ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಶನಿವಾರ ಸುರಂಗದ ಮೇಲ್ಛಾವಣಿ ಕುಸಿದ ನಂತರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದ್ದು, ಎಂಟು ಕಾರ್ಮಿಕರು ಇನ್ನೂ ಅದರೊಳಗೆ ಸಿಲುಕಿಕೊಂಡಿದ್ದಾರೆ.
ಸೇನೆಯು ತನ್ನ ಎಂಜಿನಿಯರ್ ಟಾಸ್ಕ್ ಫೋರ್ಸ್ (ಇಟಿಎಫ್) ಅನ್ನು ರಕ್ಷಣಾ ಕಾರ್ಯಾಚರಣೆಗಾಗಿ ತ್ವರಿತವಾಗಿ ಸಜ್ಜುಗೊಳಿಸಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಇಟಿಎಫ್ ಅಪಘಾತ ಸ್ಥಳದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕಾರ್ಯಾಚರಣೆಗಳನ್ನು ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
200 ಮೀಟರ್‌ಗಳಷ್ಟು ಅವಶೇಷಗಳಿಂದ ತುಂಬಿದ ಪ್ಯಾಚ್ ಇದೆ ಎಂದು ರಕ್ಷಣಾ ಪಡೆ ತಿಳಿಸಿದೆ. ಈ ಅವಶೇಷಗಳನ್ನು ಸ್ವಚ್ಛಗೊಳಿಸುವವರೆಗೆ, ಸಿಲುಕಿರುವ ಕಾರ್ಮಿಕರ ನಿಖರವಾದ ಸ್ಥಳವನ್ನು ಕಂಡುಹಿಡಿಯಲು ಹಾಗೂ ಅವರನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ.
“ಸುರಂಗದ 11-13 ಕಿಮೀ ನಡುವಿನ ಪ್ಯಾಚ್‌ನಲ್ಲಿ ನೀರು ತುಂಬಿರುತ್ತದೆ, ನೀರನ್ನು ತೆಗೆದುಹಾಕುವವರೆಗೆ, ಅವಶೇಷಗಳ ಶುಚಿಗೊಳಿಸುವ ಕೆಲಸ ಪ್ರಾರಂಭವಾಗುವುದಿಲ್ಲ” ಎಂದು ಎನ್‌ಡಿಆರ್‌ಎಫ್ ಉಪ ಕಮಾಂಡರ್ ಸುಖೇಂದು ಹೇಳಿದರು.
ಶ್ರೀಶೈಲಂನಿಂದ ದೇವರಕೊಂಡ ಕಡೆಗೆ ಸಾಗುವ ಶ್ರೀಶೈಲಂ ಎಡದಂಡೆ ಕಾಲುವೆಯ 14 ಕಿ.ಮೀ ಒಳಹರಿವಿನಲ್ಲಿ ಸೋರಿಕೆಯನ್ನು ಮುಚ್ಚಲು ಬಳಸಲಾಗಿದ್ದ ಕಾಂಕ್ರೀಟ್ ಭಾಗದ ಕುಸಿತದಿಂದ ಈ ಅವಘಡ ಸಂಭವಿಸಿದೆ.
ನಾಗರ್ಕರ್ನೂಲ್‌ನಲ್ಲಿ ಅಪಘಾತ ನಡೆದ ಸ್ಥಳದಲ್ಲಿದ್ದ ತೆಲಂಗಾಣ ಸಚಿವ ಎನ್. ಉತ್ತಮ್ ಕುಮಾರ್ ರೆಡ್ಡಿ ಮಾತನಾಡಿ, ಕಳೆದ ವರ್ಷ ಉತ್ತರಾಖಂಡದಲ್ಲಿ ಇದೇ ರೀತಿಯ ಘಟನೆ ನಡೆದಾಗ ರಕ್ಷಣಾ ಕಾರ್ಯಾಚರಣೆ ನಡೆಸಿದವರು ಸೇರಿದಂತೆ ರಾಜ್ಯ ಸರ್ಕಾರ ತಜ್ಞರನ್ನು ಕರೆಸಿಕೊಂಡಿದೆ ಎಂದು ಹೇಳಿದರು.
