂದ ಕೂಡಿದ್ದರೂ, ಸಚಿನ್ ಸಿರೋಹಿ ನೇತೃತ್ವದ ಸ್ಥಳೀಯ ಹಿಂದೂ ಸಂಘಟನೆಯ ಸದಸ್ಯರು ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಮುಸ್ಲಿಂ ಕುಟುಂಬದ ಉಪಸ್ಥಿತಿಯು ಆ ಪ್ರದೇಶದ ‘ವಾತಾವರಣವನ್ನು ತೊಂದರೆಗೊಳಿಸುತ್ತದೆ’ ಎಂದು ಹಿಂದುತ್ವವಾದಿಗಳು ಆರೋಪಿಸಿದ್ದಾರೆ.
ಈ ಪ್ರದೇಶದಲ್ಲಿ ಯಾವುದೇ ಮುಸ್ಲಿಂ ಲೇಔಟ್‌ಗಳಿಲ್ಲ ಎಂದು ಸಿರೋಹಿ ಹೇಳಿದ್ದಾರೆ. “ಇಲ್ಲಿಗೆ ಮುಸ್ಲಿಂ ಕುಟುಂಬದ ಆಗಮನವು ನಮ್ಮ ಲೇಔಟ್‌ನ ಶಾಂತಿಯುತ ಸ್ವರೂಪವನ್ನು ಹಾಳುಮಾಡುವ ಪ್ರಯತ್ನವಾಗಿದೆ” ಎಂದು ಅವರು ವಾದಿಸಿದ್ದಾರೆ.
ಹಿಂದೂ ಸಂಘಟನೆಯ ಕಾರ್ಯಕರ್ತರು ಈಗ ಪೊಲೀಸರಿಗೆ ಔಪಚಾರಿಕ ದೂರು ನೀಡಿದ್ದಾರೆ. ಮಾರಾಟವನ್ನು ಹಿಂತೆಗೆದುಕೊಳ್ಳದಿದ್ದರೆ ತಮ್ಮ ಕ್ರಮಗಳನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ. “ಪೊಲೀಸರು ಕ್ರಮ ಕೈಗೊಂಡು ಮುಸ್ಲಿಂ ಖರೀದಿದಾರರಿಂದ ಮನೆಯನ್ನು ಹಿಂದಕ್ಕೆ ಪಡೆಯದಿದ್ದರೆ, ನಾವು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತೇವೆ; ಪ್ರತಿಭಟನೆಗಳನ್ನು ನಡೆಸುತ್ತೇವೆ” ಎಂದು ಸಿರೋಹಿ ಘೋಷಿಸಿದರು.
ಇದನ್ನೂ ಓದಿ; ಕರ್ನಾಟಕದ ಬಸ್‌ಗಳಿಗೆ ಕಪ್ಪು ಬಣ್ಣ ಬಳಿದ ಉದ್ಧವ್ ಸೇನಾ ಕಾರ್ಯಕರ್ತರು; ಉಭಯ ರಾಜ್ಯಗಳ ನಡುವೆ ಸಂಚಾರ ಸೇವೆಗಳು ಸ್ಥಗಿತ