ಸಿಲುಕಿರುವ ಎಂಟು ಜನರಲ್ಲಿ ಮೂಲಸೌಕರ್ಯದ ಇಬ್ಬರು ಎಂಜಿನಿಯರ್‌ಗಳು, ಅಮೇರಿಕನ್ ಕಂಪನಿಯ ಇಬ್ಬರು ನಿರ್ವಾಹಕರು ಸೇರಿದ್ದಾರೆ. ಉಳಿದ ನಾಲ್ವರು ಕಾರ್ಮಿಕರು ಉತ್ತರ ಪ್ರದೇಶ, ಜಾರ್ಖಂಡ್, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮೂಲದವರು.
ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಕರೆ ಮಾಡಿ ಘಟನೆ ಮತ್ತು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ವಿಚಾರಿಸಿದರು. ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಮರಳಿ ತರಲು ಕೇಂದ್ರದಿಂದ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಪ್ರಧಾನಿ ಮೋದಿ ಭರವಸೆ ನೀಡಿದರು.
ಶನಿವಾರ ಬೆಳಿಗ್ಗೆ, ಸುರಂಗದ ನಿರ್ಮಾಣ ಕಾರ್ಯ ಇತ್ತೀಚೆಗೆ ಪುನರಾರಂಭವಾದ ನಂತರ ಸುಮಾರು 50 ಜನರು 200 ಮೀಟರ್ ಉದ್ದದ ಬೋರಿಂಗ್ ಯಂತ್ರದೊಂದಿಗೆ ಸುರಂಗವನ್ನು ಪ್ರವೇಶಿಸಿದರು. ಸುರಂಗದೊಳಗೆ ಕಾರ್ಮಿಕರು 14 ಕಿಲೋಮೀಟರ್ ಒಳಗೆ ಸಿಲುಕಿಕೊಂಡಿದ್ದಾರೆ.
ಅಪಘಾತದ ಸ್ಥಳದಲ್ಲಿ ದೊಡ್ಡ ಪ್ರಮಾಣದ ಮಣ್ಣು ಸಂಗ್ರಹವಾಗಿರುವುದರಿಂದ ರಕ್ಷಣಾ ತಂಡಗಳು ಡ್ರೋನ್‌ಗಳನ್ನು ಬಳಸಿಕೊಂಡು ಮುಂದೆ ಸಾಗುತ್ತಿವೆ, ಸುರಂಗದಲ್ಲಿ ಸಂಭಾವ್ಯ ಅಪಾಯಗಳನ್ನು ಗುರುತಿಸುತ್ತಿವೆ.
ಕಲ್ಲಿದ್ದಲು ಗಣಿಗಾರಿಕಾ ಘಟಕದ 19 ತಜ್ಞರ ತಂಡವು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಸ್ಥಳಕ್ಕೆ ತೆರಳಿದೆ ಎಂದು ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಾಲೀರೀಸ್ ಕಂಪನಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್ ಬಲರಾಮ್ ತಿಳಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಮತ್ತು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಬೆಳಿಗ್ಗೆ ಎಸ್‌ಎಲ್‌ಬಿಸಿ ಸುರಂಗದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಳ ಕುರಿತು ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕರೆ ಮಾಡಿ ಮಾತನಾಡಿದರು. ತೆಗೆದುಕೊಂಡ ಕ್ರಮಗಳು ಮತ್ತು ನಿರಂತರ ಜಾಗರೂಕತೆ, ಮೇಲ್ವಿಚಾರಣೆಯನ್ನು ಶ್ಲಾಘಿಸಿದರು; ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ಯಾವುದೇ ಅವಕಾಶವನ್ನು ಬಿಡದಂತೆ ಸರ್ಕಾರಕ್ಕೆ ಮವಿ ಮಾಡಿದ್ದಾರೆ.
ಇದನ್ನೂ ಓದಿ; ಮುಸ್ಲಿಂ ಕುಟುಂಬಕ್ಕೆ ಮನೆ ಮಾರಾಟ ಮಾಡುವುದನ್ನು ವಿರೋಧಿಸಿ ಹಿಂದುತ್ವ ಸಂಘಟನೆ ಪ್ರತಿಭಟನೆ


